ಬೆಂಗಳೂರು: ಬಾಡಿಗೆ ಹಣ ನೀಡುವಂತೆ ಕೇಳಿದ್ದಕ್ಕೆ ಮನೆಯ ಮಾಲೀಕರಾಗಿದ್ದ 42 ವರ್ಷದ ವಕೀಲರೊಬ್ಬರಿಗೆ ಇಬ್ಬರು ಬಾಡಿಗೆದಾರರು ಪಿಸ್ತೂಲ್‌ನಿಂದ ಹಣೆಗೆ ಗುಂಡಿಕ್ಕಿ ಭೀಕರವಾಗಿ ಹ*ತ್ಯೆ ಮಾಡಿರುವ ಆಘಾತಕಾರಿ ಘಟನೆ ಸಿಲಿಕಾನ್ ಸಿಟಿಯ ವೈಟ್‌ಫೀಲ್ಡ್ ಪೊಲೀಸ್ ಠಾಣಾ ವ್ಯಾಪ್ತಿಯ ಪಟ್ಟಂದೂರು ಅಗ್ರಹಾರದಲ್ಲಿ ಭಾನುವಾರ ರಾತ್ರಿ ನಡೆದಿದೆ.
ಹ*ತ್ಯೆಯಾದ ದುರ್ದೈವಿ ವಕೀಲರನ್ನು ಮಂಜುನಾಥ್ (42) ಎಂದು ಗುರುತಿಸಲಾಗಿದೆ. ಬಿಹಾರ ಮೂಲದ ಇಬ್ಬರು ಯುವಕರು ಮಂಜುನಾಥ್ ಅವರ ಮನೆಯಲ್ಲಿ ಬಾಡಿಗೆಗೆ ವಾಸವಾಗಿದ್ದರು.
ಬಾಡಿಗೆ ಹಣದ ವಿಚಾರಕ್ಕೆ ಶುರುವಾದ ಗಲಾಟೆ:
ಪೊಲೀಸರು ನೀಡಿರುವ ಪ್ರಾಥಮಿಕ ಮಾಹಿತಿಯ ಪ್ರಕಾರ, ಬಾಡಿಗೆ ಹಣ ಪಾವತಿಸದ ವಿಚಾರವಾಗಿ ಘಟನೆ ನಡೆಯುವುದಕ್ಕೆ ಒಂದು ಗಂಟೆ ಮುಂಚಿತವಾಗಿ ವಕೀಲ ಮಂಜುನಾಥ್ ಹಾಗೂ ಬಿಹಾರ ಮೂಲದ ಇಬ್ಬರು ಬಾಡಿಗೆದಾರರ ನಡುವೆ ತೀವ್ರ ಮಾತಿನ ಚಕಮಕಿ ನಡೆದಿತ್ತು. ಗಲಾಟೆ ವಿಕೋಪಕ್ಕೆ ಹೋದಾಗ, ಆರೋಪಿಗಳು ಏಕಾಏಕಿ ಬಂದೂಕು ಹೊರತೆಗೆದು ಮಂಜುನಾಥ್ ಅವರ ಹಣೆಗೆ ಗುಂಡು ಹಾರಿಸಿದ್ದಾರೆ. ತೀವ್ರ ರಕ್ತಸ್ರಾವದಿಂದ ಮಂಜುನಾಥ್ ಅವರು ಸ್ಥಳದಲ್ಲೇ ಕೊನೆಯುಸಿರೆಳೆದಿದ್ದು, ಕೃತ್ಯವೆಸಗಿದ ಆರೋಪಿಗಳು ಸ್ಥಳದಿಂದ ಪರಾರಿಯಾಗಿದ್ದಾರೆ.
ಘಟನಾ ಸ್ಥಳಕ್ಕೆ ವಿಧಿವಿಜ್ಞಾನ ಪ್ರಯೋಗಾಲಯದ (FSL) ತಜ್ಞರ ತಂಡ ಮತ್ತು ಹಿರಿಯ ಪೊಲೀಸ್ ಅಧಿಕಾರಿಗಳು ಭೇಟಿ ನೀಡಿ ಮಹಜರು ನಡೆಸಿದ್ದಾರೆ. ಬಳಿಕ ಮೃ*ತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಆಸ್ಪತ್ರೆಗೆ ರವಾನಿಸಲಾಗಿದೆ.
ವೈಟ್‌ಫೀಲ್ಡ್ ಪೊಲೀಸ್ ಠಾಣೆಯಲ್ಲಿ ಈ ಸಂಬಂಧ ಕೊ*ಲೆ ಪ್ರಕರಣ ದಾಖಲಾಗಿದ್ದು, ಕೊಲೆಗಡುಕ ಬಾಡಿಗೆದಾರರ ಬಂಧನಕ್ಕಾಗಿ ಪೊಲೀಸರು ತೀವ್ರ ಶೋಧ ಕಾರ್ಯಾಚರಣೆ ಮುಂದುವರಿಸಿದ್ದಾರೆ.
