ಬೆಂಗಳೂರಿನ ಬಾಗಲಗುಂಟೆ ಠಾಣೆ ವ್ಯಾಪ್ತಿಯಲ್ಲಿ ಸಾರ್ವಜನಿಕರಿಗೆ ಎಲೆಕ್ಟ್ರಿಕಲ್ ದ್ವಿಚಕ್ರ ವಾಹನಗಳನ್ನು ಸಬ್ಸಿಡಿ ದರದಲ್ಲಿ ಕೊಡಿಸುವುದಾಗಿ ನಂಬಿಸಿ ಕೋಟ್ಯಂತರ ರೂಪಾಯಿ ವಂಚಿಸಿರುವ ಬೃಹತ್ ಜಾಲವೊಂದನ್ನು ಪೊಲೀಸರು ಭೇದಿಸಿದ್ದಾರೆ. ಈ ವಂಚನೆ ಪ್ರಕರಣಕ್ಕೆ ಸಂಬಂಧಿಸಿದಂತೆ ಇವಿ ಶೋರೂಮ್ ಮಾಲೀಕರಾದ ಹನುಮಂತ ಬಿಲ್ಕರ್ ಮತ್ತು ರಾಕೇಶ್ ಬಿಲ್ಕರ್ ಎಂಬುವವರನ್ನು ಪೊಲೀಸರು ಬಂಧಿಸಿದ್ದಾರೆ. ಇವರ ಜೊತೆಗೆ ಜ್ಯೋತಿ ಬಿಲ್ಕರ್, ಭೂಮಿಕಾ ಮತ್ತು ರತ್ನಮ್ಮ ಎಂಬುವವರ ವಿರುದ್ಧವೂ ವಂಚನೆ ದೂರು ದಾಖಲಾಗಿದೆ.
ಆರೋಪಿ ಹನುಮಂತ ಬಿಲ್ಕರ್ ಬಾಗಲಗುಂಟೆಯಲ್ಲಿ ಇವಿ ಸ್ಕೂಟರ್ ಶೋರೂಂ ಇಟ್ಟುಕೊಂಡಿದ್ದನು. ಇಲ್ಲಿಗೆ ಬೈಕ್ ಖರೀದಿಸಲು ಬರುವ ಅಮಾಯಕ ಗ್ರಾಹಕರಿಗೆ ಪ್ರಧಾನ ಮಂತ್ರಿ ಯೋಜನೆಯಡಿ ಸಬ್ಸಿಡಿಯಲ್ಲಿ ಬೈಕ್ ನೀಡುವುದಾಗಿ ಆಮಿಷವೊಡ್ಡುತ್ತಿದ್ದನು. ಗ್ರಾಹಕರಿಂದ ಕೇವಲ 20 ಸಾವಿರ ರೂ. ಡೆಪಾಸಿಟ್ ಹಾಗೂ ಬ್ಯಾಂಕ್ ಲೋನ್‌ಗಾಗಿ ದಾಖಲೆಗಳನ್ನು ಪಡೆದುಕೊಳ್ಳುತ್ತಿದ್ದ ಈ ವಂಚಕರು, ಅದೇ ದಾಖಲೆಗಳನ್ನು ಬಳಸಿ ಗ್ರಾಹಕರ ಹೆಸರಿನಲ್ಲೇ 1.5 ಲಕ್ಷ ರೂ. ಬ್ಯಾಂಕ್ ಸಾಲ ಮಾಡಿಸುತ್ತಿದ್ದರು. ಬ್ಯಾಂಕ್ ಸಾಲದ 20 ಕಂತುಗಳನ್ನು ನಾವೇ ಕಟ್ಟುತ್ತೇವೆ, ನೀವು ಕೇವಲ 4 ಕಂತುಗಳನ್ನು ಕಟ್ಟಿದರೆ ಸಾಕು ಎಂದು ಗ್ರಾಹಕರನ್ನು ನಂಬಿಸಿ ಬ್ಯಾಂಕ್ ಸಾಲದ ಪೂರ್ಣ ಹಣವನ್ನು ತಮ್ಮ ಖಾತೆಗೆ ವರ್ಗಾಯಿಸಿಕೊಳ್ಳುತ್ತಿದ್ದರು. ಈ ರೀತಿ ಬರೋಬ್ಬರಿ 900ಕ್ಕೂ ಹೆಚ್ಚು ಜನರಿಗೆ ವಂಚಿಸಿ, ಕಚೇರಿಗೆ ಬೀಗ ಜಡಿದು ಪರಾರಿಯಾಗಿದ್ದರು.
