ಬೆಂಗಳೂರು: ಹಾಲು, ಮೊಸರು ಹಾಗೂ ಅಕ್ಕಿ ಸೇರಿದಂತೆ ಅಗತ್ಯ ಕಚ್ಚಾ ವಸ್ತುಗಳ ಬೆಲೆ ಏರಿಕೆಯ ಬೆನ್ನಲ್ಲೇ, ಬೆಂಗಳೂರಿನಾದ್ಯಂತ ಹೋಟೆಲ್‌ಗಳು ಊಟ, ತಿಂಡಿ ಹಾಗೂ ಕಾಫಿ-ಟೀ ದರವನ್ನು ಶೇಕಡ 10 ರಿಂದ 15ರಷ್ಟು ಹೆಚ್ಚಿಸಿವೆ.
ಕಾಫಿ, ಟೀ ದರಗಳ ಜೊತೆಗೆ ಇಡ್ಲಿ, ದೋಸೆಯಂತಹ ನಿತ್ಯದ ಉಪಾಹಾರಗಳ ಬೆಲೆಯೂ ದುಬಾರಿಯಾಗಿದ್ದು, ಗ್ರಾಹಕರಿಗೆ ಬೆಲೆ ಏರಿಕೆಯ ಬಿಸಿ ತಟ್ಟಿದೆ. ಕಚ್ಚಾ ವಸ್ತುಗಳ ದರ ಗಗನಕ್ಕೇರಿರುವುದರಿಂದ ಆರ್ಥಿಕ ಹೊರೆ ನಿಭಾಯಿಸಲು ಅನಿವಾರ್ಯವಾಗಿ ದರ ಹೆಚ್ಚಳ ಮಾಡಲಾಗಿದೆ ಎಂದು ಹೋಟೆಲ್ ಮಾಲೀಕರು ಸಮರ್ಥಿಸಿಕೊಂಡಿದ್ದಾರೆ.
ಈ ಕುರಿತು ಮಾಹಿತಿ ನೀಡಿರುವ ಬೃಹತ್ ಬೆಂಗಳೂರು ಹೋಟೆಲ್‌ಗಳ ಸಂಘದ (BBHA) ಪಿ.ಸಿ. ರಾವ್, “ಕಳೆದ ಒಂದು ತಿಂಗಳಲ್ಲೇ ಪ್ರತಿ ಕೆಜಿ ಅಕ್ಕಿ ಬೆಲೆ 65 ರೂ.ನಿಂದ 95 ರೂ.ಗೆ ಜಿಗಿದಿದೆ. ಬೇಳೆಕಾಳುಗಳ ಬೆಲೆಯೂ ಹೆಚ್ಚಾಗಿದ್ದು, ಹಾಲು ಮತ್ತು ಮೊಸರಿನ ದರ ಏರಿಕೆಯು ಪರಿಸ್ಥಿತಿಯನ್ನು ಮತ್ತಷ್ಟು ಬಿಗಡಾಯಿಸಿದೆ. ಹೀಗಾಗಿ ಹಲವು ರೆಸ್ಟೋರೆಂಟ್‌ಗಳು ಈಗಾಗಲೇ ಶೇ. 10-15ರಷ್ಟು ದರ ಹೆಚ್ಚಿಸಿವೆ” ಎಂದು ತಿಳಿಸಿದ್ದಾರೆ.
“ಮಧ್ಯಪ್ರಾಚ್ಯದಲ್ಲಿನ ಉದ್ವಿಗ್ನತೆಯ ಬಳಿಕ ಒಂದರ ಹಿಂದೊಂದರಂತೆ ಕಚ್ಚಾ ವಸ್ತುಗಳ ಬೆಲೆಗಳು ಏರಿಕೆಯಾಗುತ್ತಲೇ ಇವೆ. ಅಕ್ಕಿ ಮತ್ತು ಹಾಲು ನಮಗೆ ಅತ್ಯಗತ್ಯ ವಸ್ತುಗಳಾಗಿದ್ದು, ಭಾರಿ ನಷ್ಟವನ್ನು ಭರಿಸಲು ಸಾಧ್ಯವಾಗದೆ ಮೆನು ದರ ಏರಿಕೆ ಮಾಡಿದ್ದೇವೆ” ಎಂದು ಉತ್ತರ ಬೆಂಗಳೂರಿನ ಹೋಟೆಲ್ ಮಾಲೀಕ ಮಹೇಶ್ ಕೆ. ಹೇಳಿದ್ದಾರೆ.
