S Shorts

Gold Coin Scam | ​ಗುಪ್ತ ನಿಧಿಯ ಆಸೆಗೆ ಬಿದ್ದು 10 ಲಕ್ಷ ರೂ. ಕಳೆದುಕೊಂಡ ವ್ಯಾಪಾರಿ: ನಕಲಿ ಚಿನ್ನದ ನಾಣ್ಯ ನೀಡಿ ವಂಚನೆ!

Posted By: Sagaradventure
Updated: Feb 24, 2026 | 9:55 AM

​ಸಿದ್ದಾಪುರ(ಉತ್ತರ ಕನ್ನಡ): ಜಮೀನಿನಲ್ಲಿ ಗುಂಡಿ ತೋಡುವಾಗ 2 ಕೆ.ಜಿ. ಬಂಗಾರದ ನಾಣ್ಯಗಳು ಸಿಕ್ಕಿವೆ, ಕಡಿಮೆ ಬೆಲೆಗೆ ಕೊಡುತ್ತೇನೆ ಎಂದು ನಂಬಿಸಿದ ಖದೀಮರ ಜಾಲವೊಂದು, ಬೆಳಗಾವಿ ಮೂಲದ ವ್ಯಾಪಾರಿಯೊಬ್ಬರಿಗೆ ನಕಲಿ ನಾಣ್ಯಗಳನ್ನು ನೀಡಿ ಬರೋಬ್ಬರಿ 10 ಲಕ್ಷ ರೂಪಾಯಿ ದೋಚಿ ಪರಾರಿಯಾಗಿರುವ ಘಟನೆ ಉತ್ತರ ಕನ್ನಡ ಜಿಲ್ಲೆಯ ಸಿದ್ದಾಪುರ ತಾಲೂಕಿನಲ್ಲಿ ಸೋಮವಾರ (ಫೆ. 23) ನಡೆದಿದೆ.

​ಬೆಳಗಾವಿ ಜಿಲ್ಲೆಯ ಮೂಡಲಗಿ ತಾಲೂಕಿನ ಕುರಿ ಮತ್ತು ಮಟನ್ ವ್ಯಾಪಾರಿ ಆಕಾಶ ಅಬುಬಕ್ಕರ್ ಕಲಾಲ್ (24) ವಂಚನೆಗೊಳಗಾದ ದುರ್ದೈವಿ. ಚಿಕ್ಕಮಗಳೂರಿನ ಹೊಸಳ್ಳಿ ಮೂಲದ ರವಿ ಹಾಗೂ ಆತನ 5 ಮಂದಿ ಅಪರಿಚಿತ ಸಹಚರರ ವಿರುದ್ಧ ಸಿದ್ದಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಖದೀಮರು ಖೆಡ್ಡಾಕ್ಕೆ ಕೆಡವಿದ್ದು ಹೇಗೆ? ಇಲ್ಲಿದೆ ರೋಚಕ ಹಿನ್ನೆಲೆ:

​ಕಳೆದ ಒಂದು ತಿಂಗಳ ಹಿಂದೆ ಫಿರ್ಯಾದಿ ಆಕಾಶ್ ಅವರ ಮಾವ ಕುಮಾರ ಭೀಮಸೀ ಕಲಾಲ್ ಎಂಬುವವರಿಗೆ ಸವದತ್ತಿ ಯಲ್ಲಮ್ಮನ ಜಾತ್ರೆಯಲ್ಲಿ ಆರೋಪಿ ರವಿಯ ಪರಿಚಯವಾಗಿತ್ತು. ಇಬ್ಬರೂ ಫೋನ್ ಮೂಲಕ ಸಂಪರ್ಕದಲ್ಲಿದ್ದರು. ​ಒಂದು ವಾರದ ಹಿಂದೆ ಕುಮಾರ್‌ಗೆ ಕರೆ ಮಾಡಿದ ರವಿ, “ನಮ್ಮ ಮನೆಯ ಪಕ್ಕ ನೆಲ ಅಗೆಯುವಾಗ 2 ಕೆ.ಜಿ. ಬಂಗಾರ ಸಿಕ್ಕಿದೆ, ನೀವು ಖರೀದಿಸುತ್ತೀರಾ?” ಎಂದು ಕೇಳಿದ್ದಾನೆ. ಆಗ ಕುಮಾರ್ ತಮ್ಮ ಅಳಿಯ ಆಕಾಶ್ ನಂಬರ್ ನೀಡಿದ್ದರು.

