S Shorts

Shivamogga | ಶಿವಮೊಗ್ಗದಲ್ಲಿ ಕರುಳು ಹಿಂಡುವ ಘಟನೆ: SSLC ವಿದ್ಯಾರ್ಥಿಯ ಬರ್ಬರ ಹ*ತ್ಯೆ

Posted By: Meghana Gowda
Updated: Feb 24, 2026 | 10:05 AM

ಶಿವಮೊಗ್ಗ: ಮಲೆನಾಡಿನ ಹೆಬ್ಬಾಗಿಲು ಶಿವಮೊಗ್ಗದಲ್ಲಿ (Shivamogga) ಅಪ್ರಾಪ್ತ ಬಾಲಕನೊಬ್ಬನ ಭೀಕರ ಕೊಲೆಯಾಗಿದ್ದು, ನಗರದಲ್ಲಿ ಮತ್ತೆ ಆತಂಕದ ವಾತಾವರಣ ನಿರ್ಮಾಣವಾಗಿದೆ. ಎಸ್ಎಸ್ಎಲ್‌ಸಿ (SSLC) ಪರೀಕ್ಷೆಗೆ ಸಿದ್ಧತೆ ನಡೆಸುತ್ತಿದ್ದ ವಿದ್ಯಾರ್ಥಿಯನ್ನು ಶಾಲೆಯ ಬಳಿಯೇ ಬಲಿ ಪಡೆಯಲಾಗಿದೆ.

ಶಿವಮೊಗ್ಗ ನಗರದ ಊರಗಡೂರಿನ ಸರ್ಕಾರಿ ಪ್ರೌಢಶಾಲೆಯಲ್ಲಿ ಹತ್ತನೇ ತರಗತಿ ಓದುತ್ತಿದ್ದ ಹಿಂದೂ ಬಾಲಕ ಈ ಕೃತ್ಯಕ್ಕೆ ಬಲಿಯಾಗಿದ್ದಾನೆ. ಪರೀಕ್ಷೆ ಹತ್ತಿರ ಬರುತ್ತಿರುವ ಹಿನ್ನೆಲೆಯಲ್ಲಿ ಶಾಲೆಯಲ್ಲಿ ಆಯೋಜಿಸಿದ್ದ ವಿಶೇಷ ತರಗತಿಗೆ (Special Class) ಬಾಲಕ ಹಾಜರಾಗಿದ್ದ. ತರಗತಿ ಮುಗಿಸಿ ಮನೆಗೆ ಹಿಂದಿರುಗುತ್ತಿದ್ದ ವೇಳೆ ಶಾಲೆಯಿಂದ ಅನತಿ ದೂರದಲ್ಲೇ ಹೊಂಚು ಹಾಕಿದ್ದ ಗುಂಪೊಂದು ಬಾಲಕನ ಮೇಲೆ ಭೀಕರವಾಗಿ ಹಲ್ಲೆ ನಡೆಸಿದೆ.

ಕೊಲೆಗೆ ಕಾರಣವೇನು?

ಅನ್ಯಕೋಮಿನ ಸುಮಾರು 3-4 ಅಪ್ರಾಪ್ತ ಬಾಲಕರೇ ಈ ಕೃತ್ಯ ಎಸಗಿದ್ದಾರೆ ಎಂದು ವರದಿಯಾಗಿದೆ. ಈ ದಾಳಿ ಮಾಡಿದವರು ಇದೇ ಶಾಲೆಯಲ್ಲಿ ಓದಿ ಅರ್ಧಕ್ಕೆ ಶಿಕ್ಷಣ ಬಿಟ್ಟಿದ್ದ (Dropouts) ಹಳೆಯ ವಿದ್ಯಾರ್ಥಿಗಳು ಎನ್ನಲಾಗಿದೆ. ಹಲ್ಲೆಯಿಂದ ತೀವ್ರವಾಗಿ ಗಾಯಗೊಂಡಿದ್ದ ಬಾಲಕನನ್ನು ಆಸ್ಪತ್ರೆಗೆ ಸಾಗಿಸುವ ಮಾರ್ಗಮಧ್ಯೆ ಆತ ಕೊನೆಯುಸಿರೆಳೆದಿದ್ದಾನೆ.

ಘಟನೆ ತಿಳಿಯುತ್ತಿದ್ದಂತೆಯೇ ಎಸ್ಪಿ ನಿಖಿಲ್ (SP Nikhil) ಅವರು ಮೆಗ್ಗಾನ್ ಆಸ್ಪತ್ರೆಯ ಶವಾಗಾರಕ್ಕೆ ಭೇಟಿ ನೀಡಿ, ಪ್ರತ್ಯಕ್ಷದರ್ಶಿ ಬಾಲಕನಿಂದ ಮಾಹಿತಿ ಪಡೆದಿದ್ದಾರೆ. ಶಾಸಕ ಎಸ್.ಎನ್.ಚನ್ನಬಸಪ್ಪ ಕೂಡ ಆಸ್ಪತ್ರೆಗೆ ಭೇಟಿ ನೀಡಿ ಕುಟುಂಬಸ್ಥರಿಗೆ ಸಾಂತ್ವನ ಹೇಳಿದ್ದಾರೆ.

ಘಟನೆಯಿಂದಾಗಿ ಊರಗಡೂರು ಹಾಗೂ ಶಿವಮೊಗ್ಗ ನಗರದಾದ್ಯಂತ ಉದ್ವಿಗ್ನತೆ ಸೃಷ್ಟಿಯಾಗಿದ್ದು, ಮುನ್ನೆಚ್ಚರಿಕಾ ಕ್ರಮವಾಗಿ ವ್ಯಾಪಕ ಪೊಲೀಸ್ ಭದ್ರತೆ ನಿಯೋಜಿಸಲಾಗಿದೆ. ತುಂಗಾನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆರೋಪಿಗಳ ಪತ್ತೆಗೆ ಪೊಲೀಸರು ಜಾಲ ಬೀಸಿದ್ದಾರೆ.