S Shorts

ಜಿಲ್ಲೆಯ ಏಕೈಕ BJP ಶಾಸಕನಿಗೆ ಕಾಂಗ್ರೆಸ್ ಗಾಳ; CM ಆಹ್ವಾನ ತಿರಸ್ಕರಿಸಿದ ಶಾಸಕ ದಿನಕರ ಶೆಟ್ಟಿ!

Posted By: Sagaradventure
Updated: Feb 23, 2026 | 12:47 PM

ಕುಮಟಾ(ಉತ್ತರಕನ್ನಡ): ಜಿಲ್ಲೆಯ ಏಕೈಕ ಬಿಜೆಪಿ ಶಾಸಕರಾಗಿರುವ ಕುಮಟಾ ಕ್ಷೇತ್ರದ ದಿನಕರ ಶೆಟ್ಟಿ ಅವರಿಗೆ ಕಾಂಗ್ರೆಸ್ ಸೇರುವಂತೆ ಖುದ್ದು ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಆಹ್ವಾನ ನೀಡಿದ, ಆದರೆ ಶಾಸಕರು ಅದನ್ನು ನಯವಾಗಿ ತಿರಸ್ಕರಿಸಿದ ಘಟನೆ ನಡೆದಿದೆ.

ಭಾನುವಾರ (ಫೆ. 22ರಂದು) ಅಂಕೋಲಾ ತಾಲೂಕಿನ ಮಂಜಗುಣಿಯಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಈ ರಾಜಕೀಯ ಹೈಡ್ರಾಮಾ ನಡೆದಿದೆ. ಈ ಕುರಿತು ಸೋಮವಾರ ಕುಮಟಾದಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿರುವ ಶಾಸಕ ದಿನಕರ ಶೆಟ್ಟಿ, ಅಲ್ಲಿ ನಡೆದ ಮಾತುಕತೆಯ ಗುಟ್ಟನ್ನು ರಟ್ಟು ಮಾಡಿದ್ದಾರೆ.

ಮಂಜುಗುಣಿ ಕಾರ್ಯಕ್ರಮದಲ್ಲಿ ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿ.ಕೆ. ಶಿವಕುಮಾರ್ ಹಾಗೂ ಹಲವು ಸಚಿವರು ಭಾಗಿಯಾಗಿದ್ದರು. ಶಿಷ್ಟಾಚಾರದ ಹಿನ್ನೆಲೆಯಲ್ಲಿ ಶಾಸಕ ದಿನಕರ ಶೆಟ್ಟಿ ಕೂಡ ಅಲ್ಲಿ ಉಪಸ್ಥಿತರಿದ್ದರು. ಈ ವೇಳೆ ಸಿಎಂ ಮತ್ತು ಡಿಸಿಎಂ ಇಬ್ಬರೂ ಸೇರಿ, “ಇಡೀ ಜಿಲ್ಲೆಯಲ್ಲಿ ನೀವೊಬ್ಬರೇ ಬಿಜೆಪಿ ಶಾಸಕರಿರುವುದು. ನೀವು ಕಾಂಗ್ರೆಸ್ ಪಕ್ಷಕ್ಕೆ ಬಂದುಬಿಡಿ” ಎಂದು ನೇರವಾಗಿಯೇ ಆಹ್ವಾನ ನೀಡಿದ್ದಾರೆ.

ಕಾಂಗ್ರೆಸ್ ನಾಯಕರ ಈ ಆಹ್ವಾನದ ಬಗ್ಗೆ ಸ್ಪಷ್ಟನೆ ನೀಡಿರುವ ಶಾಸಕ ದಿನಕರ ಶೆಟ್ಟಿ, ಪಕ್ಷ ಬಿಡುವ ಯಾವುದೇ ಪ್ರಶ್ನೆಯೇ ಇಲ್ಲ ಎಂದು ಖಡಕ್ ಆಗಿ ಹೇಳಿದ್ದಾರೆ. ನಾನೊಬ್ಬನೇ ಶಾಸಕನಾಗಿದ್ದರೂ, ಏಕಾಂಗಿಯಾಗಿ ಹೋರಾಡುವ ಶಕ್ತಿ ನನಗಿದೆ. ನಾನು ಬಿಜೆಪಿ ಪಕ್ಷವನ್ನು ಬಿಟ್ಟು ಬರುವುದಿಲ್ಲ ಎಂದು ಸಿಎಂ ಅವರಿಗೆ ಸ್ಪಷ್ಟವಾಗಿ ಹೇಳಿದ್ದೇನೆ. ಅದಕ್ಕೆ ಪ್ರತಿಕ್ರಿಯಿಸಿದ ಸಿಎಂ, ‘ಆಯ್ತು, ನೀನು ಅಲ್ಲೇ ಇರು ಬೇಡ’ ಎಂದು ಹೇಳಿದ್ದಾರೆ.

ನಾನು ಬಿಜೆಪಿಯಲ್ಲಿ ಆರಾಮಾಗಿದ್ದೇನೆ. ಈ ಹಿಂದೆಯೂ ನನಗೆ ಬೇರೆ ಪಕ್ಷಗಳಿಂದ ಆಹ್ವಾನ ಬಂದಿತ್ತು. ಆದರೆ, ನನ್ನ ಕ್ಷೇತ್ರಕ್ಕೆ ಅನುದಾನ ಕಡಿಮೆ ಬಂದರೂ ಪರವಾಗಿಲ್ಲ, ನಾನು ಯಾವುದೇ ಕಾರಣಕ್ಕೂ ಬಿಜೆಪಿ ಬಿಡುವುದಿಲ್ಲ ಎಂದು ದಿನಕರ ಶೆಟ್ಟಿ ತಮ್ಮ ನಿಲುವನ್ನು ಸ್ಪಷ್ಟಪಡಿಸಿದ್ದಾರೆ.

ಈ ಬೆಳವಣಿಗೆಯು ಜಿಲ್ಲೆಯ ರಾಜಕೀಯ ವಲಯದಲ್ಲಿ ತೀವ್ರ ಚರ್ಚೆಗೆ ಗ್ರಾಸವಾಗಿದ್ದು, ಬಿಜೆಪಿಯ ಭದ್ರಕೋಟೆಯನ್ನು ಭೇದಿಸಲು ಕಾಂಗ್ರೆಸ್ ತೆರೆಮರೆಯಲ್ಲಿ ಕಸರತ್ತು ನಡೆಸುತ್ತಿರುವುದು ಸ್ಪಷ್ಟವಾಗಿದೆ.