ಬೆಂಗಳೂರು: ಆಟೋ ಚಾಲಕರನ್ನು ‘ಸುಲಿಗೆಕೋರರು’ ಎಂದು ಜರಿದಿದ್ದ ಉದ್ಯಮಿ ಮೋಹನ್ ದಾಸ್ ಪೈ ಅವರ ಹೇಳಿಕೆಗೆ ಬೆಂಗಳೂರು ಆಟೋ ಚಾಲಕರ ಸಂಘಗಳು ತೀವ್ರ ಆಕ್ರೋಶ ವ್ಯಕ್ತಪಡಿಸಿವೆ. ಬೈಕ್ ಟ್ಯಾಕ್ಸಿಗಳನ್ನು ನಿಷೇಧಿಸುವಂತೆ ಪ್ರಧಾನಿ ಮೋದಿ ಅವರಿಗೆ ಆಟೋ ಒಕ್ಕೂಟಗಳು ಮನವಿ ಮಾಡಿದ ವರದಿಯೊಂದಕ್ಕೆ ಪ್ರತಿಕ್ರಿಯಿಸಿದ್ದ ಪೈ, “ನಾಗರಿಕರು ಆಟೋ ಚಾಲಕರನ್ನು ಏಕೆ ಬೆಂಬಲಿಸಬೇಕು? ಅವರಲ್ಲಿ ಎಷ್ಟು ಜನ ಮೀಟರ್ ಹಾಕುತ್ತಾರೆ? ಅನೇಕರು ದುಬಾರಿ ದರ ವಿಧಿಸಿ ಸುಲಿಗೆ ಮಾಡುತ್ತಾರೆ. ಇವರು ಬೆಂಬಲಕ್ಕೆ ಅರ್ಹರೇ?” ಎಂದು ಶನಿವಾರ ಟ್ವೀಟ್ ಮಾಡಿ ಆಕ್ರೋಶ ಹೊರಹಾಕಿದ್ದರು.
ಕೆಲವರು ಪೈ ಅವರ ಮಾತನ್ನು ಬೆಂಬಲಿಸಿದರೆ, ಇನ್ನು ಕೆಲವರು ಚಾಲಕರ ಪರ ನಿಂತಿದ್ದಾರೆ. ಇದಕ್ಕೆ ತಿರುಗೇಟು ನೀಡಿರುವ ಆಟೋ ರಿಕ್ಷಾ ಚಾಲಕರ ಒಕ್ಕೂಟದ (ARDU) ಪ್ರಧಾನ ಕಾರ್ಯದರ್ಶಿ ರುದ್ರಮೂರ್ತಿ, “ತಪ್ಪು ಮಾಡಿದವರನ್ನು ಶಿಕ್ಷಿಸಲಿ, ಅದಕ್ಕೆ ನಮ್ಮ ಅಭ್ಯಂತರವಿಲ್ಲ. ಆದರೆ ಕೆಲವರ ತಪ್ಪಿಗೆ ಇಡೀ ಆಟೋ ಚಾಲಕರ ಸಮುದಾಯವನ್ನೇ ದೂಷಿಸುವುದು ಅನ್ಯಾಯ” ಎಂದು ಹೇಳಿದ್ದಾರೆ. “ಸುಲಿಗೆ ಮಾಡುವವರು, ಸೇವೆ ನಿರಾಕರಿಸುವವರ ವಿರುದ್ಧ ಕ್ರಮ ಕೈಗೊಳ್ಳಲಿ. ನಾವು ಚಾಲಕರಿಗೆ ಮೃದು ಕೌಶಲ್ಯಗಳನ್ನು (Soft Skills) ಕಲಿಸಲು ಶಾಲೆ ತೆರೆಯಲೂ ಸಿದ್ಧರಿದ್ದೇವೆ. ಆದರೆ ನಾವೊಬ್ಬರೇ ಇದನ್ನು ಮಾಡಲು ಸಾಧ್ಯವಿಲ್ಲ, ಇದಕ್ಕೆ ಸರ್ಕಾರದ ಬೆಂಬಲ ಬೇಕು” ಎಂದು ಅವರು ತಿಳಿಸಿದ್ದಾರೆ.
