S Shorts

ಬೆಂಗಳೂರಲ್ಲಿ Auto Gas ತೀವ್ರ ಕೊರತೆ: ಬಾಡಿಗೆ ಇಲ್ಲದೆ ಕಂಗೆಟ್ಟ ರಿಕ್ಷಾ ಚಾಲಕರು, ಬದುಕು ದುಸ್ತರ!

ಬೆಂಗಳೂರಲ್ಲಿ Auto Gas ತೀವ್ರ ಕೊರತೆ: ಬಾಡಿಗೆ ಇಲ್ಲದೆ ಕಂಗೆಟ್ಟ ರಿಕ್ಷಾ ಚಾಲಕರು, ಬದುಕು ದುಸ್ತರ!
Author: Sagaradventure
Posted By: Sagaradventure
Updated: Apr 10, 2026 | 4:00 PM

ಬೆಂಗಳೂರು: ನಗರದಲ್ಲಿ ಆಟೋ ಎಲ್‌ಪಿಜಿ (LPG) ಗ್ಯಾಸ್‌ ಕೊರತೆ ತೀವ್ರಗೊಂಡಿದ್ದು, ಆಟೋ ರಿಕ್ಷಾ ಚಾಲಕರ ಬದುಕು ದುಸ್ತರವಾಗಿದೆ. ಸಮರ್ಪಕವಾಗಿ ಗ್ಯಾಸ್ ಸಿಗದೆ ಸೀಮಿತ ಬಾಡಿಗೆಗೆ ಹೋಗುವಂತಾಗಿದ್ದು, ದೈನಂದಿನ ಜೀವನ ನಿರ್ವಹಣೆ, ವಾಹನದ ಸಾಲ ಮರುಪಾವತಿ ಹಾಗೂ ಮಕ್ಕಳ ಶಾಲಾ ಶುಲ್ಕ ಕಟ್ಟಲು ಹಣವಿಲ್ಲದೆ ಚಾಲಕರು ಕಂಗಾಲಾಗಿದ್ದಾರೆ.

ಗುರುವಾರದಿಂದ ಗ್ಯಾಸ್‌ ಪೂರೈಕೆಯಲ್ಲಿ ಕೊಂಚ ಸುಧಾರಣೆ ಕಂಡುಬಂದಿದ್ದರೂ, ಮೊದಲಿನಂತೆ ಬೇಡಿಕೆಗೆ ತಕ್ಕಷ್ಟು ಸ್ಟಾಕ್ ಲಭ್ಯವಾಗುತ್ತಿಲ್ಲ. ಇದರ ನೇರ ಪರಿಣಾಮವಾಗಿ ನಗರದ ಶೇ. 40ರಷ್ಟು ಆಟೋ ಎಲ್‌ಪಿಜಿ ಬಂಕ್‌ಗಳು ಗ್ಯಾಸ್ ಇಲ್ಲದೆ ಬಂದ್ ಆಗಿವೆ.

ಬಂಕ್‌ಗಳಲ್ಲಿ 300 ರೂ. ಗ್ಯಾಸ್ ಮಿತಿ!

ತಾತ್ಕಾಲಿಕ ಎಲ್‌ಪಿಜಿ ಪೂರೈಕೆ ಸವಾಲುಗಳ ಹಿನ್ನೆಲೆಯಲ್ಲಿ, ಕಾರ್ಯನಿರ್ವಹಿಸುತ್ತಿರುವ ಕೆಲವು ಬಂಕ್‌ಗಳಲ್ಲಿ ನಿತ್ಯದ ಹಂಚಿಕೆಗಾಗಿ ಹೊಸ ನಿಯಮ ಜಾರಿಗೆ ತರಲಾಗಿದೆ. “ಒಂದು ಆಟೋ ರಿಕ್ಷಾಗೆ ಗರಿಷ್ಠ 300 ರೂ. ವರೆಗೆ ಮಾತ್ರ ಗ್ಯಾಸ್‌ ತುಂಬಲಾಗುವುದು” ಎಂಬ ಸೂಚನಾ ಫಲಕಗಳನ್ನು ಬಂಕ್‌ಗಳ ಮುಂದೆ ಅಳವಡಿಸಲಾಗಿದೆ.

