ರೇಣುಕಾಸ್ವಾಮಿ ಬರ್ಬರ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾಫಿ ಸಾಕ್ಷಿ (ಅಪ್ರೂವರ್) ಆದೇಶವನ್ನು ಪ್ರಶ್ನಿಸಿ ನಟ ದರ್ಶನ್ ಪರವಾಗಿ ಅವರ ಪತ್ನಿ ವಿಜಯಲಕ್ಷ್ಮಿ ಅವರು ಹೈಕೋರ್ಟ್‌ಗೆ ರಿಟ್ ಅರ್ಜಿ ಸಲ್ಲಿಸಿದ್ದಾರೆ. ಪ್ರಕರಣದ 2 ನೇ ಆರೋಪಿಯಾಗಿರುವ (A2) ದರ್ಶನ್ ಅವರನ್ನು ಸಿಲುಕಿಸುವ ಉದ್ದೇಶದಿಂದ, ಮತ್ತೋರ್ವ ಆರೋಪಿ ಪ್ರದೋಷ್ ಮಾಫಿ ಸಾಕ್ಷಿಯಾಗಲು ಕೆಳಹಂತದ ನ್ಯಾಯಾಲಯ ನೀಡಿದ್ದ ಅನುಮತಿಯನ್ನು ರದ್ದುಪಡಿಸುವಂತೆ ಅವರು ಅರ್ಜಿಯಲ್ಲಿ ಮನವಿ ಮಾಡಿದ್ದಾರೆ.
ದರ್ಶನ್ ಅವರ ವಿರೋಧಿಗಳ ಪ್ರಭಾವ ಹಾಗೂ ಬೇರೆಯವರ ಚಿತಾವಣೆಯಿಂದಲೇ ಪ್ರದೋಷ್ ತನ್ನ ಸ್ವಾರ್ಥಕ್ಕಾಗಿ ಮಾಫಿ ಸಾಕ್ಷಿಯಾಗಲು ಅರ್ಜಿ ಸಲ್ಲಿಸಿದ್ದಾರೆ ಎಂದು ವಿಜಯಲಕ್ಷ್ಮಿ ಗಂಭೀರ ಆರೋಪ ಮಾಡಿದ್ದಾರೆ.
ಕಳೆದ 2 ವರ್ಷಗಳಿಂದ ಈ ಬಗ್ಗೆ ಯಾವುದೇ ಅರ್ಜಿ ಸಲ್ಲಿಸದ ಪ್ರದೋಷ್, ಈಗ ಏಕಾಏಕಿ ಮಾಫಿ ಸಾಕ್ಷಿಯಾಗಲು ಮುಂದಾಗಿರುವುದು ಹಲವು ಅನುಮಾನಗಳಿಗೆ ಎಡೆಮಾಡಿಕೊಟ್ಟಿದೆ. ಜೈಲಿನಲ್ಲಿ ಅನಧಿಕೃತವಾಗಿ ಮೊಬೈಲ್ ಬಳಸುತ್ತಿರುವ ಪ್ರದೋಷ್, ತನ್ನ ಪತ್ನಿಯೊಂದಿಗೆ ನಿರಂತರ ಸಂಪರ್ಕದಲ್ಲಿದ್ದಾನೆ. ಅಪ್ರೂವರ್ ಆಗುವ ಪ್ರಕ್ರಿಯೆಗಾಗಿ ಇದೇ ಮೊಬೈಲ್ ಅನ್ನು ಬಳಸಲಾಗಿದೆ ಎಂಬ ಬಲವಾದ ಶಂಕೆ ಇದೆ ಎಂದು ಅರ್ಜಿಯಲ್ಲಿ ಉಲ್ಲೇಖಿಸಲಾಗಿದೆ.
ಈ ಅಕ್ರಮ ಮೊಬೈಲ್ ಬಳಕೆಗೆ ಸಂಬಂಧಿಸಿದಂತೆ ಪ್ರದೋಷ್ ವಿರುದ್ಧ ಎನ್‌ಸಿಆರ್ (NCR) ಕೂಡ ದಾಖಲಾಗಿದ್ದು, ಸದ್ಯ ತನಿಖೆ ನಡೆಯುತ್ತಿದೆ. ಈ ಎಲ್ಲಾ ಬೆಳವಣಿಗೆಗಳ ಕುರಿತು ನ್ಯಾಯಾಲಯಕ್ಕೆ ಮೆಮೋ ಸಲ್ಲಿಸಿ ಗಮನಕ್ಕೆ ತಂದಿದ್ದರೂ, ಅದನ್ನು ಪರಿಗಣಿಸದೆ ಮಾಫಿ ಸಾಕ್ಷಿಯಾಗಲು ಆದೇಶ ನೀಡಲಾಗಿದೆ. ಹೀಗಾಗಿ ಈ ಆದೇಶವನ್ನು ತಕ್ಷಣವೇ ರದ್ದುಪಡಿಸಬೇಕು ಎಂದು ಅರ್ಜಿದಾರರು ನ್ಯಾಯಾಲಯವನ್ನು ಒತ್ತಾಯಿಸಿದ್ದಾರೆ.
