S Shorts

ಅವಧಿ ಮೀರಿದ ಆಹಾರ, ಅಸ್ವಚ್ಛತೆ: ಬೆಂಗಳೂರಿನ ಪ್ರತಿಷ್ಠಿತ Chairman’s Club ಅಡುಗೆ ಮನೆ ಬಂದ್!

ಅವಧಿ ಮೀರಿದ ಆಹಾರ, ಅಸ್ವಚ್ಛತೆ: ಬೆಂಗಳೂರಿನ ಪ್ರತಿಷ್ಠಿತ Chairman’s Club ಅಡುಗೆ ಮನೆ ಬಂದ್!
Author: Sagaradventure
Posted By: Sagaradventure
Updated: Sep 4, 2026 | 11:50 AM

ಬೆಂಗಳೂರಿನ ಸಹಕಾರನಗರದಲ್ಲಿರುವ ಪ್ರತಿಷ್ಠಿತ ‘ಚೇರ್‌ಮ್ಯಾನ್ಸ್ ರೆಸಾರ್ಟ್ ಅಂಡ್ ಕ್ಲಬ್’ (Chairman’s Club) ಅಡುಗೆ ಮನೆಯ ಮೇಲೆ ಆಹಾರ ಸುರಕ್ಷತಾ ಇಲಾಖೆಯ ಅಧಿಕಾರಿಗಳು ಗುರುವಾರ(ಸೆ.3) ದಿಢೀರ್ ದಾಳಿ ನಡೆಸಿದ್ದು, ಅತಿಯಾದ ಗಲೀಜು ಮತ್ತು ಅವಧಿ ಮೀರಿದ ಆಹಾರ ಪದಾರ್ಥಗಳು ಪತ್ತೆಯಾದ ಹಿನ್ನೆಲೆಯಲ್ಲಿ ಅಡುಗೆ ಕೋಣೆಯನ್ನು ತಕ್ಷಣದಿಂದ ಜಾರಿಗೆ ಬರುವಂತೆ ಬಂದ್ ಮಾಡಿಸಿದ್ದಾರೆ.

ಆಹಾರ ಸುರಕ್ಷತಾ ಅಧಿಕಾರಿಗಳ ತಪಾಸಣೆ ವೇಳೆ ಅಡುಗೆ ಮನೆಯಲ್ಲಿ ಬರೋಬ್ಬರಿ 40 ಕೆಜಿ ಅವಧಿ ಮೀರಿದ ಒಣ ಮೆಣಸಿನಕಾಯಿ, ಲೇಬಲ್ ಇಲ್ಲದ ಅನುಮಾನಾಸ್ಪದ ಆಹಾರ ಪದಾರ್ಥಗಳು ಹಾಗೂ ನಿಷೇಧಿತ ಕೃತಕ ಬಣ್ಣಗಳನ್ನು ಬಳಸಿ ಅಡುಗೆ ಮಾಡುತ್ತಿರುವುದು ಪತ್ತೆಯಾಗಿದೆ. 

ಇದರ ಜೊತೆಗೆ ಅಡುಗೆ ತಯಾರಿಸುವ ಸ್ಥಳದಲ್ಲಿ ತೀವ್ರ ಅಸ್ವಚ್ಛತೆ, ಕ್ರಾಸ್-ಕಂಟ್ಯಾಮಿನೇಷನ್ (ಕಚ್ಚಾ ಮತ್ತು ಬೇಯಿಸಿದ ಆಹಾರವನ್ನು ಒಟ್ಟಿಗೆ ಇಡುವುದು) ಹಾಗೂ ಅನಾರೋಗ್ಯಕರ ಶೇಖರಣಾ ವಿಧಾನಗಳನ್ನು ಅನುಸರಿಸುತ್ತಿರುವುದು ಕಂಡುಬಂದಿದೆ. ಈ ಹಿನ್ನೆಲೆಯಲ್ಲಿ ಅಧಿಕಾರಿಗಳು ಎಲ್ಲಾ ಕಳಪೆ ಸಾಮಗ್ರಿಗಳನ್ನು ವಶಪಡಿಸಿಕೊಂಡು, ಅಡುಗೆ ಮನೆಯನ್ನು ಮುಚ್ಚಿಸಿ, ‘ಆಹಾರ ಸುರಕ್ಷತೆ ಮತ್ತು ಮಾನದಂಡಗಳ ಕಾಯ್ದೆ’ಯಡಿ ಕ್ಲಬ್ ಆಡಳಿತ ಮಂಡಳಿ ವಿರುದ್ಧ ಕಠಿಣ ಕಾನೂನು ಕ್ರಮಕ್ಕೆ ಮುಂದಾಗಿದ್ದಾರೆ.

ರಾಜಧಾನಿಯ ಪ್ರತಿಷ್ಠಿತ ಕ್ಲಬ್‌ಗಳು ಮತ್ತು ಹೈಫೈ ಹೋಟೆಲ್‌ಗಳ ಮೇಲೆ ಆಹಾರ ಸುರಕ್ಷತಾ ಇಲಾಖೆಯು ಕಾರ್ಯಾಚರಣೆ ಚುರುಕುಗೊಳಿಸಿರುವ ಭಾಗವಾಗಿ ಈ ದಾಳಿ ನಡೆದಿದೆ. ಲಕ್ಷಾಂತರ ರೂಪಾಯಿ ಸದಸ್ಯತ್ವ ಶುಲ್ಕ ಮತ್ತು ದುಬಾರಿ ಬಿಲ್ ವಸೂಲಿ ಮಾಡುವ ಇಂತಹ ಎಲೈಟ್ ಕ್ಲಬ್‌ಗಳ ಒಳಗಿನ ಅಡುಗೆ ಕೋಣೆಗಳಲ್ಲಿ ಇಷ್ಟೊಂದು ನೀಚ ಮಟ್ಟದ ನೈರ್ಮಲ್ಯ ಇರುವುದನ್ನು ಕಂಡು ಸಾರ್ವಜನಿಕರು ಹಾಗೂ ಗ್ರಾಹಕರು ತೀವ್ರ ಆಕ್ರೋಶ ಮತ್ತು ಅಸಹ್ಯ ವ್ಯಕ್ತಪಡಿಸಿದ್ದಾರೆ.