ರಾಜಧಾನಿ ಬೆಂಗಳೂರಿನಲ್ಲಿ ಮಂಗಳವಾರ ಸಂಜೆ ಹಾಗೂ ರಾತ್ರಿ ಸುರಿದ ಧಾರಾಕಾರ ಮಳೆಗೆ ನಗರದಾದ್ಯಂತ ಭಾರೀ ಅವಾಂತರಗಳು ಸೃಷ್ಟಿಯಾಗಿವೆ. ಮಳೆಯ ಅಬ್ಬರಕ್ಕೆ ದೊಮ್ಮಲೂರಿನಲ್ಲಿರುವ ಆರ್ಮಿ ಕಾಂಪೌಂಡ್ ಗೋಡೆಯೊಂದು ದಿಢೀರ್ ಕುಸಿದು ಬಿದ್ದ ಪರಿಣಾಮ ನಾಲ್ಕು ಹಸುಗಳು ಹಾಗೂ ಒಂದು ಕರು ಮೃ*ತಪಟ್ಟಿವೆ. ಜಾನುವಾರುಗಳ ಮಾಲೀಕ ಮುನಿರಾಜು ಅವರು ಈ ದುರ್ಘಟನೆಯಲ್ಲಿ ಗಾಯಗೊಂಡಿದ್ದು, ಅವರನ್ನು ನಗರದ ಖಾಸಗಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ನಗರದ ಹಲವೆಡೆ ರಸ್ತೆಗಳ ಮೇಲೆ ಮರಗಳು ಉರುಳಿ ಬಿದ್ದಿದ್ದು, ತಗ್ಗು ಪ್ರದೇಶಗಳಿಗೆ ನೀರು ನುಗ್ಗಿ ಜನಜೀವನ ಸಂಪೂರ್ಣ ಅಸ್ತವ್ಯಸ್ತಗೊಂಡಿದೆ.
ಮಳೆಯ ಪರಿಣಾಮ ಬುಧವಾರ ಬೆಳಗ್ಗೆಯೂ ನಗರದ ಹಲವು ರಸ್ತೆಗಳಲ್ಲಿ ಸಂಚಾರ ದಟ್ಟಣೆ ಉಂಟಾಗಿದ್ದು, ಟ್ರಾಫಿಕ್ ಪೊಲೀಸರು ಸಾಮಾಜಿಕ ಜಾಲತಾಣ ಎಕ್ಸ್‌ನಲ್ಲಿ (X) ವಾಹನ ಸವಾರರಿಗೆ ಮಾಹಿತಿ ನೀಡಿದ್ದಾರೆ. ಕೋಡೆ ಅಂಡರ್‌ಪಾಸ್ ಬಳಿ ನೀರು ನಿಂತಿರುವುದರಿಂದ ಮೆಜೆಸ್ಟಿಕ್ ಕಡೆಗೆ ಹಾಗೂ ಅಗರದಿಂದ ಸಿಲ್ಕ್ ಬೋರ್ಡ್ ಜಂಕ್ಷನ್ ಕಡೆಗೆ ನಿಧಾನಗತಿಯ ಸಂಚಾರವಿದೆ.
ಕಂಠೀರವ ಸ್ಟೇಡಿಯಂ ಜಂಕ್ಷನ್ ಬಳಿ ಮರ ಬಿದ್ದಿರುವುದರಿಂದ ಸಿದ್ದಲಿಂಗಯ್ಯ ಜಂಕ್ಷನ್ ಕಡೆಗೆ ಮತ್ತು ಸಿಬಿ ರಸ್ತೆಯಲ್ಲಿ ಮರ ಬಿದ್ದ ಪರಿಣಾಮ ಇಎಸ್‌ಐ ಜಂಕ್ಷನ್ ಕಡೆಗೆ ಸಂಚಾರಕ್ಕೆ ಅಡಚಣೆಯಾಗಿದೆ. ಇದೇ ವೇಳೆ ಮಲ್ಲತ್ತಹಳ್ಳಿಯಲ್ಲಿ ಬೃಹತ್ ಮರವೊಂದು ರಸ್ತೆಯ ಮೇಲೆಯೇ ಉರುಳಿ ಬಿದ್ದು ಆಟೋವೊಂದು ಜಖಂಗೊಂಡಿದ್ದು, ಪೊಲೀಸರು ಹಾಗೂ ಬಿಬಿಎಂಪಿ ಸಿಬ್ಬಂದಿ ಕಾರ್ಯಾಚರಣೆ ನಡೆಸಿ ಮರವನ್ನು ತೆರವುಗೊಳಿಸಿದ್ದಾರೆ.
