S Shorts

YouTube ವಿಡಿಯೋ ಲೋಡ್ ಆಗದೆ ಭಾರತ ಸೇರಿ ವಿಶ್ವಾದ್ಯಂತ ಬಳಕೆದಾರರ ಪರದಾಟ: ಗೂಗಲ್ ಸ್ಪಷ್ಟನೆ

Posted By: Sagaradventure
Updated: Feb 18, 2026 | 9:49 AM

ನ್ಯೂಯಾರ್ಕ್: ವಿಶ್ವದ ಅತಿದೊಡ್ಡ ವಿಡಿಯೋ ಸ್ಟ್ರೀಮಿಂಗ್ ಪ್ಲಾಟ್‌ಫಾರ್ಮ್ ಯೂಟ್ಯೂಬ್ (YouTube) ಸೇವೆಯಲ್ಲಿ ಮಂಗಳವಾರ ಭಾರೀ ವ್ಯತ್ಯಯ ಉಂಟಾಗಿದ್ದು, ಭಾರತ ಮತ್ತು ಅಮೆರಿಕ ಸೇರಿದಂತೆ ವಿಶ್ವದಾದ್ಯಂತ ಲಕ್ಷಾಂತರ ಬಳಕೆದಾರರು ವಿಡಿಯೋ ವೀಕ್ಷಿಸಲು ಪರದಾಡುವಂತಾಯಿತು. ವಿಡಿಯೋಗಳು ಲೋಡ್ ಆಗದಿರುವುದು ಮತ್ತು ಆ್ಯಪ್ ತೆರೆಯುವಲ್ಲಿ ದೋಷ ಕಂಡುಬಂದ ಹಿನ್ನೆಲೆಯಲ್ಲಿ ಸಾಮಾಜಿಕ ಜಾಲತಾಣಗಳಲ್ಲಿ ದೂರುಗಳ ಸುರಿಮಳೆಯೇ ಹರಿದುಬಂತು.

ಬಳಕೆದಾರರು ಯೂಟ್ಯೂಬ್ ಆ್ಯಪ್ ಅಥವಾ ವೆಬ್‌ಸೈಟ್ ತೆರೆಯಲು ಪ್ರಯತ್ನಿಸಿದಾಗ “ಸಮ್‌ಥಿಂಗ್ ವೆಂಟ್ ರಾಂಗ್” (Something went wrong) ಎಂಬ ದೋಷದ ಸಂದೇಶಗಳು ಕಾಣಿಸಿಕೊಂಡಿವೆ. ಈ ಬಗ್ಗೆ ಸ್ಪಷ್ಟನೆ ನೀಡಿರುವ ಗೂಗಲ್ (Google), “ನಮ್ಮ ‘ರೆಕಮೆಂಡೇಶನ್ ಸಿಸ್ಟಮ್’ನಲ್ಲಿ (ಶಿಫಾರಸು ವ್ಯವಸ್ಥೆ) ಉಂಟಾದ ತಾಂತ್ರಿಕ ದೋಷದಿಂದಾಗಿ ವಿಡಿಯೋಗಳು ಹೋಮ್‌ಪೇಜ್, ಯೂಟ್ಯೂಬ್ ಆ್ಯಪ್, ಯೂಟ್ಯೂಬ್ ಮ್ಯೂಸಿಕ್ ಮತ್ತು ಯೂಟ್ಯೂಬ್ ಕಿಡ್ಸ್ ಸೇರಿದಂತೆ ಯಾವುದೇ ವೇದಿಕೆಗಳಲ್ಲಿ ಕಾಣಿಸುತ್ತಿರಲಿಲ್ಲ” ಎಂದು ತಿಳಿಸಿದೆ. ಸದ್ಯ ಹೋಮ್‌ಪೇಜ್ ಸಮಸ್ಯೆ ಬಗೆಹರಿದಿದ್ದು, ಪೂರ್ಣ ಪ್ರಮಾಣದ ದುರಸ್ತಿ ಕಾರ್ಯ ನಡೆಯುತ್ತಿದೆ ಎಂದು ಟೀಮ್ ಯೂಟ್ಯೂಬ್ ಹೇಳಿದೆ.

ಆನ್‌ಲೈನ್ ಸೇವೆಗಳ ವ್ಯತ್ಯಯವನ್ನು ಪತ್ತೆಹಚ್ಚುವ ವೆಬ್‌ಸೈಟ್ ‘ಡೌನ್‌ಡಿಟೆಕ್ಟರ್’ (Downdetector) ಪ್ರಕಾರ, ಅಮೆರಿಕವೊಂದರಲ್ಲೇ 3.20 ಲಕ್ಷಕ್ಕೂ ಹೆಚ್ಚು ಬಳಕೆದಾರರು ಸಮಸ್ಯೆ ವರದಿ ಮಾಡಿದ್ದಾರೆ. ಇತ್ತ ಭಾರತದಲ್ಲಿಯೂ ಬೆಳಗಿನ ವೇಳೆ ಕೇವಲ ಕೆಲವೇ ನಿಮಿಷಗಳಲ್ಲಿ 19,000ಕ್ಕೂ ಹೆಚ್ಚು ದೂರುಗಳು ದಾಖಲಾಗಿವೆ. ಇದು ಕೇವಲ ಒಂದು ಪ್ರದೇಶಕ್ಕೆ ಸೀಮಿತವಾಗದೆ ಜಾಗತಿಕ ಮಟ್ಟದ ಸಮಸ್ಯೆಯಾಗಿತ್ತು ಎಂಬುದು ಇದರಿಂದ ದೃಢಪಟ್ಟಿದೆ.

ಯೂಟ್ಯೂಬ್ ಟಿವಿ ಮತ್ತು ಕೆಲವು ಗೂಗಲ್ ಸೇವೆಗಳ ಮೇಲೂ ಈ ತಾಂತ್ರಿಕ ದೋಷದ ಪರಿಣಾಮ ಬೀರಿದೆ. ವಿಡಿಯೋಗಳು ಪ್ಲೇ ಆಗದಿದ್ದಾಗ ಮತ್ತು ಪದೇ ಪದೇ ಎರರ್ ಮೆಸೇಜ್ ಬಂದಾಗ ಕಂಗಾಲಾದ ಬಳಕೆದಾರರು, ಎಕ್ಸ್ (ಟ್ವಿಟರ್) ಸೇರಿದಂತೆ ಇತರೆ ಸಾಮಾಜಿಕ ಜಾಲತಾಣಗಳಲ್ಲಿ ಸ್ಕ್ರೀನ್‌ಶಾಟ್‌ಗಳನ್ನು ಹಂಚಿಕೊಂಡು ತಮ್ಮ ಅಸಮಾಧಾನ ಹೊರಹಾಕಿದ್ದಾರೆ.