​ಫೆಬ್ರವರಿ 16 ರಂದು ಶಿವಮೊಗ್ಗದ ಹಾರುವಳ್ಳಿಗೆ ಆಕಾಶ್ ಮತ್ತು ಅವರ ಮಾವನನ್ನು ಕರೆಸಿಕೊಂಡ ಆರೋಪಿ ರವಿ, ಅವರಿಗೆ ಒಂದು ಬಂಗಾರದ ನಾಣ್ಯವನ್ನು ಸ್ಯಾಂಪಲ್ ಆಗಿ ನೀಡಿದ್ದ. ಆಕಾಶ್ ಅದನ್ನು ಊರಿಗೆ ಬಂದು ಪರೀಕ್ಷಿಸಿದಾಗ ಅದು ಅಸಲಿ ಬಂಗಾರ ಎಂದು ದೃಢಪಟ್ಟಿತ್ತು. ಸ್ಯಾಂಪಲ್ ನೋಡಿ ಸಂಪೂರ್ಣವಾಗಿ ನಂಬಿದ್ದ ಆಕಾಶ್‌ಗೆ ಫೆ. 21 ರಂದು ಕರೆ ಮಾಡಿದ ರವಿ, 10 ಲಕ್ಷ ರೂ. ಹಿಡಿದುಕೊಂಡು ಸಿದ್ದಾಪುರಕ್ಕೆ ಬರುವಂತೆ ಸೂಚಿಸಿದ್ದ. ಅದರಂತೆ ಆಕಾಶ್, ತಮ್ಮ ಮಾವ ಹಾಗೂ ತಮ್ಮನೊಂದಿಗೆ ಬಾಡಿಗೆ ಕಾರಿನಲ್ಲಿ (KA-22 MA-3070) ಭಾನುವಾರ ತಡರಾತ್ರಿ ಹೊರಟು ಸೋಮವಾರ ಬೆಳಿಗ್ಗೆ 8:00 ಗಂಟೆಗೆ ಸಿದ್ದಾಪುರ ಬಸ್ ನಿಲ್ದಾಣ ತಲುಪಿದ್ದರು.

​ನಕಲಿ ನಾಣ್ಯ ಕೊಟ್ಟು ಎಸ್ಕೇಪ್!

ಸಿದ್ದಾಪುರಕ್ಕೆ ಬಂದಿಳಿದ ವ್ಯಾಪಾರಿಯನ್ನು ಆರೋಪಿ ರವಿ ಕವಂಚೂರು ಊರಿನ ಹಿತ್ತಲಕೊಪ್ಪ ಕ್ರಾಸ್ ಬಳಿಯ ನಿರ್ಜನ ಪ್ರದೇಶಕ್ಕೆ ಕರೆಸಿಕೊಂಡಿದ್ದ. ಅಲ್ಲಿ ರವಿಯ ಜೊತೆಗೆ ಸುಮಾರು 30-35 ವರ್ಷ ವಯಸ್ಸಿನ ಇತರ 5 ಮಂದಿ ಅಪರಿಚಿತರು ಕಾಯುತ್ತಿದ್ದರು. ಬಿಳಿ ಬಟ್ಟೆಯಲ್ಲಿ ಸುತ್ತಿದ ಎರಡು ಗಂಟುಗಳನ್ನು ಆಕಾಶ್ ಕೈಗಿಟ್ಟು, ಅವರಿಂದ 10 ಲಕ್ಷ ರೂ. ನಗದು ಪಡೆದುಕೊಂಡಿದ್ದಾರೆ. ಹಣ ಕೈಸೇರುತ್ತಿದ್ದಂತೆ ಆರೋಪಿಗಳು ಅಲ್ಲಿಂದ ಕಾಲ್ಕಿತ್ತಿದ್ದಾರೆ.

​ಅನುಮಾನಗೊಂಡು ಆಕಾಶ್ ಅವರು ಗಂಟಿನಲ್ಲಿದ್ದ ನಾಣ್ಯವನ್ನು ಕಚ್ಚಿ ನೋಡಿದಾಗ ಅದು ನಕಲಿ ನಾಣ್ಯ ಎಂಬುದು ಬೆಳಕಿಗೆ ಬಂದಿದೆ. ತಾವು ಮೋಸ ಹೋಗಿರುವುದನ್ನು ಅರಿತ ವ್ಯಾಪಾರಿ, ಸೋಮವಾರ ರಾತ್ರಿ ಸಿದ್ದಾಪುರ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ವಂಚಕರ ಜಾಲಕ್ಕಾಗಿ ಶೋಧ ಆರಂಭಿಸಿದ್ದಾರೆ.