S Shorts

Akka Pade | ಎರಡು ಬಾಲ್ಯ ವಿವಾಹ ತಡೆದ ‘ಅಕ್ಕ ಪಡೆ’; 13 ಮತ್ತು 17 ವರ್ಷದ ಬಾಲಕಿಯರ ರಕ್ಷಣೆ!

Akka Pade | ಎರಡು ಬಾಲ್ಯ ವಿವಾಹ ತಡೆದ ‘ಅಕ್ಕ ಪಡೆ’; 13 ಮತ್ತು 17 ವರ್ಷದ ಬಾಲಕಿಯರ ರಕ್ಷಣೆ!
Author: Sagaradventure
Posted By: Sagaradventure
Updated: May 6, 2026 | 4:57 PM

ಬೆಳಗಾವಿ: ನಗರದಲ್ಲಿ ಮಹಿಳೆಯರು ಮತ್ತು ಹೆಣ್ಣುಮಕ್ಕಳ ರಕ್ಷಣೆಗಾಗಿ ರಚಿಸಲಾಗಿರುವ ಪೊಲೀಸ್ ಇಲಾಖೆಯ ವಿಶೇಷ ತಂಡ ‘ಅಕ್ಕ ಪಡೆ’ (Akka Pade) ಭರ್ಜರಿ ಕಾರ್ಯಾಚರಣೆ ನಡೆಸಿದ್ದು, ಒಂದೇ ದಿನ ಎರಡು ಪ್ರತ್ಯೇಕ ಬಾಲ್ಯ ವಿವಾಹ (Child marriage) ಪ್ರಕರಣಗಳನ್ನು ತಡೆದು ನಿಲ್ಲಿಸುವಲ್ಲಿ ಯಶಸ್ವಿಯಾಗಿದೆ.

ಬಾಲ್ಯ ವಿವಾಹ ಕಾನೂನುಬದ್ಧ ಅಪರಾಧ ಎಂಬುದು ತಿಳಿದಿದ್ದರೂ ಪೋಷಕರು ಈ ಮದುವೆಗಳಿಗೆ ಮುಂದಾಗಿದ್ದರು. ಖಚಿತ ಮಾಹಿತಿ ಲಭ್ಯವಾಗುತ್ತಿದ್ದಂತೆ ಕ್ಷಿಪ್ರ ಕಾರ್ಯಾಚರಣೆ ನಡೆಸಿದ ಅಕ್ಕ ಪಡೆಯು 13 ಮತ್ತು 17 ವರ್ಷದ ಇಬ್ಬರು ಅಪ್ರಾಪ್ತ ಬಾಲಕಿಯರನ್ನು ರಕ್ಷಣೆ ಮಾಡಿದೆ.

ನಡೆದಿದ್ದೇನು?

ಪ್ರಕರಣ 1 (ವಂಟಮೂರಿ ಕಾಲೋನಿ): ಬೆಳಗಾವಿಯ ವಂಟಮೂರಿ ಕಾಲೋನಿಯಲ್ಲಿ ಪೋಷಕರು 17 ವರ್ಷದ ಅಪ್ರಾಪ್ತ ಬಾಲಕಿಗೆ ಮದುವೆ ಮಾಡುತ್ತಿದ್ದರು. ಮನೆಯಲ್ಲಿ ಏನೋ ಕಾರ್ಯಕ್ರಮ ನಡೆಯುತ್ತಿರುವುದನ್ನು ಗಮನಿಸಿದ ಅಕ್ಕ ಪಡೆ, ಕುತೂಹಲದಿಂದ ಹೋಗಿ ಪರಿಶೀಲಿಸಿದಾಗ ಅಲ್ಲಿ ಬಾಲ್ಯ ವಿವಾಹ ನಡೆಯುತ್ತಿರುವುದು ಬೆಳಕಿಗೆ ಬಂದಿದೆ. ತಕ್ಷಣವೇ ಮದುವೆಯನ್ನು ತಡೆದು ಬಾಲಕಿಯನ್ನು ರಕ್ಷಿಸಿದ್ದಾರೆ.

