ಬೆಂಗಳೂರು: ಬೆಂಗಳೂರಿನ ಹೃದಯಭಾಗದಲ್ಲಿ ಅದ್ದೂರಿಯಾಗಿ ತಲೆಎತ್ತಿದ್ದ ಸ್ಟಾರ್ ಕ್ರಿಕೆಟಿಗ ವಿರಾಟ್ ಕೊಹ್ಲಿ (Virat Kohli) ಅವರ ಪಾಲುದಾರಿಕೆಯ ‘ಒನ್8 ಕಮ್ಯೂನ್’ (one8 Commune) ರೆಸ್ಟೋರೆಂಟ್ ಈಗ ಅಧಿಕೃತವಾಗಿ ಸ್ಥಗಿತಗೊಂಡಿದೆ. ಬ್ರ್ಯಾಂಡ್ ಹೆಸರು ಮತ್ತು ಆರ್ಥಿಕ ಮುಗ್ಗಟ್ಟು ರೆಸ್ಟೋರೆಂಟ್‌ನ ಈ ದುಸ್ಥಿತಿಗೆ ಕಾರಣ ಎನ್ನಲಾಗಿದೆ.
ವಿವಾದಕ್ಕೆ ನಾಂದಿ ಹಾಡಿದ ಬಿಬಿಎಂಪಿ ನೋಟಿಸ್:
ಕಳೆದ ವರ್ಷ ಈ ರೆಸ್ಟೋರೆಂಟ್‌ಗೆ ಅಗ್ನಿ ಸುರಕ್ಷತಾ ನಿಯಮಗಳ ಉಲ್ಲಂಘನೆಗಾಗಿ ಬಿಬಿಎಂಪಿಯಿಂದ ನೋಟಿಸ್ ಜಾರಿಯಾಗಿತ್ತು. ಈ ಘಟನೆಯು ವಿರಾಟ್ ಕೊಹ್ಲಿ ಅವರ ಪ್ರತಿಷ್ಠೆಗೆ ಧಕ್ಕೆ ತಂದ ಹಿನ್ನೆಲೆಯಲ್ಲಿ, ಅವರು ತಕ್ಷಣವೇ ತಮ್ಮ ‘one8’ ಬ್ರ್ಯಾಂಡ್ ಹೆಸರನ್ನು ರೆಸ್ಟೋರೆಂಟ್‌ನಿಂದ ತೆಗೆದುಹಾಕುವಂತೆ ಸೂಚಿಸಿದ್ದರು ಎನ್ನಲಾಗಿದೆ.
ಕಿಂಗ್ ಕೊಹ್ಲಿ ಅವರ ಹೆಸರು ಹೋದ ನಂತರ ರೆಸ್ಟೋರೆಂಟ್ ತನ್ನ ಗತ್ತು ಮತ್ತು ಗ್ರಾಹಕರನ್ನು ಕಳೆದುಕೊಂಡಿತು. ಗ್ರಾಹಕರಿಲ್ಲದೆ ಆದಾಯ ಕುಸಿದ ಕಾರಣ, ಕಟ್ಟಡದ ಮಾಲೀಕರಿಗೆ ತಿಂಗಳ ಲಕ್ಷಾಂತರ ರೂಪಾಯಿ ಬಾಡಿಗೆ ಮತ್ತು ನಿರ್ವಹಣಾ ವೆಚ್ಚವನ್ನು ಪಾವತಿಸಲು ಮಾಲೀಕರಿಗೆ ಸಾಧ್ಯವಾಗಲಿಲ್ಲ. ಬಾಡಿಗೆ ಪಾವತಿಸದ ಹಿನ್ನೆಲೆಯಲ್ಲಿ ಕಟ್ಟಡದ ಮಾಲೀಕರು ನ್ಯಾಯಾಲಯದ ಮೊರೆ ಹೋದರು. ಕೋರ್ಟ್ ಆದೇಶದಂತೆ ರೆಸ್ಟೋರೆಂಟ್‌ಗೆ ಬೀಗ ಹಾಕಲಾಯಿತು.
ಸದ್ಯದ ಪರಿಸ್ಥಿತಿ ಅತಂತ್ರ:
ರೆಸ್ಟೋರೆಂಟ್ ಮಾಲೀಕರು ಸದ್ಯ ನ್ಯಾಯಾಲಯದಿಂದ ತಡೆಯಾಜ್ಞೆ (Stay Order) ತಂದಿದ್ದರೂ ಸಹ, ಹೋಟೆಲ್ ನಡೆಸಲು ಬೇಕಾದ ಆರ್ಥಿಕ ಶಕ್ತಿ ಅವರ ಬಳಿ ಉಳಿದಿಲ್ಲ. ಕೆಲಸಗಾರರಿಗೆ ಸಂಬಳ ನೀಡಲಾಗದ ಸ್ಥಿತಿಯಲ್ಲಿ ರೆಸ್ಟೋರೆಂಟ್ ಸಂಪೂರ್ಣವಾಗಿ ಹಳಿ ತಪ್ಪಿದೆ. ವಿರಾಟ್ ಕೊಹ್ಲಿ ಅವರ ಬ್ರ್ಯಾಂಡ್ ಇಮೇಜ್ ಇಲ್ಲದೆ ರೆಸ್ಟೋರೆಂಟ್ ಅನ್ನು ಪುನರಾರಂಭಿಸುವುದು ಅಸಾಧ್ಯದ ಮಾತಾಗಿದೆ.
