S Shorts

ಬೆಂಗಳೂರಿನಲ್ಲಿ ರೋಡ್ ರೇಜ್: CEOಗೆ ವಕೀಲನಾಗಿ ನೆರವಾದ ‘ಜೆಮಿನಿ’ ಎಐ, ಡ್ಯಾಶ್ ಕ್ಯಾಮ್ ವಿಡಿಯೋ ಕಮಾಲ್!

ಬೆಂಗಳೂರಿನಲ್ಲಿ ರೋಡ್ ರೇಜ್: CEOಗೆ ವಕೀಲನಾಗಿ ನೆರವಾದ ‘ಜೆಮಿನಿ’ ಎಐ, ಡ್ಯಾಶ್ ಕ್ಯಾಮ್ ವಿಡಿಯೋ ಕಮಾಲ್!
Author: Sagaradventure
Posted By: Sagaradventure
Updated: Sep 21, 2026 | 12:59 PM

ರಾಜಧಾನಿ ಬೆಂಗಳೂರಿನಲ್ಲಿ ನಡೆದ ರೋಡ್ ರೇಜ್ (ರಸ್ತೆ ಗಲಾಟೆ) ಪ್ರಕರಣವೊಂದರಲ್ಲಿ ಸಿಇಒ ಒಬ್ಬರಿಗೆ ಕೃತಕ ಬುದ್ಧಿಮತ್ತೆ (AI) ಸಾಧನವಾದ ‘ಜೆಮಿನಿ’ (Gemini) ವಕೀಲನಂತೆ ನೆರವಾಗಿದೆ. 

ಕೆಲವು ದಿನಗಳ ಹಿಂದೆ ಸೋನಿ ಸಿಗ್ನಲ್ ಮತ್ತು ಈಜಿಪುರ ಸಿಗ್ನಲ್ ನಡುವೆ ಸಿದ್ಧಾರ್ಥ್ ಡಿಯಾಲಾನಿ ಎಂಬ ಸಿಇಒ ಅವರ ಕಾರಿಗೆ ಬೈಕ್ ಸವಾರನೊಬ್ಬ ಅಡ್ಡಗಟ್ಟಿ ರಂಪಾಟ ಮಾಡಿದ್ದ. ತನ್ನ ಬೈಕ್‌ಗೆ ಕಾರು ತಾಗಿದೆ ಎಂದು ಆರೋಪಿಸಿದ ಆತ, ಕಾರಿನ ಬಾಗಿಲಿಗೆ ಕಾಲಿನಿಂದ ಒದ್ದು ಜಖಂಗೊಳಿಸಿದ್ದನು. ಅಷ್ಟಕ್ಕೇ ಸುಮ್ಮನಾಗದ ಆತ, ತನ್ನ ಬೈಕ್ ಅನ್ನು ಕಾರಿನ ಹಿಂಭಾಗಕ್ಕೆ ಗುದ್ದಿಸಿ, ಕಾರನ್ನು ಹಿಂದಿಕ್ಕಿ ಪದೇ ಪದೇ ಬ್ರೇಕ್ ಹಾಕುತ್ತಾ ಬೆದರಿಸಲು ಯತ್ನಿಸಿದ್ದ. 

ಆದರೆ, ಆತನ ಈ ಎಲ್ಲಾ ಪುಂಡಾಟಿಕೆಗಳು ಕಾರಿನಲ್ಲಿದ್ದ ಡ್ಯಾಶ್ ಕ್ಯಾಮ್‌ನಲ್ಲಿ ಸ್ಪಷ್ಟವಾಗಿ ಸೆರೆಯಾಗಿದ್ದವು. ಆರಂಭದಲ್ಲಿ ಕಾರಿನಲ್ಲಾದ ಡೆಂಟ್ ನೋಡಿ ಸುಮ್ಮನಾಗಲು ನಿರ್ಧರಿಸಿದ್ದ ಸಿದ್ಧಾರ್ಥ್, ನಂತರ ಆತನಿಗೆ ತಕ್ಕ ಪಾಠ ಕಲಿಸಲು ನಿರ್ಧರಿಸಿದ್ದರು.

ಈ ಸಂದರ್ಭದಲ್ಲಿ ಅವರಿಗೆ ಗೂಗಲ್‌ನ ಜೆಮಿನಿ ಎಐ ನೆರವಿಗೆ ಬಂದಿದೆ. ಪೊಲೀಸ್ ಠಾಣೆಗೆ ನೀಡಬೇಕಾದ ದೂರಿನ ಪ್ರತಿಯನ್ನು ಅತ್ಯಂತ ಕಟ್ಟುನಿಟ್ಟಾದ ಕಾನೂನು ಪದಗಳೊಂದಿಗೆ ಡ್ರಾಫ್ಟ್ ಮಾಡಲು ಜೆಮಿನಿ ಸಹಾಯ ಮಾಡಿದೆ. ಅಲ್ಲದೆ, ಪೊಲೀಸರಿಗೆ ದೂರು ನೀಡಿದ ಬಳಿಕ ಅವರಿಂದ ಕಡ್ಡಾಯವಾಗಿ ಲಿಖಿತ ಸ್ವೀಕೃತಿ (Acknowledgement) ಪಡೆಯುವಂತೆಯೂ ಜೆಮಿನಿ ಸಲಹೆ ನೀಡಿತ್ತು. 