ಕೆಲವು ಹೋಟೆಲ್ ಮಾಲೀಕರು ಗ್ರಾಹಕರ ಮೇಲಿನ ಹೊರೆ ತಗ್ಗಿಸಲು ಸದ್ಯಕ್ಕೆ ಕಾಫಿ, ಟೀ ದರವನ್ನು ಮಾತ್ರ ಹೆಚ್ಚಿಸಿದ್ದಾರೆ. “ಮೊಸರಿನ ದರದ ಬಗ್ಗೆ ಕೆಎಂಎಫ್‌ನಿಂದ ಅಂತಿಮ ಸ್ಪಷ್ಟನೆ ಹಾಗೂ ಅಕ್ಕಿ ದರ ನಿಯಂತ್ರಣಕ್ಕೆ ಸರ್ಕಾರದ ಮಧ್ಯಪ್ರವೇಶವನ್ನು ನಾವು ಎದುರು ನೋಡುತ್ತಿದ್ದೇವೆ. ಆ ನಂತರವಷ್ಟೇ ಇತರ ಆಹಾರ ಪದಾರ್ಥಗಳ ದರ ಪರಿಷ್ಕರಣೆ ಬಗ್ಗೆ ನಿರ್ಧರಿಸಲಿದ್ದೇವೆ” ಎಂದು ಮತ್ತೋರ್ವ ಮಾಲೀಕ ಸಂತೋಷ್ ಎಂ. ತಿಳಿಸಿದ್ದಾರೆ.
ಗ್ರಾಹಕರ ಆಕ್ರೋಶ:
ಹೋಟೆಲ್‌ಗಳ ಈ ದರ ಏರಿಕೆಗೆ ಗ್ರಾಹಕರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. “ಒಂದು ಲೀಟರ್ ಹಾಲಿಗೆ 8 ರೂ. ಹೆಚ್ಚಳವಾದರೆ, ಹೋಟೆಲ್‌ನವರು ಪ್ರತಿ ಕಪ್ ಕಾಫಿ-ಟೀಗೆ 5 ರೂ. ಹೆಚ್ಚಿಸುವುದು ಎಷ್ಟು ಸರಿ? ಹಾಲಿನ ದರ ಏರಿಕೆಯ ನೆಪದಲ್ಲಿ ಗ್ರಾಹಕರನ್ನು ಸುಲಿಗೆ ಮಾಡಲಾಗುತ್ತಿದೆ” ಎಂದು ದಕ್ಷಿಣ ಬೆಂಗಳೂರಿನ ನಿವಾಸಿ ರಮೇಶ್ ಕೆ. ಕಿಡಿಕಾರಿದ್ದಾರೆ.
ಮಾರುಕಟ್ಟೆ ವರದಿಗಳ ಪ್ರಕಾರ, ಹೋಟೆಲ್‌ಗಳಲ್ಲಿ ಟೀ, ಕಾಫಿ ದರ ಸರಾಸರಿ 3-5 ರೂ.ಗಳಷ್ಟು ಹೆಚ್ಚಾಗಿದೆ. ಇದೇ ರೀತಿ ಉಪಾಹಾರಗಳ ಬೆಲೆಯಲ್ಲೂ ವ್ಯತ್ಯಾಸವಾಗಿದ್ದು, ಈ ಹಿಂದೆ 100 ರೂ. ಇದ್ದ ದೋಸೆ ಬೆಲೆ ಇದೀಗ 110-115 ರೂ.ಗೆ ತಲುಪಿದೆ.