ಪ್ರಕರಣ 2 (ಶಹಾಪುರ): ಇದೇ ರೀತಿಯಾಗಿ ಶಹಾಪುರ ಪ್ರದೇಶದಲ್ಲಿ 13 ವರ್ಷದ ಬಾಲಕಿಗೆ ಮದುವೆ ಮಾಡುತ್ತಿರುವ ಖಚಿತ ಮಾಹಿತಿ ಅಕ್ಕ ಪಡೆಗೆ ಲಭ್ಯವಾಗಿತ್ತು. ಕೂಡಲೇ ಅಧಿಕಾರಿಗಳ ತಂಡದೊಂದಿಗೆ ಸ್ಥಳಕ್ಕೆ ದೌಡಾಯಿಸಿದ ಅಕ್ಕ ಪಡೆ, ಪರಿಶೀಲನೆ ನಡೆಸಿ ವಿವಾಹವನ್ನು ತಡೆದು ನಿಲ್ಲಿಸಿದ್ದಾರೆ.

ಪೋಷಕರ ವಿರುದ್ಧ ದೂರು, ಕಮಿಷನರ್ ಮೆಚ್ಚುಗೆ

ಈ ಎರಡೂ ಪ್ರಕರಣಗಳಲ್ಲಿ ಕಾನೂನು ಉಲ್ಲಂಘಿಸಿ ಅಪ್ರಾಪ್ತ ವಯಸ್ಸಿನ ಹೆಣ್ಣುಮಕ್ಕಳಿಗೆ ಮದುವೆ ಮಾಡಲು ಮುಂದಾಗಿದ್ದ ಬಾಲಕಿಯರ ತಂದೆಯರ ವಿರುದ್ಧ ಪೊಲೀಸರು ದೂರು ದಾಖಲಿಸಿಕೊಂಡಿದ್ದು, ಮುಂದಿನ ಕಾನೂನು ಕ್ರಮ ಕೈಗೊಂಡಿದ್ದಾರೆ. ಸಕಾಲದಲ್ಲಿ ಸ್ಪಂದಿಸಿ ಇಬ್ಬರು ಅಪ್ರಾಪ್ತರ ಭವಿಷ್ಯವನ್ನು ಕಾಪಾಡಿದ ಅಕ್ಕ ಪಡೆಯ ಅತ್ಯುತ್ತಮ ಕಾರ್ಯಕ್ಕೆ ಬೆಳಗಾವಿ ಪೊಲೀಸ್ ಕಮಿಷನರ್ ಭೂಷಣ್ ಬೊರಸೆ (Bhushan Borase) ಅವರು ತೀವ್ರ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಏನಿದು ‘ಅಕ್ಕ ಪಡೆ’?: 

ಬೆಳಗಾವಿ ನಗರದಲ್ಲಿ ಪುಂಡ ಪೋಕರಿಗಳಿಂದ ಹೆಣ್ಣು ಮಕ್ಕಳ ರಕ್ಷಣೆಗೆಂದೇ ಪ್ರತ್ಯೇಕವಾಗಿ ‘ಅಕ್ಕ ಪಡೆ’ಯನ್ನು ನಿಯೋಜನೆ ಮಾಡಲಾಗಿದೆ. ಈ ಪಡೆಯು ಶಾಲಾ-ಕಾಲೇಜುಗಳು, ಬಸ್ ನಿಲ್ದಾಣಗಳು, ಮಾರುಕಟ್ಟೆಗಳು ಹಾಗೂ ಜನನಿಬಿಡ ಪ್ರಮುಖ ಸ್ಥಳಗಳಲ್ಲಿ ನಿರಂತರವಾಗಿ ಗಸ್ತು ತಿರುಗುತ್ತಾ ಮಹಿಳೆಯರ ಸುರಕ್ಷತೆಯನ್ನು ಖಚಿತಪಡಿಸುತ್ತಿದೆ.