ಕಾರವಾರ: ಶಾಂತಿಯುತವಾಗಿದ್ದ ಮುರುಡೇಶ್ವರದ (Murudeshwar) ಬೈಲೂರಿನಲ್ಲಿ ಸೋಮವಾರ ರಾತ್ರಿ ಕಿಡಿಗೇಡಿಗಳು ಅಶಾಂತಿ ಸೃಷ್ಟಿಸಲು ಯತ್ನಿಸಿದ್ದಾರೆ. ಹಿಂದೂಗಳ ಮನೆಗಳನ್ನು ಗುರಿಯಾಗಿಸಿಕೊಂಡು ಕಲ್ಲು ತೂರಾಟ ನಡೆಸಲಾಗಿದ್ದು, ಈ ಸಂಬಂಧ ಇಬ್ಬರು ಯುವಕರನ್ನು ಬಂಧಿಸಲಾಗಿದೆ.
ಸೋಮವಾರ ರಾತ್ರಿ ಸುಮಾರು 10 ಗಂಟೆಯ ನಂತರ 3 ಬೈಕ್‌ಗಳಲ್ಲಿ ಬಂದ ಯುವಕರ ತಂಡವೊಂದು ಭಟ್ಕಳ ತಾಲೂಕಿನ ತೆಂಗಾರ್ ರಸ್ತೆಯಲ್ಲಿರುವ 3-4 ಮನೆಗಳ ಮೇಲೆ ಮನಸೋ ಇಚ್ಛೆ ಕಲ್ಲು ತೂರಾಟ ನಡೆಸಿದ್ದಾರೆ. ಬೈಲೂರಿನ ಇತಿಹಾಸದಲ್ಲೇ ಇಂತಹ ಘಟನೆ ಇದೇ ಮೊದಲ ಬಾರಿಗೆ ನಡೆದಿದೆ ಎಂದು ಸ್ಥಳೀಯರು ಆತಂಕ ವ್ಯಕ್ತಪಡಿಸಿದ್ದಾರೆ. ತಕ್ಷಣ ಎಚ್ಚೆತ್ತುಕೊಂಡ ಗ್ರಾಮಸ್ಥರು ಇಬ್ಬರು ಆರೋಪಿಗಳನ್ನು ಬೆನ್ನಟ್ಟಿ ಹಿಡಿದು ಪೊಲೀಸರಿಗೆ ಒಪ್ಪಿಸಿದ್ದಾರೆ.
ಬಂಧಿತರು ಅನ್ಯಕೋಮಿನ ಯುವಕರೆಂದು ಗುರುತಿಸಲಾಗಿದ್ದು, ಘಟನಾ ಸ್ಥಳದಿಂದ ಓರ್ವ ಆರೋಪಿ ಪರಾರಿಯಾಗಿದ್ದಾನೆ. ಮುರುಡೇಶ್ವರ ಪೊಲೀಸರು (police) ಪ್ರಕರಣ ದಾಖಲಿಸಿಕೊಂಡು ತಲೆಮರೆಸಿಕೊಂಡಿರುವ ಆರೋಪಿಗಾಗಿ ಶೋಧ ನಡೆಸುತ್ತಿದ್ದಾರೆ.
ಘಟನೆ ತಿಳಿಯುತ್ತಿದ್ದಂತೆಯೇ ಹಿಂದೂ ಜಾಗರಣಾ ವೇದಿಕೆ ಸೇರಿದಂತೆ ವಿವಿಧ ಸಂಘಟನೆಗಳ ಮುಖಂಡರು ಮುರುಡೇಶ್ವರ ಪೊಲೀಸ್ ಠಾಣೆಗೆ ದೌಡಾಯಿಸಿದ್ದಾರೆ. ದ್ವೇಷ ಹರಡುವ ಉದ್ದೇಶದಿಂದ ಈ ಕೃತ್ಯ ಎಸಗಲಾಗಿದೆ ಎಂದು ಆರೋಪಿಸಿರುವ ಮುಖಂಡರು, ತಪ್ಪಿತಸ್ಥರ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳುವಂತೆ ಆಗ್ರಹಿಸಿ ಠಾಣೆಗೆ ಮುತ್ತಿಗೆ ಹಾಕಲು ಯತ್ನಿಸಿದರು.






