ಅಮೆರಿಕ-ಇಸ್ರೇಲ್ ಹಾಗೂ ಇರಾನ್ ನಡುವಿನ ಯುದ್ಧದ ಕಾರ್ಮೋಡ ಇದೀಗ ನೇರವಾಗಿ ಬೆಂಗಳೂರಿನ ಹೋಟೆಲ್ ಉದ್ಯಮಕ್ಕೆ ತಟ್ಟಿದೆ. ಪಶ್ಚಿಮ ಏಷ್ಯಾ ಸಂಘರ್ಷದಿಂದಾಗಿ ವಾಣಿಜ್ಯ ಗ್ಯಾಸ್ ಸಿಲಿಂಡರ್‌ಗಳ ತೀವ್ರ ಅಭಾವ ಸೃಷ್ಟಿಯಾಗಿದ್ದು, ಸಿಲಿಕಾನ್ ಸಿಟಿಯ ಹೋಟೆಲ್‌ಗಳು ಅಕ್ಷರಶಃ ನಲುಗಿಹೋಗಿವೆ. ಕೇವಲ ಕಳೆದ ಎರಡು ವಾರಗಳಲ್ಲಿ ಬರೋಬ್ಬರಿ 150 ಕೋಟಿ ರೂ. ನಷ್ಟ ಉಂಟಾಗಿದೆ ಎಂದು ಅಂದಾಜಿಸಲಾಗಿದೆ. ಗ್ಯಾಸ್ ಕೊರತೆಯಿಂದಾಗಿ ಹೋಟೆಲ್ ಮಾಲೀಕರು ಪರದಾಡುತ್ತಿದ್ದರೆ, ಕೆಲಸವಿಲ್ಲದೆ ಕಾರ್ಮಿಕರು ತಮ್ಮ ಊರುಗಳತ್ತ ಮರಳುತ್ತಿದ್ದಾರೆ.
ಗ್ಯಾಸ್ ಕೊರತೆಯಿಂದಾಗಿ ಗ್ರಾಹಕರಿಗೆ ಬೇಕಾದ ಎಲ್ಲಾ ಖಾದ್ಯಗಳನ್ನು (ಉದಾಹರಣೆಗೆ ದೋಸೆ) ತಯಾರಿಸಲು ಸಾಧ್ಯವಾಗುತ್ತಿಲ್ಲ. ಇದರಿಂದಾಗಿ ವ್ಯಾಪಾರ ಶೇ. 25 ರಿಂದ 30 ರಷ್ಟು ಕುಸಿದಿದೆ. ನಿತ್ಯ 5 ವಾಣಿಜ್ಯ ಸಿಲಿಂಡರ್‌ಗಳ ಅಗತ್ಯವಿರುವ ಮಧ್ಯಮ ಗಾತ್ರದ ಹೋಟೆಲ್‌ಗಳಿಗೆ, ದುಪ್ಪಟ್ಟು ಹಣ ನೀಡಿದರೂ ಕೇವಲ 2 ಸಿಲಿಂಡರ್‌ಗಳು ಮಾತ್ರ ಸಿಗುತ್ತಿವೆ.
ಗ್ಯಾಸ್ ಬದಲಿಗೆ ಸೌದೆ ಒಲೆ ಬಳಸೋಣವೆಂದರೆ ಕಟ್ಟಡ ಮಾಲೀಕರು ಒಪ್ಪುತ್ತಿಲ್ಲ. ಜೊತೆಗೆ ಜಾಗದ ಕೊರತೆ ಹಾಗೂ ಸೌದೆಯ ಅಭಾವವೂ ಇದೆ. ಕೆಲವು ಕಡೆ ಮಾತ್ರ ಇಂಡಕ್ಷನ್ ಸ್ಟವ್ ಬಳಸಲಾಗುತ್ತಿದೆ. ಬ್ಲಾಕ್ ಮಾರ್ಕೆಟ್‌ನಲ್ಲಿ ದುಪ್ಪಟ್ಟು ಹಣ ಕೊಟ್ಟು ಗ್ಯಾಸ್ ತರುತ್ತಿರುವುದರಿಂದ, ನಿರ್ವಹಣಾ ವೆಚ್ಚ ಸರಿದೂಗಿಸಲು ಅನಿವಾರ್ಯವಾಗಿ ಹೋಟೆಲ್ ತಿನಿಸುಗಳ ದರವನ್ನು ಏರಿಕೆ ಮಾಡಲಾಗಿದೆ.
