S Shorts

ಬೆಂಗಳೂರಿನಲ್ಲಿ ಮಿತಿಮೀರಿದ ವಾಯುಮಾಲಿನ್ಯ: BMTC ಚಾಲಕರು, ಟ್ರಾಫಿಕ್ ಪೊಲೀಸರ ಆರೋಗ್ಯಕ್ಕೇ ಕಂಟಕ!

ಬೆಂಗಳೂರಿನಲ್ಲಿ ಮಿತಿಮೀರಿದ ವಾಯುಮಾಲಿನ್ಯ: BMTC ಚಾಲಕರು, ಟ್ರಾಫಿಕ್ ಪೊಲೀಸರ ಆರೋಗ್ಯಕ್ಕೇ ಕಂಟಕ!
Author: Sagaradventure
Posted By: Sagaradventure
Updated: Nov 2, 2026 | 10:42 AM

ಬೆಂಗಳೂರು: ಸಿಲಿಕಾನ್ ಸಿಟಿಯಲ್ಲಿ ವಾಹನಗಳ ಸಂಖ್ಯೆ ದಿನದಿಂದ ದಿನಕ್ಕೆ ಗಣನೀಯವಾಗಿ ಹೆಚ್ಚುತ್ತಿದ್ದು, ಇದರೊಂದಿಗೆ ವಾಯುಮಾಲಿನ್ಯದ ಪ್ರಮಾಣವೂ ಏರಿಕೆಯಾಗುತ್ತಿದೆ. ನಗರದ ರಸ್ತೆಗಳಲ್ಲಿ ದೀರ್ಘಕಾಲ ಕೆಲಸ ಮಾಡುವ ಬಿಎಂಟಿಸಿ ಚಾಲಕರು, ನಿರ್ವಾಹಕರು, ಸಂಚಾರ ಪೊಲೀಸ್ ಸಿಬ್ಬಂದಿ, ಕಟ್ಟಡ ಕಾರ್ಮಿಕರು ಹಾಗೂ ಪೌರಕಾರ್ಮಿಕರ ಆರೋಗ್ಯದ ಮೇಲೆ ಈ ವಾಯುಮಾಲಿನ್ಯ ಗಂಭೀರ ಪರಿಣಾಮ ಬೀರುತ್ತಿರುವ ಆತಂಕಕಾರಿ ವಿಚಾರ ಸಮೀಕ್ಷೆಯೊಂದರಲ್ಲಿ ಬಹಿರಂಗವಾಗಿದೆ.

ಈ ಹಿಂದೆ ನಗರದಲ್ಲಿ ಪ್ರತಿದಿನ 2,500 ಹೊಸ ವಾಹನಗಳು ನೋಂದಣಿಯಾಗುತ್ತಿದ್ದರೆ, ಈಗ ಆ ಸಂಖ್ಯೆ 3,000ಕ್ಕೆ ಏರಿಕೆಯಾಗಿದೆ. ನಗರದಲ್ಲಿರುವ ಹಳೆಯ ವಾಹನಗಳ ಸಂಖ್ಯೆ ಬರೋಬ್ಬರಿ 1.40 ಕೋಟಿ ದಾಟಿದ್ದು, ವಾಹನಗಳು ಉಗುಳುವ ಹೊಗೆ ಹಾಗೂ ಧೂಳಿಗೆ ಹೊರಾಂಗಣ ಸಿಬ್ಬಂದಿ ನಿರಂತರವಾಗಿ ಒಡ್ಡಿಕೊಳ್ಳುತ್ತಿದ್ದಾರೆ.

3 ವರ್ಷಗಳ ಅಧ್ಯಯನದಲ್ಲಿ ಸ್ಫೋಟಕ ಮಾಹಿತಿ: 

