S Shorts

Cabinet Reshuffle | ಕಾಂಗ್ರೆಸ್‌ನಲ್ಲಿ ಹೆಚ್ಚಿದ ಸಚಿವ ಸಂಪುಟ ಕಸರತ್ತು: 31 ಶಾಸಕರ ಸಹಿ ಇರುವ ಪತ್ರ ವೈರಲ್!

Posted By: Meghana Gowda
Updated: Feb 23, 2026 | 6:30 PM

ಬೆಂಗಳೂರು: ರಾಜ್ಯದಲ್ಲಿ ನಾಯಕತ್ವ ಬದಲಾವಣೆಯ ಚರ್ಚೆಗಳು ನಡೆಯುತ್ತಿರುವ ಬೆನ್ನಲ್ಲೇ, ಕಾಂಗ್ರೆಸ್‌ನ (Congress) 31 ಶಾಸಕರು ಸಚಿವ ಸಂಪುಟ ಪುನಾರಚನೆಗೆ ಆಗ್ರಹಿಸಿ ಬರೆದಿರುವ ಪತ್ರವೊಂದು ಈಗ ರಾಜಕೀಯ ವಲಯದಲ್ಲಿ ಭಾರೀ ಸಂಚಲನ ಮೂಡಿಸಿದೆ. ಮೊದಲ ಬಾರಿಗೆ ಗೆದ್ದಿರುವ ಶಾಸಕರಿಗೆ ಸಚಿವ ಸ್ಥಾನ ನೀಡಬೇಕು ಎಂಬ ಬೇಡಿಕೆ ಈ ಪತ್ರದ ಮೂಲಕ ಸದ್ದು ಮಾಡುತ್ತಿದೆ.

ಪತ್ರದಲ್ಲಿ ಏನಿದೆ?

ಈ ಬಾರಿ ಕಾಂಗ್ರೆಸ್‌ನಿಂದ 38 ಶಾಸಕರು ಮೊದಲ ಬಾರಿಗೆ ಆಯ್ಕೆಯಾಗಿದ್ದೇವೆ. ಬೇರೆ ರಾಜ್ಯಗಳಲ್ಲಿ ಮೊದಲ ಬಾರಿಗೆ ಗೆದ್ದವರೇ ಮುಖ್ಯಮಂತ್ರಿಯಾಗಿದ್ದಾರೆ. ಹೀಗಾಗಿ ನಮ್ಮಲ್ಲೂ ಮೊದಲ ಬಾರಿ ಗೆದ್ದವರಿಗೆ ಸಂಪುಟದಲ್ಲಿ ಸ್ಥಾನ ನೀಡಬೇಕು ಎಂದು ಶಾಸಕರು ಒತ್ತಾಯಿಸಿದ್ದಾರೆ.

ಒಟ್ಟು 31 ಶಾಸಕರ ಸಹಿ ಇರುವ ಈ ಪತ್ರವನ್ನು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ನಾಯಕರಾದ ರಾಹುಲ್ ಗಾಂಧಿ, ಕೆ.ಸಿ. ವೇಣುಗೋಪಾಲ್, ಸುರ್ಜೇವಾಲಾ ಹಾಗೂ ಸಿಎಂ ಸಿದ್ದರಾಮಯ್ಯ(CM Siddaramaiah) ಮತ್ತು ಡಿಸಿಎಂ ಡಿ.ಕೆ. ಶಿವಕುಮಾರ್ (DCM DKShivakumar) ಅವರಿಗೆ ಬರೆಯಲಾಗಿದೆ.

ಕುತೂಹಲಕಾರಿ ವಿಷಯವೆಂದರೆ ವೈರಲ್ ಆಗಿರುವ ಈ ಪತ್ರದಲ್ಲಿ ಯಾವುದೇ ದಿನಾಂಕ ಉಲ್ಲೇಖವಾಗಿಲ್ಲ. ಇದು ಉದ್ದೇಶಪೂರ್ವಕವಾಗಿ ಹರಿಬಿಟ್ಟ ಪತ್ರವೇ ಅಥವಾ ಹಳೆಯದೋ ಎಂಬ ಗೊಂದಲ ಸೃಷ್ಟಿಯಾಗಿದೆ.

ನಾಯಕತ್ವ ಬದಲಾವಣೆಯ ಬಗ್ಗೆ ಹೈಕಮಾಂಡ್ ತೀರ್ಮಾನ ಕೈಗೊಳ್ಳುವ ಮೊದಲೇ ಈ ಪತ್ರ ಹೊರಬಂದಿರುವುದು ಕಾಂಗ್ರೆಸ್ ಸರ್ಕಾರದ ಒಳಗೆ ಭಿನ್ನಮತ ಅಥವಾ ಒತ್ತಡದ ತಂತ್ರಗಾರಿಕೆ ನಡೆಯುತ್ತಿದೆಯೇ ಎಂಬ ಅನುಮಾನಕ್ಕೆ ದಾರಿ ಮಾಡಿಕೊಟ್ಟಿದೆ.