S Shorts

ಹೈಟೆನ್ಶನ್ ವೈರ್ ತಗುಲಿ ಅಕ್ಕ-ತಮ್ಮನಿಗೆ ಗಂಭೀರ ಗಾಯ: BESCOM ವಿರುದ್ಧ ಆಕ್ರೋಶ

ಹೈಟೆನ್ಶನ್ ವೈರ್ ತಗುಲಿ ಅಕ್ಕ-ತಮ್ಮನಿಗೆ ಗಂಭೀರ ಗಾಯ: BESCOM ವಿರುದ್ಧ ಆಕ್ರೋಶ
Author: Sagaradventure
Posted By: Sagaradventure
Updated: Oct 19, 2026 | 1:47 PM

ಬೆಂಗಳೂರು: ಮನೆ ಮುಂದೆ ಹಾದು ಹೋಗಿದ್ದ ಹೈಟೆನ್ಶನ್ ವಿದ್ಯುತ್ ವೈರ್ (High-tension wire) ತಗುಲಿ ಅಕ್ಕ-ತಮ್ಮ ಇಬ್ಬರು ಗಂಭೀರವಾಗಿ ಗಾಯಗೊಂಡಿರುವ ಹೃದಯವಿದ್ರಾವಕ ಘಟನೆ ರಾಜಾನುಕುಂಟೆ ಪೊಲೀಸ್ ಠಾಣೆ ವ್ಯಾಪ್ತಿಯ ಅದ್ದೇವಿಶ್ವನಾಥಪುರದಲ್ಲಿ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ.

ಅದ್ದೇವಿಶ್ವನಾಥಪುರದ ನಿವಾಸಿಗಳಾದ ಕೊಟ್ರೇಶಿ ಮತ್ತು ಸುಧಾ ದಂಪತಿಯ ಪುತ್ರಿ ಸಾನ್ವಿ (13) ಮತ್ತು ಆಕೆಯ ತಮ್ಮ ಅಯಾನ್ (5) ಗಾಯಗೊಂಡಿರುವ ಮಕ್ಕಳಾಗಿದ್ದು, ಪ್ರಸ್ತುತ ವಿಕ್ಟೋರಿಯಾ ಆಸ್ಪತ್ರೆಯ (Victoria Hospital) ತುರ್ತು ನಿಗಾ ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಈ ಘಟನೆಗೆ ಮನೆ ಮಾಲೀಕರು ಮತ್ತು ಬೆಸ್ಕಾಂ (BESCOM) ಅಧಿಕಾರಿಗಳ ನಿರ್ಲಕ್ಷ್ಯವೇ ಕಾರಣ ಎಂದು ಮಕ್ಕಳ ಪೋಷಕರು ದೂರು ನೀಡಿದ್ದಾರೆ.

ಘಟನೆ ನಡೆದಿದ್ದೇಗೆ? 

ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುತ್ತಿರುವ ಕೊಟ್ರೇಶ್ ದಂಪತಿ, ಎರಡೂವರೆ ತಿಂಗಳ ಹಿಂದಷ್ಟೇ ಅದ್ದೇವಿಶ್ವನಾಥಪುರದಲ್ಲಿ 2ನೇ ಮಹಡಿಯ ಮನೆಯೊಂದನ್ನು ಬಾಡಿಗೆಗೆ ಪಡೆದಿದ್ದರು. ಕಳೆದ ತಿಂಗಳು ಅಕ್ಕ-ತಮ್ಮ ಮನೆ ಮುಂಭಾಗ ಆಟವಾಡುತ್ತಿದ್ದಾಗ, ಕಟ್ಟಡ ನಿರ್ಮಾಣಕ್ಕೆ ಬಳಸುವ ಲೋಹದ ಅಳತೆ ಟೇಪ್‌ ಅನ್ನು ಅಯಾನ್ ಆಕಸ್ಮಿಕವಾಗಿ ಹೈಟೆನ್ಶನ್ ವೈಯರ್ ಮೇಲೆ ಎಸೆದಿದ್ದಾನೆ. ತಕ್ಷಣವೇ ವಿದ್ಯುತ್ ಪ್ರವಹಿಸಿ ಬಾಲಕ ಕೆಳಗೆ ಬಿದ್ದಿದ್ದಾನೆ. ಆತನನ್ನು ರಕ್ಷಿಸಲು ಹೋದ ಅಕ್ಕ ಸಾನ್ವಿಗೂ ಭಾರಿ ವಿದ್ಯುತ್ ಶಾಕ್ ಹೊಡೆದಿದೆ.

ಸಾನ್ವಿಯ ಕೈ ಕಟ್, ಅಯಾನ್‌ಗೆ ಸುಟ್ಟಗಾಯ: 

ಇದೇ ವೇಳೆ ತಾಯಿ ಸುಧಾ ದ್ವಿಚಕ್ರ ವಾಹನ ಪಾರ್ಕ್ ಮಾಡುತ್ತಿದ್ದರು. ಆದರೆ, ಅವರು ನೆರವಿಗೆ ಧಾವಿಸುವಷ್ಟರಲ್ಲೇ ಇಬ್ಬರೂ ಗಂಭೀರವಾಗಿ ಗಾಯಗೊಂಡಿದ್ದರು. ವಿದ್ಯುತ್ ಶಾಕ್‌ನ ತೀವ್ರತೆಗೆ ಸಾನ್ವಿಯ ಬಲಗೈ ಸಂಪೂರ್ಣವಾಗಿ ಸುಟ್ಟುಹೋಗಿದ್ದರಿಂದ ವೈದ್ಯರು ಆಕೆಯ ಕೈಯನ್ನೇ ತೆಗೆದುಹಾಕಿದ್ದಾರೆ. ಆಕೆಯ ಕಾಲಿಗೂ ಗಂಭೀರ ಗಾಯವಾಗಿದ್ದು, ಬಾಲಕ ಅಯಾನ್‌ಗೂ ಸುಟ್ಟ ಗಾಯಗಳಾಗಿವೆ.

ಬೆಸ್ಕಾಂ ಹಾಗೂ ಮಾಲೀಕರ ನಿರ್ಲಕ್ಷ್ಯ: 

ಮನೆ ಮುಂಭಾಗ ಹೈಟೆನ್ಶನ್ ವೈರ್ ಹಾದು ಹೋಗಿರುವ ಬಗ್ಗೆ ಕೊಟ್ರೇಶ್ ಅವರು ಮನೆ ಮಾಲೀಕರಿಗೆ ಮೊದಲೇ ಮಾಹಿತಿ ನೀಡಿದ್ದರು ಹಾಗೂ ವೈರ್‌ಗೆ ಪ್ಲಾಸ್ಟಿಕ್ ಹೊದಿಕೆ ಹಾಕುವಂತೆ ಮನವಿ ಮಾಡಿದ್ದರು. ಜೊತೆಗೆ ಬೆಸ್ಕಾಂ ಅಧಿಕಾರಿಗಳಿಗೂ ದೂರು ನೀಡಿದ್ದರು. ಆದರೆ ಇಬ್ಬರೂ ನಿರ್ಲಕ್ಷ್ಯ ವಹಿಸಿದ ಪರಿಣಾಮ ಇಂದು ಮಕ್ಕಳ ಜೀವಕ್ಕೆ ಸಂಚಕಾರ ಬಂದಿದೆ. ಈ ಸಂಬಂಧ ಸೂಕ್ತ ಪರಿಹಾರ ನೀಡುವಂತೆ ಹಾಗೂ ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳುವಂತೆ ಕೊಟ್ರೇಶಿ ಅವರು ರಾಜಾನುಕುಂಟೆ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.