S Shorts

Wild Discovery | ​ಪಶ್ಚಿಮ ಘಟ್ಟದಲ್ಲಿ ಹೊಸ ಜಾತಿಯ ಏಡಿ ಪತ್ತೆ: ಮೂರು ಹಂತದಲ್ಲಿ ಬಣ್ಣ ಬದಲಿಸುವ ‘ಘಾಟಿಯಾನ ಧೃತಿಯರಮ್’!

Posted By: Sagaradventure
Updated: Feb 17, 2026 | 11:21 PM

ಕಾರವಾರ: ಜೀವವೈವಿಧ್ಯದ ತಾಣವಾದ ಭಾರತದ ಪಶ್ಚಿಮ ಘಟ್ಟಗಳಲ್ಲಿ ಮತ್ತೊಂದು ಅಪರೂಪದ ಆವಿಷ್ಕಾರ ನಡೆದಿದೆ. ಉತ್ತರ ಕನ್ನಡ ಜಿಲ್ಲೆಯ ಕಾರವಾರ ವಿಭಾಗದ ದೇವಳಮಕ್ಕಿ ಅರಣ್ಯ ವ್ಯಾಪ್ತಿಯಲ್ಲಿ ಅರಣ್ಯ ಇಲಾಖೆಯ ಸಿಬ್ಬಂದಿ ಸಿಹಿನೀರಿನ ಹೊಸ ಪ್ರಭೇದದ ಏಡಿಯನ್ನು ಪತ್ತೆಹಚ್ಚಿದ್ದಾರೆ. ಈ ಹೊಸ ಆವಿಷ್ಕಾರಕ್ಕೆ ‘ಘಾಟಿಯಾನ ಧೃತಿಯರಮ್’ (Ghatiana dhrutiarum) ಎಂದು ನಾಮಕರಣ ಮಾಡಲಾಗಿದ್ದು, ‘ಝೂಲಾಜಿಕಲ್ ಸರ್ವೆ ಆಫ್ ಇಂಡಿಯಾ’ (ZSI) ಇದರ ಅಧಿಕೃತತೆಯನ್ನು ದೃಢಪಡಿಸಿದೆ.

​ಗಸ್ತು ಅರಣ್ಯ ಪಾಲಕರಾದ ಗೋಪಾಲ ನಾಯ್ಕ್ ಮತ್ತು ಸುನೀಲ ಗೌಡ ಅವರು ಈ ಹೊಸ ಜಾತಿಯ ಏಡಿಯನ್ನು ಆವಿಷ್ಕರಿಸಿದ ಸಾಧಕರು. ಇದು ಭಾರತದಲ್ಲಿ ಕಂಡುಬರುವ 77ನೇ ಸಿಹಿನೀರಿನ ಏಡಿ ತಳಿಯಾಗಿದ್ದು, ಘಾಟಿಯಾನಾ ಕುಲದ 14ನೇ ಪ್ರಭೇದವಾಗಿದೆ. ವಿಶೇಷವೆಂದರೆ, ಈ ಕುಲದ 14 ತಳಿಗಳ ಪೈಕಿ 7 ತಳಿಗಳು ಕರ್ನಾಟಕದಲ್ಲಿಯೇ ಕಂಡುಬರುತ್ತವೆ. ಈ ಏಡಿಯು ಪ್ರಮುಖವಾಗಿ ನಿತ್ಯಹರಿದ್ವರ್ಣ ಕಾಡುಗಳ ಮರದ ಪೊಟರೆ ಮತ್ತು ಜಂಬುಮಣ್ಣಿನ ಬಂಡೆಗಳ ರಂಧ್ರಗಳಲ್ಲಿ ವಾಸಿಸುತ್ತದೆ.

ಬಣ್ಣ ಬದಲಿಸುವ ಕೌತುಕ:

ಈ ಏಡಿಯ ಅತ್ಯಂತ ಆಕರ್ಷಕ ವೈಶಿಷ್ಟ್ಯವೆಂದರೆ ಅದರ ಜೀವನ ಚಕ್ರದ ಮೂರು ವಿಭಿನ್ನ ಹಂತಗಳಲ್ಲಿ ಮೂರು ಬೇರೆ ಬೇರೆ ಬಣ್ಣಗಳನ್ನು ಹೊಂದಿರುವುದು.
ಮರಿ ಹಂತ: ತಲೆ ಮತ್ತು ಕಾಲುಗಳು ಸಂಪೂರ್ಣ ಕಪ್ಪು ಬಣ್ಣದಲ್ಲಿರುತ್ತವೆ.
ಮಧ್ಯಂತರ ಹಂತ: ದೇಹದ ಮೇಲ್ಭಾಗ ಹಾಲಿನ ಕೆನೆ ಬಣ್ಣ, ಕೆಳಭಾಗ ನೇರಳೆ ಬಣ್ಣಕ್ಕೆ ತಿರುಗುತ್ತದೆ.
ಪ್ರೌಢಾವಸ್ಥೆ: ಕಾಲುಗಳು ಸಂಪೂರ್ಣ ಕಿತ್ತಳೆ ಬಣ್ಣವನ್ನು ಪಡೆದುಕೊಳ್ಳುತ್ತವೆ.

ಪರಿಸರದ ಆರೋಗ್ಯ ಸೂಚಕ:

“ಈ ಏಡಿಗಳು ಕಂಡುಬರುವ ಜಾಗವು ಸಮೃದ್ಧ ಅರಣ್ಯ ಪರಿಸರಕ್ಕೆ ಸಾಕ್ಷಿಯಾಗಿದೆ” ಎಂದು ಸಂಶೋಧನೆಯಲ್ಲಿ ತೊಡಗಿರುವ ವನಪಾಲಕ ಗೋಪಾಲ ನಾಯ್ಕ ತಿಳಿಸಿದ್ದಾರೆ. ಇವು ಶಿಲೀಂಧ್ರ ಮತ್ತು ಸತ್ತ ಕೀಟಗಳನ್ನು ತಿಂದು ಕಾಡಿನ ‘ಜಾಡಮಾಲಿ’ಯಂತೆ ಕೆಲಸ ಮಾಡುತ್ತವೆ.

ಕಾರವಾರ ಡಿ.ಸಿ.ಎಫ್ ಸಿ. ರವಿಶಂಕರ್ ಅವರು ಸಿಬ್ಬಂದಿಯ ಈ ವೈಜ್ಞಾನಿಕ ಮನೋಭಾವವನ್ನು ಶ್ಲಾಘಿಸಿದ್ದು, ಸಿಬ್ಬಂದಿಯ ಈ ಸಾಧನೆ ಇಡೀ ಅರಣ್ಯ ಇಲಾಖೆಗೆ ಹೆಮ್ಮೆ ತಂದಿದೆ ಎಂದಿದ್ದಾರೆ.