S Shorts

Ramzan-Holi ಹಬ್ಬಕ್ಕೆ ಖಡಕ್ ಎಚ್ಚರಿಕೆ; ಶಾಂತಿ ಕದಡಿದರೆ ಕಠಿಣ ಕ್ರಮ: ಗೃಹ ಸಚಿವರ ಸೂಚನೆ

Posted By: Sagaradventure
Updated: Feb 24, 2026 | 10:12 AM

ಬೆಂಗಳೂರು: ರಂಜಾನ್ ಮತ್ತು ಹೋಳಿ ಹಬ್ಬಗಳ ಆಚರಣೆಯ ವೇಳೆ ಯಾರಾದರೂ ಕಾನೂನು ಕೈಗೆತ್ತಿಕೊಂಡು ಶಾಂತಿ ಕದಡಲು ಯತ್ನಿಸಿದರೆ ಮುಲಾಜಿಲ್ಲದೆ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ರಾಜ್ಯ ಗೃಹ ಸಚಿವ ಡಾ. ಜಿ. ಪರಮೇಶ್ವರ್ ಖಡಕ್ ಎಚ್ಚರಿಕೆ ನೀಡಿದ್ದಾರೆ.

ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಹಬ್ಬಗಳು ಇರುವುದು ಸಂತೋಷದ ಆಚರಣೆಗೆ ಹೊರತು ಸಂಘರ್ಷಕ್ಕಲ್ಲ. ಈ ವೇಳೆ ಶಾಂತಿ ಭಂಗಕ್ಕೆ ಪ್ರಯತ್ನಿಸಿದರೆ ಸಹಿಸುವುದಿಲ್ಲ. ಈ ಬಗ್ಗೆ ರಾಜ್ಯದ ಎಲ್ಲಾ ಪೊಲೀಸ್ ಅಧಿಕಾರಿಗಳಿಗೆ ಈಗಾಗಲೇ ಕಟ್ಟುನಿಟ್ಟಿನ ಸೂಚನೆ ನೀಡಲಾಗಿದೆ ಎಂದು ತಿಳಿಸಿದರು.

ಅಕ್ರಮ ಬಾಂಗ್ಲಾ ವಲಸಿಗರ ಪತ್ತೆಗೆ ಜಾಲ:

ರಾಜ್ಯದಲ್ಲಿ ಅಕ್ರಮವಾಗಿ ನೆಲೆಸಿರುವ ಬಾಂಗ್ಲಾದೇಶದ ವಲಸಿಗರ ವಿರುದ್ಧದ ಕಾರ್ಯಾಚರಣೆ ತೀವ್ರಗೊಂಡಿದೆ. “ಕಳೆದ ಒಂದು ತಿಂಗಳಿಂದ ಪ್ರತಿ ಜಿಲ್ಲೆಯಲ್ಲೂ ಅಕ್ರಮ ವಲಸಿಗರ ಪತ್ತೆಗೆ ವಿಶೇಷ ಕಾರ್ಯಾಚರಣೆ ನಡೆಯುತ್ತಿದೆ. ಕಾಫಿ ತೋಟಗಳು ಹಾಗೂ ನಿರ್ಮಾಣ ಹಂತದ ಕಟ್ಟಡಗಳಲ್ಲಿ (Construction Sites) ಅಕ್ರಮ ವಲಸಿಗರು ಕೆಲಸ ಮಾಡುತ್ತಿದ್ದಾರೆಂಬ ಮಾಹಿತಿಯನ್ನು ಗಂಭೀರವಾಗಿ ಪರಿಗಣಿಸಲಾಗಿದ್ದು, ಎಲ್ಲ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಿಗೆ (SPs) ಶೋಧ ಕಾರ್ಯ ನಡೆಸಲು ಸೂಚನೆ ನೀಡಲಾಗಿದೆ” ಎಂದು ಗೃಹ ಸಚಿವರು ಮಾಹಿತಿ ನೀಡಿದರು.

16 ವರ್ಷದೊಳಗಿನ ಮಕ್ಕಳಿಗೆ ಮೊಬೈಲ್ ಬ್ಯಾನ್?

ಇತ್ತೀಚೆಗೆ ಸಿಎಂ ಸಿದ್ದರಾಮಯ್ಯ ಪ್ರಸ್ತಾಪಿಸಿದ ಮಕ್ಕಳ ಮೊಬೈಲ್ ಬಳಕೆಯ ಮೇಲಿನ ನಿರ್ಬಂಧದ ಬಗ್ಗೆಯೂ ಗೃಹ ಸಚಿವರು ಪ್ರತಿಕ್ರಿಯಿಸಿದ್ದಾರೆ. 16 ವರ್ಷದೊಳಗಿನ ಮಕ್ಕಳಿಗೆ ಮೊಬೈಲ್ ಕೊಡುವುದರಿಂದ ಅವರ ವಿದ್ಯಾಭ್ಯಾಸದ ಮೇಲೆ ಗಂಭೀರ ದುಷ್ಪರಿಣಾಮ ಬೀರುತ್ತಿದೆ. ಈಗಾಗಲೇ ಹಲವು ದೇಶಗಳು ಮಕ್ಕಳ ಮೊಬೈಲ್ ಬಳಕೆಯನ್ನು ನಿಷೇಧಿಸಿವೆ. ಈ ಬಗ್ಗೆ ಮುಖ್ಯಮಂತ್ರಿಗಳು ಕೂಡ ಗಂಭೀರ ಚಿಂತನೆ ನಡೆಸಿದ್ದು, ಸಾಧಕ-ಬಾಧಕಗಳನ್ನು ಕೂಲಂಕಷವಾಗಿ ಅಧ್ಯಯನ ನಡೆಸಿ ಅಂತಿಮ ತೀರ್ಮಾನ ಕೈಗೊಳ್ಳಲಾಗುವುದು ಎಂದು ಪರಮೇಶ್ವರ್ ಸ್ಪಷ್ಟಪಡಿಸಿದರು.