ಚಾಲಕರ ಗೋಳು: ದಿನವಿಡೀ ದುಡಿದರೂ 500 ರೂ. ಲಾಭವಿಲ್ಲ!

“ಮೊದಲು ದಿನಕ್ಕೆ 12 ಟ್ರಿಪ್ ಬಾಡಿಗೆಗೆ ಹೋಗುತ್ತಿದ್ದೆ. ನನಗಿಬ್ಬರು ಹೆಣ್ಣುಮಕ್ಕಳಿದ್ದು, ಅವರ ಶಿಕ್ಷಣಕ್ಕೆ ಹಣ ಬೇಕಿದೆ. ಈಗ ಗ್ಯಾಸ್ ಕೊರತೆಯಿಂದಾಗಿ ಲಾಭಾಂಶ ಸಂಪೂರ್ಣ ಕುಸಿದಿದೆ. ಮುಂಜಾನೆ 5 ಗಂಟೆಯಿಂದ ರಾತ್ರಿ 9ರವರೆಗೆ ಆಟೋ ಓಡಿಸಿದರೂ ದಿನಕ್ಕೆ 500 ರೂ. ಲಾಭ ಉಳಿಸುವುದೇ ಕಷ್ಟವಾಗಿದೆ” ಎಂದು ಆಟೋ ಚಾಲಕ ವೆಂಕಟೇಶ ತಮ್ಮ ಅಳಲು ತೋಡಿಕೊಂಡಿದ್ದಾರೆ.

“ಗ್ಯಾಸ್ ದರವೂ ತುಟ್ಟಿಯಾಗಿದೆ. ಈಗ ದುಡಿಯುವ ಹಣ ದೈನಂದಿನ ಖರ್ಚಿಗೂ ಸಾಲುತ್ತಿಲ್ಲ. ಇದೇ ರೀತಿ ಮುಂದುವರಿದರೆ ರಾಜ್ಯಾದ್ಯಂತ ಆಟೋ ಚಾಲಕರು ಬೀದಿಗಿಳಿದು ಧರಣಿ ಮಾಡಬೇಕಾಗುತ್ತದೆ” ಎಂದು ಚಾಮರಾಜಪೇಟೆಯ ನಜೀರ್‌ ಅಹಮ್ಮದ್‌ ಎಚ್ಚರಿಕೆ ನೀಡಿದ್ದಾರೆ.

ಸ್ಟಾಕ್ ಖಾಲಿ ಎಂದ ಬಂಕ್ ಸಿಬ್ಬಂದಿ

ವಿವಿಪುರದ ಬಸಪ್ಪ ವೃತ್ತದ ಬಳಿ ಇರುವ ಎಲ್‌ಪಿಜಿ ಸೂಪರ್‌ ಗ್ಯಾಸ್‌ ಬಂಕ್‌ನ ಸಿಬ್ಬಂದಿ ದರ್ಶನ್‌ ಮಾಹಿತಿ ನೀಡಿ, “ಕಳೆದ 2 ದಿನಗಳಿಂದ ನೂರಾರು ಆಟೋಗಳು ಬಂಕ್‌ಗೆ ಬರುತ್ತಿವೆ. ಬುಧವಾರ 5 ಸಾವಿರ ಲೀಟರ್ ಹಾಗೂ ಗುರುವಾರ ಮಧ್ಯಾಹ್ನದವರೆಗೆ 600 ಆಟೋಗಳಿಗೆ 5,700 ಲೀಟರ್ ಗ್ಯಾಸ್‌ ಪೂರೈಸಲಾಗಿದೆ. ಸದ್ಯ ಸ್ಟಾಕ್ ಸಂಪೂರ್ಣ ಖಾಲಿಯಾಗಿದೆ. ಶುಕ್ರವಾರ ಟ್ಯಾಂಕರ್ ಬಂದ ಬಳಿಕ ಎಂದಿನಂತೆ ವಿತರಣೆ ಮಾಡಲಾಗುವುದು. ಪ್ರಸ್ತುತ ನಮ್ಮಲ್ಲಿ ಲೀಟರ್‌ಗೆ 99 ರೂ. ದರ ನಿಗದಿಪಡಿಸಲಾಗಿದೆ” ಎಂದು ತಿಳಿಸಿದ್ದಾರೆ.