ಬೆಂಗಳೂರು: ಪ್ರತಿಷ್ಠಿತ ಕಿಮ್ಸ್ (KIMS) ಮೆಡಿಕಲ್ ಕಾಲೇಜಿನಲ್ಲಿ ಎಂಬಿಬಿಎಸ್ (MBBS) ಸೀಟು ಕೊಡಿಸುವುದಾಗಿ ನಂಬಿಸಿ, ವಿದ್ಯಾರ್ಥಿನಿಯ ತಂದೆಯಿಂದ ಬರೋಬ್ಬರಿ 25 ಲಕ್ಷ ರೂ. ಪಡೆದು ವಂಚಿಸಿರುವ ಪ್ರಕರಣ ಬೆಳಕಿಗೆ ಬಂದಿದೆ. ಈ ಸಂಬಂಧ ನಗರದ ಬನಶಂಕರಿ ಪೊಲೀಸ್ ಠಾಣೆಯಲ್ಲಿ ನಾಲ್ವರ ವಿರುದ್ಧ ಎಫ್‌ಐಆರ್ ದಾಖಲಾಗಿದೆ.
ವಿದ್ಯಾರ್ಥಿನಿ ಆಯೇಷಾ ಕಥುಮ್ ಅವರ ತಂದೆ ಲಾಲ್‌ಬಾಬು ಎಂಬುವರು ನೀಡಿದ ದೂರಿನ ಆಧಾರದ ಮೇಲೆ, ಪ್ರಮುಖ ಆರೋಪಿ ಕೆ.ಪಿ. ಶರತ್ ಸೇರಿದಂತೆ ಸೈಯದ್ ತಬ್ರೇಜ್, ಶಂಶೇರ್ ಬೇಗ್ ಮತ್ತೊಬ್ಬನ ವಿರುದ್ಧ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು, ತಲೆಮರೆಸಿಕೊಂಡಿರುವ ಆರೋಪಿಗಳ ಪತ್ತೆಗಾಗಿ ಹುಡುಕಾಟ ಆರಂಭಿಸಿದ್ದಾರೆ.
ವಂಚನೆ ನಡೆದಿದ್ದು ಹೇಗೆ? ಲಾಲ್‌ಬಾಬು ಅವರು ತಮ್ಮ ಮಗಳಿಗೆ ಬೆಂಗಳೂರಿನ ಉತ್ತಮ ಕಾಲೇಜಿನಲ್ಲಿ ಮೆಡಿಕಲ್ ಸೀಟು ಕೊಡಿಸುವ ಪ್ರಯತ್ನದಲ್ಲಿದ್ದರು. ಈ ವೇಳೆ ಆರೋಪಿಗಳಾದ ಸೈಯದ್ ತಬ್ರೇಜ್ ಹಾಗೂ ಶಂಶೇರ್ ಬೇಗ್ ಪರಿಚಯವಾಗಿದ್ದಾರೆ. “ನಮಗೆ ಕಿಮ್ಸ್ ಮೆಡಿಕಲ್ ಕಾಲೇಜಿನ ಅಧ್ಯಕ್ಷರು ಚೆನ್ನಾಗಿ ಪರಿಚಯವಿದ್ದಾರೆ” ಎಂದು ನಂಬಿಸಿದ ಇವರು, ಕೆ.ಪಿ. ಶರತ್ ಎಂಬಾತನನ್ನು ‘ಕಾಲೇಜಿನ ಅಧ್ಯಕ್ಷ’ ಎಂದೇ ಲಾಲ್‌ಬಾಬು ಅವರಿಗೆ ಪರಿಚಯಿಸಿದ್ದರು.
ಬಳಿಕ ಬನಶಂಕರಿ 2ನೇ ಹಂತದಲ್ಲಿ ಶರತ್‌ನನ್ನು ಭೇಟಿ ಮಾಡಿಸಿದ್ದ ಆರೋಪಿಗಳು, ಆಯೇಷಾಗೆ ಸೀಟು ಖಚಿತ ಎಂದು ಭರವಸೆ ನೀಡಿ ಶೈಕ್ಷಣಿಕ ದಾಖಲೆಗಳನ್ನು ಪಡೆದುಕೊಂಡಿದ್ದರು. ಕೆಲವು ದಿನಗಳ ನಂತರ ಲಾಲ್‌ಬಾಬು ಅವರನ್ನು ಹೋಟೆಲ್ ಒಂದರಲ್ಲಿ ಭೇಟಿಯಾಗಿ, ಸೀಟು ಕನ್ಫರ್ಮ್ ಮಾಡಲು 25 ಲಕ್ಷ ರೂ.ಗೆ ಬೇಡಿಕೆ ಇಟ್ಟಿದ್ದರು.
ಆರೋಪಿಗಳ ಕಪಟ ನಾಟಕವನ್ನು ನಂಬಿದ ಲಾಲ್‌ಬಾಬು ಅವರು, ಹಂತ-ಹಂತವಾಗಿ ಯುಪಿಐ (UPI) ಹಾಗೂ ಚೆಕ್ ಮೂಲಕ 10 ಲಕ್ಷ ರೂ. ಮತ್ತು ನಗದು ರೂಪದಲ್ಲಿ 15 ಲಕ್ಷ ರೂ. ಸೇರಿದಂತೆ ಒಟ್ಟು 25 ಲಕ್ಷ ರೂ. ಹಣವನ್ನು ನೀಡಿದ್ದರು. ಆದರೆ, ಹಣ ಪಡೆದುಕೊಂಡ ನಂತರ ಆರೋಪಿಗಳು ಯಾವುದೇ ಸೀಟು ಕೊಡಿಸದೆ, ಸಂಪರ್ಕಕ್ಕೂ ಸಿಗದೆ ವಂಚಿಸಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