ಊರಿನ ಹಾದಿ ಹಿಡಿದ ಕಾರ್ಮಿಕರು
ವ್ಯಾಪಾರವಿಲ್ಲದ ಕಾರಣ ಹೋಟೆಲ್ ಮಾಲೀಕರಿಗೆ ತಮ್ಮ ನೌಕರರ ವೇತನ, ವಸತಿ ಹಾಗೂ ಊಟೋಪಚಾರದ ವೆಚ್ಚ ಭರಿಸುವುದು ಕಷ್ಟವಾಗುತ್ತಿದೆ. ಹೀಗಾಗಿ ಅನಿವಾರ್ಯವಾಗಿ ಕೆಲವು ಕಾರ್ಮಿಕರನ್ನು ಕೆಲಸದಿಂದ ಕೈಬಿಡಲಾಗುತ್ತಿದ್ದು, ಮತ್ತೆ ಕೆಲವರು ತಾವಾಗಿಯೇ ಕೆಲಸ ತೊರೆದು ಊರುಗಳಿಗೆ ಮರಳುತ್ತಿದ್ದಾರೆ. ಪರಿಸ್ಥಿತಿ ಸಹಜ ಸ್ಥಿತಿಗೆ ಬಂದಾಗ ಇಂತಹ ಪರಿಣಿತ ಕಾರ್ಮಿಕರನ್ನು ಮರಳಿ ಕರೆತರುವುದು ದೊಡ್ಡ ಸವಾಲಾಗಲಿದೆ ಎಂದು ದಕ್ಷಿಣ ಬೆಂಗಳೂರಿನ ಹೋಟೆಲ್ ಮಾಲೀಕರು ಆತಂಕ ವ್ಯಕ್ತಪಡಿಸಿದ್ದಾರೆ.
ಸಂಘದ ಮನವಿ ಮತ್ತು ಸರ್ಕಾರದ ಸ್ಪಂದನೆ
ಒಮ್ಮೆ ಹೋಟೆಲ್ ಮುಚ್ಚಿದರೆ, ಮತ್ತೆ ಹಿಂದಿನಂತೆ ವ್ಯಾಪಾರ ಮರಳಿ ತರುವುದು ಬಹಳ ಕಷ್ಟ. ಹೀಗಾಗಿ ಎಷ್ಟೇ ನಷ್ಟವಾದರೂ ಹೋಟೆಲ್‌ಗಳ ಬಾಗಿಲು ಮುಚ್ಚದಿರಿ ಎಂದು ಬೆಂಗಳೂರು ಹೋಟೆಲ್ ಸಂಘದ ಗೌರವಾಧ್ಯಕ್ಷ ಪಿ.ಸಿ. ರಾವ್ ಅವರು ಮಾಲೀಕರಲ್ಲಿ ಮನವಿ ಮಾಡಿದ್ದಾರೆ. ಈ ಬಿಕ್ಕಟ್ಟನ್ನು ಬಗೆಹರಿಸುವ ನಿಟ್ಟಿನಲ್ಲಿ ಆಹಾರ ಸಚಿವ ಕೆ.ಎಚ್. ಮುನಿಯಪ್ಪ ಅವರು ಇದೇ ಸೋಮವಾರ ಹೋಟೆಲ್ ಸಂಘದ ಪದಾಧಿಕಾರಿಗಳೊಂದಿಗೆ ಮಹತ್ವದ ಸಭೆ ನಡೆಸಲಿದ್ದಾರೆ.
Bengaluru hotel association, commercial gas shortage, Iran Israel war impact, PC Rao, Minister Muniyappa, Bengaluru news, restaurant business loss, hotel workers migration