‘ವಾಯು ಆಕ್ಯುಪೇಷನಲ್ ಅಂಡ್ ಎನ್ವಿರಾನ್‌ಮೆಂಟಲ್’ ಸಂಸ್ಥೆಯು ಸತತ 3 ವರ್ಷಗಳ ಕಾಲ 10 ಸಾವಿರಕ್ಕೂ ಹೆಚ್ಚು ಕಾರ್ಮಿಕರನ್ನು ಒಳಗೊಂಡ ಸಮೀಕ್ಷೆ ನಡೆಸಿದೆ. ಅಧ್ಯಯನದ ಭಾಗವಾಗಿ 4,517 ಬಿಎಂಟಿಸಿ ಚಾಲಕರು, 3,285 ಸಂಚಾರ ಪೊಲೀಸ್ ಸಿಬ್ಬಂದಿ, 2,169 ನಿರ್ಮಾಣ ಕಾರ್ಮಿಕರು ಹಾಗೂ 379 ಪೌರಕಾರ್ಮಿಕರನ್ನು ವೈದ್ಯಕೀಯ ಪರೀಕ್ಷೆಗೆ ಒಳಪಡಿಸಲಾಗಿತ್ತು.

ಉಸಿರಾಟದ ಸಮಸ್ಯೆಗೆ ತುತ್ತಾದವರು ಎಷ್ಟು?: 

ಅಧ್ಯಯನದ ವರದಿ ಪ್ರಕಾರ, ಬಿಎಂಟಿಸಿ ಚಾಲಕರಲ್ಲಿ ಅತಿಹೆಚ್ಚು ಅಂದರೆ ಶೇ. 2.6ರಷ್ಟು ಮಂದಿಗೆ ಉಸಿರಾಟ ಸಂಬಂಧಿತ ಸಮಸ್ಯೆಗಳು ಕಂಡುಬಂದಿವೆ. ಪೌರಕಾರ್ಮಿಕರಲ್ಲಿ ಈ ಪ್ರಮಾಣ ಶೇ. 2.3, ನಿರ್ಮಾಣ ಕಾರ್ಮಿಕರಲ್ಲಿ ಶೇ. 2.1 ಹಾಗೂ ಸಂಚಾರ ಪೊಲೀಸ್ ಸಿಬ್ಬಂದಿಯಲ್ಲಿ ಶೇ. 1ರಷ್ಟು ಸಮಸ್ಯೆ ಪತ್ತೆಯಾಗಿದೆ.

ಮಾಸ್ಕ್ ಬಳಕೆಯಲ್ಲಿ ತೀವ್ರ ನಿರ್ಲಕ್ಷ್ಯ:

ಮಾಲಿನ್ಯದ ನಡುವೆಯೂ ಸಿಬ್ಬಂದಿ ಮಾಸ್ಕ್ ಬಳಸದೆ ನಿರ್ಲಕ್ಷ್ಯ ವಹಿಸುತ್ತಿರುವುದು ಮತ್ತೊಂದು ಆತಂಕಕ್ಕೆ ಕಾರಣವಾಗಿದೆ. ಸಮೀಕ್ಷೆ ಪ್ರಕಾರ, ಶೇ. 88.2ರಷ್ಟು ಬಿಎಂಟಿಸಿ ಚಾಲಕರು ತಾವು ಕೆಲಸದ ವೇಳೆ ಎಂದಿಗೂ ಮಾಸ್ಕ್ ಬಳಸಿಲ್ಲ ಎಂದು ತಿಳಿಸಿದ್ದಾರೆ. ಸಂಚಾರ ಪೊಲೀಸ್ ಸಿಬ್ಬಂದಿಯಲ್ಲಿ ಶೇ. 55, ನಿರ್ಮಾಣ ಕಾರ್ಮಿಕರಲ್ಲಿ ಶೇ. 37.9 ಹಾಗೂ ಪೌರಕಾರ್ಮಿಕರಲ್ಲಿ ಶೇ. 16.3ರಷ್ಟು ಮಂದಿ ಮಾಸ್ಕ್ ಬಳಸದೆ ಮಾಲಿನ್ಯಕ್ಕೆ ನೇರವಾಗಿ ತುತ್ತಾಗುತ್ತಿದ್ದಾರೆ. ಇವರ ಆರೋಗ್ಯ ರಕ್ಷಣೆಯ ಕುರಿತು ಸರ್ಕಾರ ಹಾಗೂ ಇಲಾಖೆಗಳು ಹೆಚ್ಚಿನ ಗಮನ ಹರಿಸಬೇಕಾದ ತುರ್ತು ಅಗತ್ಯವಿದೆ ಎಂದು ವರದಿ ಎಚ್ಚರಿಸಿದೆ.