S Shorts

Goa Night Club Tragedy: ಮೊಬೈಲ್ ತರಲು ಹೋಗಿ ಪ್ರಾಣ ಕಳೆದುಕೊಂಡ ಬೆಂಗಳೂರು ಯುವಕ!

Goa Night Club Tragedy: ಮೊಬೈಲ್ ತರಲು ಹೋಗಿ ಪ್ರಾಣ ಕಳೆದುಕೊಂಡ ಬೆಂಗಳೂರು ಯುವಕ!
Author: Sagaradventure
Posted By: Sagaradventure
Updated: Dec 9, 2025 | 10:54 AM

ಬೆಂಗಳೂರು: ಗೋವಾದ ಅರ್ಪೋರಾ ನೈಟ್‌ಕ್ಲಬ್‌ನಲ್ಲಿ ಭಾನುವಾರ ಸಂಭವಿಸಿದ ಭೀಕರ ಅಗ್ನಿ ದುರಂತದಲ್ಲಿ 25 ಜನರು ಸಾವನ್ನಪ್ಪಿದ್ದು, ಈ ಪೈಕಿ ಬೆಂಗಳೂರಿನ ಯುವಕನೊಬ್ಬ ಕೇವಲ ಮೊಬೈಲ್ ಫೋನ್ ತರಲು ಹೋಗಿ ಪ್ರಾಣ ಕಳೆದುಕೊಂಡಿರುವ ಹೃದಯವಿದ್ರಾವಕ ಘಟನೆ ಬೆಳಕಿಗೆ ಬಂದಿದೆ. ಥಣಿಸಂದ್ರದ ಅಶ್ವತ್ ನಗರ ನಿವಾಸಿ, ಖಾಸಗಿ ಬ್ಯಾಂಕ್ ಒಂದರ ಡೇಟಾ ಅನಲಿಸ್ಟ್ ಆಗಿದ್ದ ಇಶಾಕ್ (25) ಮೃತ ದುರ್ದೈವಿ.

ಸ್ನೇಹಿತನೊಬ್ಬನ ಮದುವೆ ನಿಮಿತ್ತ ಬ್ಯಾಚುಲರ್ ಪಾರ್ಟಿಗಾಗಿ ಇಶಾಕ್ ತನ್ನ ಐವರು ಸ್ನೇಹಿತರೊಂದಿಗೆ ಗೋವಾಕ್ಕೆ ತೆರಳಿದ್ದರು. ದುರಂತ ಸಂಭವಿಸುವ ಕೆಲವೇ ಗಂಟೆಗಳ ಮೊದಲು ತಂದೆಯೊಂದಿಗೆ ಫೋನ್‌ನಲ್ಲಿ ಮಾತನಾಡಿದ್ದ ಅವರು, ತಾವು ಸಂತೋಷವಾಗಿರುವುದಾಗಿ ತಿಳಿಸಿದ್ದರು. ಪ್ರತ್ಯಕ್ಷದರ್ಶಿಗಳ ಪ್ರಕಾರ, ಕ್ಲಬ್‌ನಲ್ಲಿ ಬೆಂಕಿ ಕಾಣಿಸಿಕೊಂಡ ತಕ್ಷಣ ಇಶಾಕ್ ಮತ್ತು ಅವರ ಸ್ನೇಹಿತರು ಹೊರಬಂದಿದ್ದರು. ಆದರೆ, ಒಳಗೆ ಬಿಟ್ಟು ಬಂದಿದ್ದ ಮೊಬೈಲ್ ಫೋನ್ ತೆಗೆದುಕೊಳ್ಳಲು ಇಶಾಕ್ ಮತ್ತೆ ಉರಿಯುತ್ತಿದ್ದ ಕ್ಲಬ್ ಒಳಗೆ ಹೋಗಿದ್ದಾರೆ. ಹೊರಬರುವ ದಾರಿಯಲ್ಲಿ ಉಂಟಾದ ಕಾಲ್ತುಳಿತ ಅಥವಾ ಹೃದಯಾಘಾತದಿಂದ ಅವರು ಮೃತಪಟ್ಟಿರಬಹುದು ಎಂದು ಪೊಲೀಸರು ಶಂಕಿಸಿದ್ದಾರೆ. ಅವರ ದೇಹದ ಮೇಲೆ ಸಣ್ಣಪುಟ್ಟ ಸುಟ್ಟ ಗಾಯಗಳಷ್ಟೇ ಕಂಡುಬಂದಿವೆ.

ಗಂಡ, ಮೂವರು ಸಹೋದರಿಯರನ್ನು ಕಳೆದುಕೊಂಡ ಮಹಿಳೆ

ಇನ್ನೊಂದೆಡೆ, ಇದೇ ದುರಂತದಲ್ಲಿ ದೆಹಲಿ ಮೂಲದ ಭಾವನಾ ಜೋಶಿ ಎಂಬುವವರು ತಮ್ಮ ಇಡೀ ಕುಟುಂಬವನ್ನೇ ಕಳೆದುಕೊಂಡಿದ್ದಾರೆ. ಭಾವನಾ ಅವರ ಪತಿ ವಿನೋದ್ ಕುಮಾರ್ ಮತ್ತು ಅವರ ಮೂವರು ಸಹೋದರಿಯರಾದ ಸರೋಜಾ, ಅನಿತಾ ಮತ್ತು ಕಮಲಾ ಬೆಂಕಿಗೆ ಆಹುತಿಯಾಗಿದ್ದಾರೆ. “ಮೊದಲು ಬೆಂಕಿ ಕಾಣಿಸಿಕೊಂಡಾಗ ನಾವು ಅದನ್ನು ವಿದ್ಯುತ್ ದೋಷ ಅಂದುಕೊಂಡೆವು. ಆದರೆ ನೋಡನೋಡುತ್ತಲೇ ಬೆಂಕಿ ಆವರಿಸಿತು. ಅಲ್ಲಿ ಯಾವುದೇ ಅಗ್ನಿಶಾಮಕ ಉಪಕರಣಗಳಿರಲಿಲ್ಲ. ನೂಕುನುಗ್ಗಲಿನಲ್ಲಿ ನಾನು ಹೊರಬಿದ್ದೆ. ನನ್ನ ಪತಿ ಹೊರಗೆ ಬಂದಿದ್ದರು, ಆದರೆ ನನ್ನ ತಂಗಿಯರನ್ನು ಉಳಿಸಲು ಮತ್ತೆ ಒಳಗೆ ಹೋದರು. ಅವರು ಯಾರೂ ಮತ್ತೆ ಹೊರಗೆ ಬರಲೇ ಇಲ್ಲ. ನನ್ನ ಮಕ್ಕಳಿಗೆ ಈಗ ತಂದೆಯಿಲ್ಲ” ಎಂದು ಭಾವನಾ ಕಣ್ಣೀರು ಹಾಕಿದ್ದಾರೆ.

ಒಟ್ಟು 25 ಮೃತರಲ್ಲಿ 20 ಮಂದಿ ಸಿಬ್ಬಂದಿ ಮತ್ತು ಐವರು ಪ್ರವಾಸಿಗರಾಗಿದ್ದಾರೆ. ಸುರಕ್ಷತಾ ನಿಯಮಗಳ ಪಾಲನೆಯಾಗದ ಕಾರಣ ಈ ದುರಂತ ಸಂಭವಿಸಿದೆ ಎಂದು ಹೇಳಲಾಗುತ್ತಿದ್ದು, ಮೃತರ ಕುಟುಂಬಗಳ ಆಕ್ರಂದನ ಮುಗಿಲು ಮುಟ್ಟಿದೆ.