ಬಳ್ಳಾರಿ: ನಗರದಲ್ಲಿ ವಾಲ್ಮೀಕಿ ಪುತ್ಥಳಿ ಅನಾವರಣದ ಬ್ಯಾನರ್ ಅಳವಡಿಕೆ ವಿಚಾರವಾಗಿ ನಡೆದ ಗಲಾಟೆ ಹಾಗೂ ಫೈರಿಂಗ್ ಪ್ರಕರಣಕ್ಕೆ ಸಂಬಂಧಿಸಿದಂತೆ ಪರಿಸ್ಥಿತಿ ಬಿಗುವಿನಿಂದ ಕೂಡಿದೆ. ಈ ಘಟನೆಯನ್ನು ಖಂಡಿಸಿ ಇಂದು (ಶನಿವಾರ) ಭಾರತೀಯ ಜನತಾ ಪಾರ್ಟಿ (ಬಿಜೆಪಿ) ಬೃಹತ್ ಪ್ರತಿಭಟನಾ ಸಮಾವೇಶ ಹಮ್ಮಿಕೊಂಡಿದೆ.
ಈ ಹಿನ್ನೆಲೆಯಲ್ಲಿ ಮುಂಜಾಗ್ರತಾ ಕ್ರಮವಾಗಿ ಬಳ್ಳಾರಿ ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಮದ್ಯ ಮಾರಾಟವನ್ನು ಸಂಪೂರ್ಣ ನಿಷೇಧಿಸಲಾಗಿದೆ. ಜಿಲ್ಲಾಧಿಕಾರಿ ನಾಗೇಂದ್ರ ಪ್ರಸಾದ್ ಅವರ ಆದೇಶದಂತೆ, ನಿನ್ನೆ ರಾತ್ರಿ 10 ಗಂಟೆಯಿಂದಲೇ ಆರಂಭವಾಗಿರುವ ಈ ನಿಷೇಧಾಜ್ಞೆಯು ಭಾನುವಾರ ಬೆಳಿಗ್ಗೆ 6 ಗಂಟೆಯವರೆಗೂ ಜಾರಿಯಲ್ಲಿರುತ್ತದೆ.
ಮತ್ತೊಂದೆಡೆ, ಜನವರಿ 1, 2026 ರಂದು ನಡೆದ ಈ ಬ್ಯಾನರ್ ಸಂಘರ್ಷದ ಪ್ರಕರಣದ ತನಿಖೆಯನ್ನು ಸಿಐಡಿ (CID) ನಡೆಸುತ್ತಿದ್ದು, ತನಿಖೆಗೆ ಸಹಕಾರಿಯಾಗಲು ಸಾರ್ವಜನಿಕರ ನೆರವನ್ನು ಕೋರಿದೆ. ಘಟನೆಯ ಕುರಿತಾದ ವೀಡಿಯೋ ತುಣುಕುಗಳು ಯಾರ ಬಳಿಯಾದರೂ ಲಭ್ಯವಿದ್ದರೆ, ಅದನ್ನು ತನಿಖಾ ತಂಡಕ್ಕೆ ತಲುಪಿಸುವಂತೆ ಬಳ್ಳಾರಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ಸುಮನ್ ಡಿ. ಪೆನ್ನೇಕರ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಸಾಕ್ಷ್ಯ ಒದಗಿಸಲು ಇಚ್ಛಿಸುವವರು ಭಯಪಡುವ ಅಗತ್ಯವಿಲ್ಲ ಎಂದು ಅಭಯ ನೀಡಿರುವ ಎಸ್ಪಿ ಅವರು, ಮಾಹಿತಿ ನೀಡುವವರ ವಿವರಗಳನ್ನು ಅತ್ಯಂತ ಗೌಪ್ಯವಾಗಿ ಇಡಲಾಗುವುದು ಎಂದು ವಿಶೇಷ ಸೂಚನೆ ನೀಡಿದ್ದಾರೆ. ಸಾರ್ವಜನಿಕರು ತಮ್ಮಲ್ಲಿರುವ ವಿಡಿಯೋ ಸಾಕ್ಷ್ಯಗಳನ್ನು 6360573808 ಎಂಬ ವಾಟ್ಸಾಪ್ (WhatsApp) ಸಂಖ್ಯೆಗೆ ಕಳುಹಿಸಿಕೊಡಲು ಕೋರಲಾಗಿದೆ. ಸಂಘರ್ಷದ ಸತ್ಯಾಸತ್ಯತೆಯನ್ನು ಹೊರತರಲು ಪೊಲೀಸ್ ಇಲಾಖೆ ಸಾರ್ವಜನಿಕರ ಸಹಕಾರವನ್ನು ಎದುರು ನೋಡುತ್ತಿದೆ ಎಂದು ಮನವಿ ಮಾಡಿದ್ದಾರೆ.
