ಕಲಬುರಗಿ: ನಗರದ ಹಿರಾಪುರ ಸಮೀಪದ ಮಾದರಸನಹಳ್ಳಿ ಬಡಾವಣೆಯಲ್ಲಿ ಇಂದು ಬೆಳಿಗ್ಗೆ ಮನಕಲಕುವ ಘಟನೆಯೊಂದು ನಡೆದಿದೆ. ಮನೆಯ ಸೆಪ್ಟಿಕ್ ಟ್ಯಾಂಕ್ (Septic Tank) ಸ್ವಚ್ಛಗೊಳಿಸಲು ಹೋಗಿ ಕಾರ್ಮಿಕ ಮತ್ತು ಆತನನ್ನು ರಕ್ಷಿಸಲು ಹೋದ ಮನೆ ಮಾಲೀಕ ಇಬ್ಬರೂ ಉಸಿರುಗಟ್ಟಿ ಸಾವನ್ನಪ್ಪಿದ್ದಾರೆ.
ನಡೆದಿದ್ದೇನು?
ಶಿವಕುಮಾರ್ ನಂದೂರ್ ಎಂಬುವವರ ಮನೆಯಲ್ಲಿ ಸೆಪ್ಟಿಕ್ ಟ್ಯಾಂಕ್ ಭರ್ತಿಯಾಗಿದ್ದ ಹಿನ್ನೆಲೆಯಲ್ಲಿ, ಅದನ್ನು ಸ್ವಚ್ಛಗೊಳಿಸಲು ಕಾರ್ಮಿಕ ರತನ್ ಎಂಬುವವರನ್ನು ಕರೆಯಿಸಲಾಗಿತ್ತು. ಸ್ವಚ್ಛಗೊಳಿಸುವ ಉದ್ದೇಶದಿಂದ ರತನ್ ಟ್ಯಾಂಕ್‌ನ ಒಳಗೆ ಇಳಿದಿದ್ದಾರೆ. ಆದರೆ, ಟ್ಯಾಂಕ್‌ನಲ್ಲಿದ್ದ ವಿಷಗಾಳಿಯಿಂದಾಗಿ ರತನ್ ಉಸಿರುಗಟ್ಟಿ ಒಳಗೆ ಪ್ರಜ್ಞೆ ತಪ್ಪಿ ಬಿದ್ದಿದ್ದಾರೆ.
ಬಹಳ ಹೊತ್ತಾದರೂ ರತನ್ ಮೇಲೆ ಬರದಿದ್ದನ್ನು ಕಂಡು ಗಾಬರಿಗೊಂಡ ಮನೆ ಮಾಲೀಕ ಶಿವಕುಮಾರ್, ಕಾರ್ಮಿಕನನ್ನು ರಕ್ಷಿಸಲು ತಾವೂ ಟ್ಯಾಂಕ್ ಒಳಗೆ ಇಳಿದಿದ್ದಾರೆ. ದುರದೃಷ್ಟವಶಾತ್, ಶಿವಕುಮಾರ್ ಕೂಡ ವಿಷಗಾಳಿಯ ಪ್ರಭಾವಕ್ಕೆ ಸಿಲುಕಿ ಉಸಿರುಗಟ್ಟಿ ಟ್ಯಾಂಕ್‌ನಲ್ಲೇ ಕೊನೆಯುಸಿರೆಳೆದಿದ್ದಾರೆ.
ಇಬ್ಬರು ಮೇಲೆ ಬರದಿದ್ದಾಗ ಕುಟುಂಬಸ್ಥರು ಅಕ್ಕಪಕ್ಕದವರಿಗೆ ಮಾಹಿತಿ ನೀಡಿದ್ದಾರೆ. ನಂತರ ಸ್ಥಳೀಯರು ಮತ್ತು ಪೊಲೀಸರ ನೆರವಿನಿಂದ ಇಬ್ಬರನ್ನೂ ಹೊರತೆಗೆಯಲಾಯಿತಾದರೂ, ಅಷ್ಟರಲ್ಲೇ ಇಬ್ಬರೂ ಸಾವನ್ನಪ್ಪಿರುವುದು ದೃಢಪಟ್ಟಿದೆ. ಘಟನಾ ಸ್ಥಳಕ್ಕೆ ಅಶೋಕ ನಗರ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಪ್ರಕರಣ ದಾಖಲಿಸಿಕೊಂಡು ಮುಂದಿನ ತನಿಖೆ ಕೈಗೊಂಡಿದ್ದಾರೆ.