ಡ್ಯಾಶ್ ಕ್ಯಾಮ್ ವಿಡಿಯೋ ಹಾಗೂ ಜೆಮಿನಿ ರಚಿಸಿಕೊಟ್ಟ ದೂರಿನ ಪ್ರತಿಯೊಂದಿಗೆ ಕೋರಮಂಗಲ ಪೊಲೀಸ್ ಠಾಣೆ ಮೆಟ್ಟಿಲೇರಿದ ಸಿದ್ಧಾರ್ಥ್, ಸ್ವೀಕೃತಿ ಪ್ರತಿ ಇಲ್ಲದೆ ಅಲ್ಲಿಂದ ಕದಲುವುದಿಲ್ಲ ಎಂದು ಪಟ್ಟುಹಿಡಿದಿದ್ದರು. ಅವರ ದೃಢ ನಿರ್ಧಾರವನ್ನು ಗಮನಿಸಿದ ಪೊಲೀಸರು, ಸಿನಿಮಾಗಳಲ್ಲಿ ತೋರಿಸುವಂತೆ ಅವರಿಗೆ ಸಮೋಸಾ ನೀಡಿ ಉಪಚರಿಸಿ, ಡ್ಯಾಶ್ ಕ್ಯಾಮ್‌ನಲ್ಲಿದ್ದ ನಂಬರ್ ಪ್ಲೇಟ್ ಆಧಾರದ ಮೇಲೆ ಡೇಟಾಬೇಸ್‌ನಿಂದ ಬೈಕ್ ಸವಾರನ ಫೋನ್ ನಂಬರ್ ಪತ್ತೆ ಹಚ್ಚಿ ಆತನನ್ನು ಠಾಣೆಗೆ ಕರೆಸಿದ್ದಾರೆ.

ಪೊಲೀಸ್ ಠಾಣೆಗೆ ಬಂದ ಪುಂಡ ಬೈಕ್ ಸವಾರ, ಆರಂಭದಲ್ಲಿ ಕಾರು ಚಾಲಕನದ್ದೇ ತಪ್ಪು ಎಂದು ವಾದಿಸಲು ಯತ್ನಿಸಿದ್ದಾನೆ. ಆದರೆ, ಪೊಲೀಸರು ಡ್ಯಾಶ್ ಕ್ಯಾಮ್ ವಿಡಿಯೋ, ಫೋಟೋಗಳನ್ನು ಮುಂದಿಟ್ಟು, ಎಫ್‌ಐಆರ್ ಹಾಗೂ ಕ್ರಿಮಿನಲ್ ಪ್ರಕರಣ ದಾಖಲಿಸುವ ಎಚ್ಚರಿಕೆ ನೀಡಿದ ತಕ್ಷಣ ಆತ ತನ್ನ ತಪ್ಪನ್ನು ಒಪ್ಪಿಕೊಂಡಿದ್ದಾನೆ. ಅಂತಿಮವಾಗಿ ಆತ ಲಿಖಿತ ಕ್ಷಮೆಯಾಚನೆ ಬರೆದುಕೊಟ್ಟು, ಕಾರಿನ ಹಾನಿಗೆ ಪರಿಹಾರದ ಹಣವನ್ನೂ ಪಾವತಿಸಿದ್ದಾನೆ. 

ಯಾವುದೇ ಲಂಚವಿಲ್ಲದೆ ಕೋರಮಂಗಲ ಪೊಲೀಸರು ಅತ್ಯಂತ ವೃತ್ತಿಪರವಾಗಿ ವರ್ತಿಸಿದ್ದಾರೆ ಎಂದು ಸಿದ್ಧಾರ್ಥ್ ಮೆಚ್ಚುಗೆ ವ್ಯಕ್ತಪಡಿಸಿದ್ದು, “ಜೆಮಿನಿ ಈಗ ನನ್ನ ವಕೀಲ” ಎಂದು ಎಕ್ಸ್ ಖಾತೆಯಲ್ಲಿ ಬರೆದುಕೊಂಡಿದ್ದಾರೆ. ಅವರ ಈ ಪೋಸ್ಟ್‌ಗೆ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕ ಪ್ರತಿಕ್ರಿಯೆ ವ್ಯಕ್ತವಾಗಿದ್ದು, ಕಾರುಗಳಿಗೆ ಸೀಟ್ ಬೆಲ್ಟ್ ಮತ್ತು ಏರ್‌ಬ್ಯಾಗ್‌ಗಳಷ್ಟೇ ಡ್ಯಾಶ್ ಕ್ಯಾಮ್ ಕೂಡ ಅತ್ಯಗತ್ಯ ಎಂದು ನೆಟ್ಟಿಗರು ಕಾಮೆಂಟ್ ಮಾಡುತ್ತಿದ್ದಾರೆ.