ಹಲವರಿಗೆ ಬೈಕ್ ನೀಡಿ ಅವರ ತಲೆಗೆ ಲಕ್ಷಾಂತರ ರೂಪಾಯಿ ಸಾಲ ಕಟ್ಟಿದ್ದ ಈ ವಂಚಕರು, ಇನ್ನೂ ಕೆಲವರಿಂದ ಹಣ ಪಡೆದು ಬೈಕ್ ಕೂಡ ನೀಡದೆ ವಂಚಿಸಿದ್ದಾರೆ. ಹಣ ಪಾವತಿಸಿದರೂ ದ್ವಿಚಕ್ರ ವಾಹನ ಸಿಗದೆ ಮೋಸ ಹೋದ ಭೈರವೇಶ್ವರ ನಗರದ ರಮೇಶ್ ಎಂಬುವವರು ಬಾಗಲಗುಂಟೆ ಠಾಣೆಗೆ ಹಾಗೂ ಚೊಕ್ಕಸಂದ್ರದ ಸ್ಮೃತಿ ಎಂಬುವವರು ಪೀಣ್ಯ ಠಾಣೆಗೆ ದೂರು ನೀಡಿದ್ದರು. ಮತ್ತೋರ್ವ ದೂರುದಾರ ಸುರೇಶ್ ಎಂಬುವವರು 2025ರ ಡಿಸೆಂಬರ್‌ನಲ್ಲಿ 8ನೇ ಮೈಲಿ ಸಿಗ್ನಲ್ ಬಳಿಯಿರುವ ಬಿಲ್ಕರ್ ಟೆಕ್ನಾಲಜಿ ಶೋರೂಂಗೆ ತೆರಳಿದ್ದಾಗ, ವಾಹನದ ಒಟ್ಟು ಮೊತ್ತ 70 ಸಾವಿರ ರೂ. ಇದ್ದು, ಕೇವಲ 13 ಸಾವಿರ ರೂ. ನಗದು ಪಾವತಿಸುವಂತೆ ತಿಳಿಸಿದ್ದರು. ಉಳಿದ ಹಣಕ್ಕೆ ಸಾಲ ಮಾಡಿಸಿ, ನಾವೇ ಇಎಂಐ ಕಟ್ಟಿ ನಂತರ ಆ ಹಣ ನಿಮ್ಮ ಖಾತೆಗೆ ಸಬ್ಸಿಡಿಯಾಗಿ ಜಮೆಯಾಗುತ್ತದೆ ಎಂದು ನಂಬಿಸಿದ್ದರು.
ಆರೋಪಿಗಳ ಮಾತು ನಂಬಿದ ಸುರೇಶ್ 13 ಸಾವಿರ ರೂ. ಪಾವತಿಸಿ ತಮ್ಮ ಪಾನ್ ಕಾರ್ಡ್ ಹಾಗೂ ಬ್ಯಾಂಕ್ ಪಾಸ್ ಬುಕ್ ನೀಡಿದ್ದರು. ಇದನ್ನೇ ಬಂಡವಾಳ ಮಾಡಿಕೊಂಡ ವಂಚಕರು ಸುರೇಶ್ ಹೆಸರಿನಲ್ಲಿ ಆಪ್ ಮೂಲಕ 1 ಲಕ್ಷ ರೂ. ಸಾಲ ಪಡೆದು ಆ ಹಣವನ್ನು ತಮ್ಮ ಖಾತೆಗೆ ಜಮೆ ಮಾಡಿಕೊಂಡಿದ್ದರು. ಮುಂದಿನ 7 ದಿನಗಳಲ್ಲಿ ಬೈಕ್ ಡೆಲಿವರಿ ನೀಡುವುದಾಗಿ ಹೇಳಿದ್ದ ಆರೋಪಿಗಳು, ದಿನ ಕಳೆದರೂ ಸಬೂಬು ಹೇಳುತ್ತಾ ಕಾಲಹರಣ ಮಾಡಿದ್ದರು. ಅಂತಿಮವಾಗಿ ಬೈಕ್ ಕೂಡ ಸಿಗದೆ, ಇತ್ತ ವಂಚಕರು ತಮ್ಮ ಹೆಸರಿನಲ್ಲಿ ಮಾಡಿಸಿದ್ದ ಸಾಲಕ್ಕೆ ಇಎಂಐ ಕಟ್ಟುವಂತೆ ಬ್ಯಾಂಕ್‌ನಿಂದ ಕರೆಗಳು ಬರಲಾರಂಭಿಸಿದಾಗ ತಾವು ಮೋಸ ಹೋಗಿರುವುದು ಗ್ರಾಹಕರಿಗೆ ಅರಿವಾಗಿದೆ. ಸದ್ಯ ಆರೋಪಿಗಳನ್ನು ಬಂಧಿಸಿರುವ ಪೊಲೀಸರು ತನಿಖೆಯನ್ನು ಚುರುಕುಗೊಳಿಸಿದ್ದಾರೆ.