ಆ್ಯಪ್ ಆಧಾರಿತ ಸೇವೆಗಳ ಹೊಡೆತ:
‘ನಮ್ಮ ಯಾತ್ರಿ’ ಆಟೋ ಚಾಲಕ ಗೌತಮ್ ಮಾತನಾಡಿ, ಸ್ಥಿರ ದರಗಳ ಕಾರಣದಿಂದ ಪ್ರಯಾಣಿಕರು ಆ್ಯಪ್ ಆಧಾರಿತ ಸೇವೆಗಳಿಗೆ ಮೊರೆ ಹೋಗುತ್ತಿದ್ದಾರೆ. ಇದರಿಂದ ಆ್ಯಪ್ ಬಳಸದ ಸಾಮಾನ್ಯ ಚಾಲಕರ ಮೇಲೆ ಒತ್ತಡ ಹೆಚ್ಚಿದೆ ಎಂದು ವಿವರಿಸಿದರು. ಇನ್ನು ಮೆಟ್ರೋ ಮಾದರಿಯಲ್ಲಿ ಆಟೋಗಳಿಗೂ ‘ದರ ನಿಗದಿ ಸಮಿತಿ’ ರಚಿಸಬೇಕು ಎಂದು ಸಾಮಾಜಿಕ ಕಾರ್ಯಕರ್ತರು ಒತ್ತಾಯಿಸಿದ್ದಾರೆ. ಆಟೋ ದರಗಳು ಹಣದುಬ್ಬರಕ್ಕೆ ಅನುಗುಣವಾಗಿ ಏರಿಕೆಯಾಗಿಲ್ಲ, ಹೀಗಾಗಿ ವೈಜ್ಞಾನಿಕ ದರ ನಿಗದಿ ಸೂತ್ರದ ಅಗತ್ಯವಿದೆ ಎಂಬ ಅಭಿಪ್ರಾಯ ವ್ಯಕ್ತವಾಗಿದೆ.
ಆರೋಗ್ಯ ವಿಮೆ, ಪಿಂಚಣಿಗೆ ಒತ್ತಾಯ:
ಆದರ್ಶ ಆಟೋ ಚಾಲಕರ ಒಕ್ಕೂಟದ ಪ್ರಧಾನ ಕಾರ್ಯದರ್ಶಿ ಸಿ. ಸಂಪತ್ ಮಾತನಾಡಿ, “ಆಟೋಗಳು ನಗರದ ಸಾರಿಗೆ ವ್ಯವಸ್ಥೆಯ ಅವಿಭಾಜ್ಯ ಅಂಗ. ಚಾಲಕರನ್ನು ದೂಷಿಸುವ ಬದಲು ಪ್ರಯಾಣಿಕರು ಸರ್ಕಾರದ ಬಳಿ ಆಟೋಗಳಿಗೆ ಪೂರಕ ನೀತಿಗಳನ್ನು ರೂಪಿಸಲು ಒತ್ತಾಯಿಸಬೇಕು. ನಿವೃತ್ತ ಚಾಲಕರಿಗೆ ಪಿಂಚಣಿ ನಿಧಿ ಮತ್ತು ಆರೋಗ್ಯ ವಿಮೆಯ ಅಗತ್ಯವಿದೆ. ಕಡಿಮೆ ಮೀಟರ್ ದರ ಮತ್ತು ಆ್ಯಪ್‌ಗಳ ಕನಿಷ್ಠ ಗಳಿಕೆಯಿಂದ ಜೀವನ ನಡೆಸುವುದು ಕಷ್ಟವಾಗುತ್ತಿದೆ,” ಎಂದು ಅಳಲು ತೋಡಿಕೊಂಡರು.
ಹೊಸದಾಗಿ ನಗರಕ್ಕೆ ಬಂದಿರುವ ಚಾಲಕ ಸುನಿಲ್ ಕುಮಾರ್, ಆಟೋ ನೋಂದಣಿಗೆ ಬ್ರೋಕರ್‌ಗಳ ಮೊರೆ ಹೋಗಬೇಕಾದ ಪರಿಸ್ಥಿತಿ ಇದೆ. ಆದರೆ ಬೈಕ್ ಟ್ಯಾಕ್ಸಿಗಳು ಯಾವುದೇ ನಿಯಮಗಳಿಲ್ಲದೆ ರಾಜಾರೋಷವಾಗಿ ಓಡಾಡುತ್ತಿವೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
