S Shorts

ಮಕ್ಕಳೇ ಇಲ್ಲಿ ಮೇಷ್ಟ್ರು, ಪೋಷಕರೇ Students: ಕೇರಳದಲ್ಲಿ 6 ಲಕ್ಷ ಪೋಷಕರಿಗೆ ‘AI’ ಪಾಠ ಹೇಳಿಕೊಡಲು ಸಜ್ಜಾದ ಸರ್ಕಾರ!

Posted By: Sagaradventure
Updated: Feb 15, 2026 | 3:18 PM

ತಿರುವನಂತಪುರಂ: ಸಾಕ್ಷರತೆಯಲ್ಲಿ ಸದಾ ಮುಂದಿರುವ ದೇವರ ನಾಡು ಕೇರಳ ಇದೀಗ ತಂತ್ರಜ್ಞಾನ ಸಾಕ್ಷರತೆಯಲ್ಲೂ ಐತಿಹಾಸಿಕ ಹೆಜ್ಜೆಯನ್ನಿಟ್ಟಿದೆ. ‘ಸರ್ವಂ ಎಐ ಮಯಂ’ (ಎಲ್ಲೆಡೆ ಕೃತಕ ಬುದ್ಧಿಮತ್ತೆ) ಎಂಬ ವಿನೂತನ ಹೆಸರಿನಲ್ಲಿ ಬರೋಬ್ಬರಿ 6 ಲಕ್ಷ ಪೋಷಕರಿಗೆ ಎಐ (Artificial Intelligence) ತರಬೇತಿ ನೀಡುವ ಬೃಹತ್ ಅಭಿಯಾನಕ್ಕೆ ಚಾಲನೆ ನೀಡಿದೆ. ಇದು ದೇಶದಲ್ಲೇ ಅನುಷ್ಠಾನಗೊಳ್ಳುತ್ತಿರುವ ಅತಿದೊಡ್ಡ ಕೃತಕ ಬುದ್ಧಿಮತ್ತೆ ಜಾಗೃತಿ ಕಾರ್ಯಕ್ರಮವಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಮಕ್ಕಳೇ ಇಲ್ಲಿ ಶಿಕ್ಷಕರು! 

ಈ ಯೋಜನೆಯ ಅತ್ಯಂತ ವಿಶೇಷ ಸಂಗತಿಯೆಂದರೆ, ಇಲ್ಲಿ ಪೋಷಕರಿಗೆ ಪಾಠ ಮಾಡುವವರು ಬೇರ್ಯಾರೂ ಅಲ್ಲ, ಸ್ವತಃ ಶಾಲಾ ಮಕ್ಕಳೇ! ‘ಲಿಟಲ್ ಕೈಟ್ಸ್’ (Little KITEs) ಐಟಿ ಕ್ಲಬ್‌ಗಳ ವಿದ್ಯಾರ್ಥಿಗಳು ರಾಜ್ಯದ ಸರ್ಕಾರಿ ಶಾಲೆಗಳ ಮೂಲಕ ಪೋಷಕರಿಗೆ ಎಐ ತರಬೇತಿ ನೀಡಲಿದ್ದಾರೆ. ಜೂನ್ 30, 2026ರವರೆಗೆ ನಡೆಯಲಿರುವ ಈ ಕಾರ್ಯಕ್ರಮದಲ್ಲಿ ಸುಮಾರು 2,200 ಘಟಕಗಳು ಕಾರ್ಯನಿರ್ವಹಿಸಲಿದ್ದು, ಪ್ರತಿ ಘಟಕದಲ್ಲಿ ಸರಾಸರಿ 300 ಪೋಷಕರಿಗೆ ತರಬೇತಿ ನೀಡುವ ಗುರಿ ಹೊಂದಲಾಗಿದೆ.

ಏನಿದು ತರಬೇತಿ? 

