ಬೆಂಗಳೂರು: ರೌಡಿಶೀಟರ್ ಬಿಕ್ಲು ಶಿವ ಕೊಲೆ ಪ್ರಕರಣದಲ್ಲಿ ಬಂಧಿತರಾಗಿರುವ ಹಿರಿಯ ಬಿಜೆಪಿ ಶಾಸಕ ಮತ್ತು ಮಾಜಿ ಸಚಿವ ಭೈರತಿ ಬಸವರಾಜ್ ಅವರಿಗೆ ಸಂಕಷ್ಟ ಎದುರಾಗಿದೆ. ಪ್ರಕರಣದ ವಿಚಾರಣೆ ನಡೆಸಿದ 42ನೇ ಎಸಿಜೆಎಂ ನ್ಯಾಯಾಲಯದ ನ್ಯಾಯಾಧೀಶರು, ಶಾಸಕರನ್ನು ಫೆಬ್ರವರಿ 21ರ ವರೆಗೆ ಸಿಐಡಿ ಕಸ್ಟಡಿಗೆ ನೀಡಿ ಮಹತ್ವದ ಆದೇಶ ಹೊರಡಿಸಿದ್ದಾರೆ.
ಬಂಧನದ ಬಳಿಕ ಶಾಸಕರನ್ನು ವೈದ್ಯಕೀಯ ಪರೀಕ್ಷೆಗೆ ಒಳಪಡಿಸಲಾಗಿತ್ತು. ಬೌರಿಂಗ್ ಆಸ್ಪತ್ರೆ ವೈದ್ಯರ ಸಲಹೆಯಂತೆ ಜಯದೇವ ಆಸ್ಪತ್ರೆಯಲ್ಲಿ ಹೃದಯ ಸಂಬಂಧಿ ತಪಾಸಣೆ ನಡೆಸಲಾಯಿತು. ವರದಿಗಳು ಬಂದ ಬಳಿಕ ಕೋರಮಂಗಲದಲ್ಲಿರುವ ನ್ಯಾಯಾಧೀಶರ ನಿವಾಸಕ್ಕೆ ಶಾಸಕರನ್ನು ಹಾಜರುಪಡಿಸಲಾಯಿತು. ಈ ವೇಳೆ ಸಿಐಡಿ ಪರ ವಿಶೇಷ ಸರ್ಕಾರಿ ಅಭಿಯೋಜಕ (SPP) ಅಶೋಕ್ ನಾಯ್ಕ್ ಹಾಜರಿದ್ದರು. ಸದ್ಯ ಶಾಸಕರ ಆರೋಗ್ಯದಲ್ಲಿ ಯಾವುದೇ ಏರುಪೇರಿಲ್ಲ, ಎಲ್ಲವೂ ಸಹಜವಾಗಿದೆ ಎಂದು ವೈದ್ಯಕೀಯ ವರದಿ ಸ್ಪಷ್ಟಪಡಿಸಿದೆ ಎಂದು ಅಶೋಕ್ ನಾಯ್ಕ್ ಮಾಹಿತಿ ನೀಡಿದ್ದಾರೆ.
ಕುಟುಂಬಕ್ಕೆ ಬಿಜೆಪಿ ನಾಯಕರ ಸಾಂತ್ವನ
ಇತ್ತ ಶಾಸಕರು ಕಸ್ಟಡಿಗೀಡಾಗುತ್ತಿದ್ದಂತೆ, ಬಿಜೆಪಿ ನಾಯಕರ ದಂಡೇ ಭೈರತಿ ಬಸವರಾಜ್ ಅವರ ನಿವಾಸಕ್ಕೆ ಧಾವಿಸಿದೆ. ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ, ಸಂಸದ ಗೋವಿಂದ ಕಾರಜೋಳ, ರಾಜ್ಯ ಪ್ರಧಾನ ಕಾರ್ಯದರ್ಶಿ ಪ್ರೀತಂ ಗೌಡ, ವರ್ತೂರು ಪ್ರಕಾಶ್ ಮತ್ತು ಬೆಂಗಳೂರು ಉತ್ತರ ಜಿಲ್ಲಾ ಅಧ್ಯಕ್ಷ ಎಸ್.ಹರೀಶ್ ಸೇರಿದಂತೆ ಪ್ರಮುಖರು ಭೈರತಿ ನಿವಾಸಕ್ಕೆ ಭೇಟಿ ನೀಡಿ, ಆತಂಕದಲ್ಲಿರುವ ಕುಟುಂಬಸ್ಥರಿಗೆ ಧೈರ್ಯ ತುಂಬಿದರು.
ಷಡ್ಯಂತ್ರಗಳಿಗೆ ಹೆದರಲ್ಲ: ವಿಜಯೇಂದ್ರ ಗುಡುಗು
ಭೇಟಿಯ ನಂತರ ಮಾಧ್ಯಮಗಳೊಂದಿಗೆ ಮಾತನಾಡಿದ ವಿಜಯೇಂದ್ರ, ಸರ್ಕಾರದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದರು. “ಯಡಿಯೂರಪ್ಪನವರ ಮೇಲೆ ಭೈರತಿ ಬಸವರಾಜ್ ಇಟ್ಟಿರುವ ವಿಶ್ವಾಸಕ್ಕೆ ಬೆಲೆ ಕಟ್ಟಲಾಗದು. ಇದು ಕೇವಲ ಪರೀಕ್ಷೆಯ ಸಮಯವಷ್ಟೇ. ರಾಜಕೀಯ ಷಡ್ಯಂತ್ರಗಳು ಹೇಗೆ ನಡೆಯುತ್ತವೆ ಎಂಬುದು ನಮಗೆ ಚೆನ್ನಾಗಿ ಗೊತ್ತಿದೆ. ನನ್ನ ತಂದೆ ಮತ್ತು ಕುಟುಂಬದ ಮೇಲೆಯೇ 25-30 ಕೇಸ್ ಹಾಕಿದ್ದರು, ಅದನ್ನೆಲ್ಲಾ ನಾವು ಎದುರಿಸಿ ಬಂದಿದ್ದೇವೆ. ನಾವೆಲ್ಲರೂ ಮತ್ತು ಇಡೀ ಪಕ್ಷ ಭೈರತಿ ಅವರ ಜೊತೆಗಿದೆ” ಎಂದು ವಿಜಯೇಂದ್ರ ಭರವಸೆ ನೀಡಿದರು.