ಕೋರಮಂಗಲದಲ್ಲಿ ಮಳೆ ನೀರು ಕುತ್ತಿಗೆ ಎತ್ತರಕ್ಕೆ ನಿಂತ ಪರಿಣಾಮ ಜಾನುವಾರುಗಳು ತತ್ತರಿಸಿವೆ. ಕೆಲವು ರಾಸುಗಳು ನೀರಿನಲ್ಲಿ ಪರದಾಡಿದ್ದರೆ, ಇನ್ನು ಕೆಲವು ನೀರಿನ ರಭಸಕ್ಕೆ ಕೊಚ್ಚಿ ಹೋಗಿರುವ ದಾರುಣ ದೃಶ್ಯಗಳು ಕಂಡುಬಂದಿವೆ. ಮೆಜೆಸ್ಟಿಕ್ ಮಾರ್ಕೆಟ್, ಜಯನಗರ, ಶಾಂತಿನಗರ, ರಾಜಾಜಿನಗರ, ವಿಜಯನಗರ ಸೇರಿದಂತೆ ಹಲವು ರಸ್ತೆಗಳು ಜಲಾವೃತಗೊಂಡಿದ್ದವು.
ರಿಚ್ಮಂಡ್ ಟೌನ್ ಎದುರಿನ ರಸ್ತೆಯಲ್ಲಿ ನೀರು ನಿಂತು ವಾಹನಗಳು ಭಾಗಶಃ ಮುಳುಗಡೆಯಾಗಿದ್ದವು. ಜಯನಗರ, ಲಕ್ಕಸಂದ್ರ, ಡಬಲ್ ರೋಡ್ ಹಾಗೂ ವಿಲ್ಸನ್ ಗಾರ್ಡನ್ ಭಾಗಗಳಲ್ಲಿ ವಾಹನ ಸವಾರರು ಮಳೆಯಿಂದ ರಕ್ಷಣೆ ಪಡೆಯಲು ಅಂಗಡಿಗಳ ಮೊರೆ ಹೋದರು.
ತಗ್ಗು ಪ್ರದೇಶಗಳಲ್ಲಿ ಮಳೆಯ ಆರ್ಭಟಕ್ಕೆ ನಿವಾಸಿಗಳು ತೀವ್ರ ಸಂಕಷ್ಟ ಅನುಭವಿಸಿದ್ದಾರೆ. ಬಾಗಲಗುಂಟೆಯ ಭೈರವೇಶ್ವರ ನಗರದಲ್ಲಿ ಹದಿನೈದಕ್ಕೂ ಹೆಚ್ಚು ಮನೆಗಳಿಗೆ ಮಳೆ ನೀರು ನುಗ್ಗಿದ್ದು, ನೀರನ್ನು ಹೊರಹಾಕಲು ಜನರು ಹರಸಾಹಸ ಪಡಬೇಕಾಯಿತು. ಶಿವಾನಂದ ಸರ್ಕಲ್ ಹಾಗೂ ರೈಲ್ವೆ ಅಂಡರ್‌ಪಾಸ್‌ಗಳಲ್ಲಿ ನೀರು ತುಂಬಿಕೊಂಡು ವಾಹನ ಸವಾರರು ಪರದಾಡಿದರು.
ಸಂಜೆ ಕೆಲಸ ಮುಗಿಸಿ ಮನೆಗೆ ತೆರಳುತ್ತಿದ್ದವರು ತಾವರೆಕೆರೆ ಮೆಟ್ರೋ ಸ್ಟೇಷನ್ ರಸ್ತೆಯಲ್ಲಿ ನೀರು ನಿಂತಿದ್ದರಿಂದ ತೀವ್ರ ತೊಂದರೆ ಅನುಭವಿಸಿದರು. ಜೊತೆಗೆ ಹೊಸೂರು ರಸ್ತೆ ಹಾಗೂ ಬನ್ನೇರುಘಟ್ಟ ರಸ್ತೆಯಲ್ಲಿ ಭಾರಿ ಟ್ರಾಫಿಕ್ ಜಾಮ್ ಉಂಟಾಗಿ ಸಾರ್ವಜನಿಕರು ಮಳೆಯಲ್ಲೇ ಸಿಲುಕಿಕೊಂಡು ಹೈರಾಣಾದರು.