ಎರಡು ಗಂಟಗಳ ಈ ತರಬೇತಿ ಅವಧಿಯಲ್ಲಿ ಎಐನ ಉಪಯೋಗಗಳು ಮತ್ತು ಅಪಾಯಗಳೆರಡರ ಬಗ್ಗೆಯೂ ಸಮಾನ ಒತ್ತು ನೀಡಲಾಗುತ್ತದೆ. ರಾಜಾ ರವಿವರ್ಮ ಅವರ ಪ್ರಸಿದ್ಧ ವರ್ಣಚಿತ್ರಗಳಿಗೆ ಅನಿಮೇಷನ್ ಮೂಲಕ ಜೀವ ತುಂಬುವ ವಿಡಿಯೋಗಳನ್ನು ತೋರಿಸುವ ಮೂಲಕ ತರಬೇತಿ ಆರಂಭವಾಗಲಿದೆ. ಸ್ಮಾರ್ಟ್‌ಫೋನ್ ಬಳಸಿ ಪಕ್ಷಿ ಮತ್ತು ಸಸ್ಯಗಳನ್ನು ಗುರುತಿಸುವುದು, ತಮಿಳು ಅಥವಾ ಇತರೆ ಭಾಷೆಯ ಬೋರ್ಡ್‌ಗಳನ್ನು ರಿಯಲ್ ಟೈಮ್‌ನಲ್ಲಿ ಮಲಯಾಳಂಗೆ ಭಾಷಾಂತರಿಸುವುದು, ಕವನ ಬರೆಯುವುದು, ಪ್ರಯಾಣದ ಯೋಜನೆ (Travel Itinerary) ಸಿದ್ಧಪಡಿಸುವುದು ಮತ್ತು ಮನೆಯಲ್ಲಿರುವ ಪದಾರ್ಥಗಳನ್ನೇ ಬಳಸಿ ಅಡುಗೆ ರೆಸಿಪಿ ತಯಾರಿಸುವಲ್ಲಿ ಎಐ ಸಹಾಯ ಪಡೆಯುವುದನ್ನು ಪೋಷಕರಿಗೆ ಪ್ರಾಯೋಗಿಕವಾಗಿ ಕಲಿಸಿಕೊಡಲಾಗುತ್ತದೆ. ಅಲ್ಲದೆ, ಹಳೆಯ ಫೋಟೋಗಳನ್ನು ಹೊಸದರಂತೆ ಬದಲಾಯಿಸುವ ತಂತ್ರಜ್ಞಾನವನ್ನೂ ಪರಿಚಯಿಸಲಾಗುತ್ತದೆ.

ಡೀಪ್‌ಫೇಕ್ ಬಗ್ಗೆ ಎಚ್ಚರಿಕೆ 

ಎಐನ ಅದ್ಭುತಗಳ ಜೊತೆಗೆ, ಡಿಜಿಟಲ್ ಲೋಕದ ಕರಾಳ ಮುಖಗಳ ಬಗ್ಗೆಯೂ ಪೋಷಕರಿಗೆ ಅರಿವು ಮೂಡಿಸಲಾಗುತ್ತದೆ. ಎಐ ಬಳಸಿ ಸೃಷ್ಟಿಸಲಾದ ನಕಲಿ ವಿಡಿಯೋಗಳು (Deepfake), ಫೋರ್ಜರಿ ಫೋಟೋಗಳು ಮತ್ತು ಕ್ಲೋನ್ ಮಾಡಲಾದ ಧ್ವನಿಗಳನ್ನು ಪತ್ತೆಹಚ್ಚುವುದು ಹೇಗೆ? ಆನ್ ಲೈನ್ ವಂಚನೆಗಳಿಂದ ಪಾರಾಗುವುದು ಹೇಗೆ? ಎಂಬಿತ್ಯಾದಿ ಮುನ್ನೆಚ್ಚರಿಕೆಗಳನ್ನು ನೀಡಲಾಗುತ್ತದೆ. ಫೆಬ್ರವರಿ 20, 2026ರಿಂದ ಜಾರಿಗೆ ಬರಲಿರುವ ಐಟಿ ನಿಯಮಗಳ ಬಗ್ಗೆಯೂ ಮಾಹಿತಿ ನೀಡಲಿದ್ದು, ಎಐ ಯುಗದಲ್ಲಿ ಸತ್ಯ ಮತ್ತು ಮಿಥ್ಯೆಯ ನಡುವಿನ ವ್ಯತ್ಯಾಸವನ್ನು ಪೋಷಕರು ಅರಿಯಬೇಕೆಂಬುದು ಈ ಯೋಜನೆಯ ಮುಖ್ಯ ಉದ್ದೇಶವಾಗಿದೆ.