ಬಳ್ಳಾರಿ: ನಗರದಲ್ಲಿ ಹೊಸ ವರ್ಷದ ದಿನ (ಜ.1) ಮಹರ್ಷಿ ವಾಲ್ಮೀಕಿ ಪುತ್ಥಳಿ ಅನಾವರಣದ ವೇಳೆ ನಡೆದ ಬ್ಯಾನರ್ ವಿವಾದ ಮತ್ತು ಹಿಂಸಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾಜಿ ಸಚಿವ ಶ್ರೀರಾಮುಲು ಗಂಭೀರ ಆರೋಪ ಮಾಡಿದ್ದಾರೆ. “ಇದೊಂದು ಪೂರ್ವ ನಿಯೋಜಿತ ಕೃತ್ಯವಾಗಿದ್ದು, ಪ್ರಕರಣದ ಸತ್ಯಾಸತ್ಯತೆ ಹೊರಬರಲು ಹೈಕೋರ್ಟ್ ನ್ಯಾಯಮೂರ್ತಿ ಅಥವಾ ಸಿಬಿಐ (CBI) ತನಿಖೆಗೆ ಒಪ್ಪಿಸಬೇಕು” ಎಂದು ಅವರು ರಾಜ್ಯ ಸರ್ಕಾರವನ್ನು ಒತ್ತಾಯಿಸಿದ್ದಾರೆ.
ಶುಕ್ರವಾರ ಗಂಗಾವತಿ ಶಾಸಕ ಜನಾರ್ದನ ರೆಡ್ಡಿ ಅವರೊಂದಿಗೆ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಬಳ್ಳಾರಿ ಗಲಾಟೆಯ ಬಗ್ಗೆ ಸ್ಫೋಟಕ ಹೇಳಿಕೆ ನೀಡಿದ್ದಾರೆ. “ಪೊಲೀಸರ ಗುಂಡೇಟಿನಿಂದ ಕಾಂಗ್ರೆಸ್ ಕಾರ್ಯಕರ್ತ ಮೃತಪಟ್ಟಿಲ್ಲ. ಬದಲಿಗೆ ಶಾಸಕ ನಾರಾ ಭರತ್ ರೆಡ್ಡಿ ಕಡೆಯವರೇ ಹಾರಿಸಿದ ಗುಂಡಿಗೆ ಆತ ಬಲಿಯಾಗಿದ್ದಾನೆ. ಬಿಹಾರ ಮತ್ತು ಉತ್ತರ ಪ್ರದೇಶದಿಂದ ಶಾಸಕರು ಕರೆತಂದಿದ್ದ ಗೂಂಡಾಗಳೇ ಈ ಕೃತ್ಯ ಎಸಗಿದ್ದಾರೆ. ಕಾಂಗ್ರೆಸ್ಸಿಗರಿಂದಲೇ ಕಾಂಗ್ರೆಸ್ ಕಾರ್ಯಕರ್ತನ ಹತ್ಯೆಯಾಗಿದೆ” ಎಂದು ಶ್ರೀರಾಮುಲು ದೂರಿದ್ದಾರೆ.
ರೆಡ್ಡಿ ಹತ್ಯೆಗೆ ಸ್ಕೆಚ್?: “ಶಾಸಕ ಜನಾರ್ದನ ರೆಡ್ಡಿ ಅವರನ್ನು ಹತ್ಯೆ ಮಾಡಲು ದೊಡ್ಡ ಷಡ್ಯಂತ್ರ ನಡೆದಿತ್ತು. ದುರುದ್ದೇಶದಿಂದಲೇ ಮೊದಲೇ ಪ್ಲಾನ್ ಮಾಡಿಕೊಂಡು ರೆಡ್ಡಿ ಅವರ ಮನೆಯ ಮೇಲೆ ದಾಳಿ ನಡೆಸಲು ಪ್ರಯತ್ನಿಸಲಾಗಿದೆ. ಈ ಬಗ್ಗೆ ಪೊಲೀಸ್ ಇಲಾಖೆ ಸರಿಯಾದ ದಿಕ್ಕಿನಲ್ಲಿ ತನಿಖೆ ನಡೆಸಿದರೆ ಸತ್ಯ ಹೊರಬರಲಿದೆ. ಖಾಸಗಿ ಗನ್‌ಮ್ಯಾನ್ ಹಾರಿಸಿದ ಗುಂಡಿನಿಂದ ಸಾವು ಸಂಭವಿಸಿದೆ ಎಂದು ಎಸ್ಪಿ ಅವರೇ ಹೇಳಿಕೆ ನೀಡಿರುವುದು ಪ್ರಕರಣದ ಗಂಭೀರತೆಯನ್ನು ತೋರಿಸುತ್ತದೆ. ಆದರೆ ಜನಾರ್ದನ ರೆಡ್ಡಿಯಿಂದಲೇ ಸಾವು ಸಂಭವಿಸಿದೆ ಎಂಬ ಆರೋಪ ಸತ್ಯಕ್ಕೆ ದೂರವಾದದ್ದು” ಎಂದು ಅವರು ಸ್ಪಷ್ಟಪಡಿಸಿದರು.
ಘಟನೆಯ ಕುರಿತು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಹಾಗೂ ವಿಪಕ್ಷ ನಾಯಕ ಆರ್. ಅಶೋಕ್ ಅವರೊಂದಿಗೆ ಚರ್ಚಿಸಿ ಮಾಹಿತಿ ನೀಡಲಾಗಿದೆ. ಇಂದು (ಜ.2) ಸಂಜೆ ವಿಜಯೇಂದ್ರ ಅವರು ಬಳ್ಳಾರಿಗೆ ಆಗಮಿಸಿ ಜನಾರ್ದನ ರೆಡ್ಡಿ ಅವರನ್ನು ಭೇಟಿಯಾಗಲಿದ್ದಾರೆ ಎಂದು ಶ್ರೀರಾಮುಲು ತಿಳಿಸಿದರು.
