ಬೆಂಗಳೂರು: ರಾಜ್ಯದ ಶಕ್ತಿಸೌಧ ಬೆಂಗಳೂರಿನ ವಿಧಾನಸೌಧವನ್ನು ಬಾಂಬ್ ಇಟ್ಟು ಉಡಾಯಿಸಿದಂತೆ ಕೃತಕ ಬುದ್ಧಿಮತ್ತೆ (AI) ತಂತ್ರಜ್ಞಾನ ಬಳಸಿ ಎಡಿಟ್ ಮಾಡಲಾದ ಆಘಾತಕಾರಿ ವಿಡಿಯೋವೊಂದು ಇನ್‌ಸ್ಟಾಗ್ರಾಮ್‌ನಲ್ಲಿ ಹರಿದಾಡುತ್ತಿದ್ದು, ಸಾರ್ವಜನಿಕರಲ್ಲಿ ಭಾರಿ ಆತಂಕ ಹಾಗೂ ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ.
‘Jnx king Hg’ ಎಂಬ ಇನ್‌ಸ್ಟಾಗ್ರಾಮ್ ಖಾತೆಯಿಂದ ಕಿಡಿಗೇಡಿಯೊಬ್ಬ ಈ ವಿಡಿಯೋವನ್ನು ಅಪ್‌ಲೋಡ್ ಮಾಡಿದ್ದಾನೆ. ವಿಧಾನಸೌಧದ ಮುಂಭಾಗದ ದೃಶ್ಯಗಳನ್ನು ಚಿತ್ರೀಕರಿಸಿ, ನಂತರ ಎಐ ತಂತ್ರಜ್ಞಾನದ ನೆರವಿನಿಂದ ಕಟ್ಟಡವನ್ನು ಬಾಂಬ್ ಬ್ಲಾಸ್ಟ್ ಮೂಲಕ ಉಡಾಯಿಸಿದಂತೆ ಅತ್ಯಂತ ನೈಜವಾಗಿ ಎಡಿಟ್ ಮಾಡಲಾಗಿದೆ. ಅಷ್ಟೇ ಅಲ್ಲದೆ, “ವಿಧಾನಸೌಧವನ್ನು ಬಾಂಬ್‌ನಿಂದ ಉಡಾಯಿಸಿದ್ದೇನೆ” ಎಂಬ ಉದ್ರೇಕಕಾರಿ ಶೀರ್ಷಿಕೆಯನ್ನು ಹಾಕಿ, ತಾನೊಬ್ಬ ಭಯೋತ್ಪಾದಕ ಎಂಬಂತೆ ಬಿಂಬಿಸಿಕೊಳ್ಳಲು ಆತ ಯತ್ನಿಸಿದ್ದಾನೆ.
ಕಠಿಣ ಕ್ರಮಕ್ಕೆ ಸಾರ್ವಜನಿಕರ ಆಗ್ರಹ:
ನಾಡಹಬ್ಬ ದಸರಾ ಸಂಭ್ರಮದ ಹೊತ್ತಿನಲ್ಲಿ ಸಾರ್ವಜನಿಕವಾಗಿ ಭಯದ ವಾತಾವರಣ ಸೃಷ್ಟಿಸಲು ಯತ್ನಿಸಿದ ಈ ಕಿಡಿಗೇಡಿಯ ಕೃತ್ಯಕ್ಕೆ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕ ವಿರೋಧ ವ್ಯಕ್ತವಾಗಿದೆ. ರಾಜ್ಯದ ಅತ್ಯುನ್ನತ ಭದ್ರತಾ ವಲಯವಾಗಿರುವ ವಿಧಾನಸೌಧಕ್ಕೆ ಬೆದರಿಕೆ ಒಡ್ಡುವ ರೀತಿಯಲ್ಲಿ ವಿಡಿಯೋ ಸೃಷ್ಟಿಸಿರುವ ಈತನ ವಿರುದ್ಧ ಕಠಿಣ ಕಾನೂನು ಕ್ರಮ ಜರುಗಿಸುವಂತೆ ನೆಟ್ಟಿಗರು ಒತ್ತಾಯಿಸಿದ್ದಾರೆ.
ಈ ಪೋಸ್ಟ್‌ನ ಕಾಮೆಂಟ್ ವಿಭಾಗದಲ್ಲಿ ಹಲವು ನಾಗರಿಕರು ಬೆಂಗಳೂರು ನಗರ ಪೊಲೀಸರ ಅಧಿಕೃತ ಇನ್‌ಸ್ಟಾಗ್ರಾಮ್ ಖಾತೆಯನ್ನು ಟ್ಯಾಗ್ ಮಾಡಿದ್ದು, ಸೈಬರ್ ಕ್ರೈಂ ಪೊಲೀಸರು ತಕ್ಷಣವೇ ಈತನನ್ನು ಪತ್ತೆಹಚ್ಚಿ ಬಂಧಿಸಬೇಕೆಂದು ಆಗ್ರಹಿಸಿದ್ದಾರೆ.
