ರಾಷ್ಟ್ರೀಯ ಅರ್ಹತಾ ಪ್ರವೇಶ ಪರೀಕ್ಷೆ (NEET UG) ಮರುಪರೀಕ್ಷೆಯ ಹಾಲ್ ಟಿಕೆಟ್ ಬಿಡುಗಡೆಯ ಬೆನ್ನಲ್ಲೇ ನ್ಯಾಷನಲ್ ಟೆಸ್ಟಿಂಗ್ ಏಜೆನ್ಸಿ (NTA) ಮತ್ತೊಂದು ಭಾರಿ ವಿವಾದಕ್ಕೆ ಸಿಲುಕಿದೆ. ಮಹಾರಾಷ್ಟ್ರದ ನಾಗ್ಪುರ ನಗರದ 18 ವರ್ಷದ ನೀಟ್ ಅಭ್ಯರ್ಥಿ ಅಬ್ದುಲ್ಲಾ ಮೊಹಮ್ಮದ್ ತಾಲಿಬ್ ಎಂಬಾತನಿಗೆ ಜೂನ್ 14 ರಂದು ಎನ್‌ಟಿಎ ಬಿಡುಗಡೆ ಮಾಡಿರುವ ಪ್ರವೇಶ ಪತ್ರದಲ್ಲಿ ಅಬುಧಾಬಿಯ ‘ಅಬುಧಾಬಿ ಇಂಡಿಯನ್ ಸ್ಕೂಲ್’ ಅನ್ನು ಪರೀಕ್ಷಾ ಕೇಂದ್ರವಾಗಿ ನಿಯೋಜಿಸಲಾಗಿದೆ. ತನಗಿಷ್ಟ ಬಂದ 3 ಸ್ಥಳೀಯ ಜಿಲ್ಲಾ ಕೇಂದ್ರಗಳನ್ನೇ ಆಯ್ಕೆ ಮಾಡಿಕೊಂಡಿದ್ದ ವಿದ್ಯಾರ್ಥಿಗೆ ಇದ್ದಕ್ಕಿದ್ದಂತೆ 2500 ಕಿ.ಮೀ ದೂರದ ವಿದೇಶಿ ಕೇಂದ್ರ ಸಿಕ್ಕಿರುವುದು ಇಡೀ ಕುಟುಂಬವನ್ನು ತೀವ್ರ ಆಘಾತಕ್ಕೀಡು ಮಾಡಿದೆ.
ಸಾಮಾನ್ಯವಾಗಿ ಅನಿವಾಸಿ ಭಾರತೀಯರು (NRI) ಮತ್ತು ಅಂತರರಾಷ್ಟ್ರೀಯ ವಿದ್ಯಾರ್ಥಿಗಳಿಗೆ ಮಾತ್ರ ಎನ್‌ಟಿಎ ವಿದೇಶಗಳಲ್ಲಿ ಪರೀಕ್ಷಾ ಕೇಂದ್ರಗಳನ್ನು ನಿಗದಿಪಡಿಸುತ್ತದೆ. ಆದರೆ ಸ್ಥಳೀಯ ವಿದ್ಯಾರ್ಥಿ ಅಬ್ದುಲ್ಲಾಗೆ ಅಬುಧಾಬಿ ಕೇಂದ್ರ ಸಿಕ್ಕಿರುವುದರಿಂದ ಕಂಗಾಲಾದ ಪೋಷಕರು ತಕ್ಷಣವೇ ಎನ್‌ಟಿಎ ಸಹಾಯವಾಣಿಯನ್ನು ಸಂಪರ್ಕಿಸಿದ್ದಾರೆ. ಈ ತಪ್ಪು ಸರಿಪಡಿಸಿಕೊಡುವುದಾಗಿ ಅಧಿಕಾರಿಗಳು ಭರವಸೆ ನೀಡಿದ್ದರೂ, ಪರೀಕ್ಷೆಗೆ ಕೇವಲ 2 ದಿನಗಳು ಬಾಕಿ ಇರುವವರೆಗೂ ಯಾವುದೇ ಪರಿಹಾರ ಸಿಕ್ಕಿರಲಿಲ್ಲ. ಇದರಿಂದ ಗಾಬರಿಗೊಂಡ ಕುಟುಂಬಸ್ಥರು ಅನಿವಾರ್ಯ ಪರಿಸ್ಥಿತಿ ಬಂದರೆ ಮಗನನ್ನು ಪರೀಕ್ಷೆಗಾಗಿ ವಿದೇಶಕ್ಕಾದರೂ ಕಳುಹಿಸೋಣ ಎಂದು ತುರ್ತು ಪಾಸ್‌ಪೋರ್ಟ್ ಪ್ರಕ್ರಿಯೆ ಮತ್ತು ವಿಮಾನ ಟಿಕೆಟ್‌ಗಳ ವ್ಯವಸ್ಥೆ ಮಾಡಲು ಪರದಾಡುವಂತಾಯಿತು. ಈಗಾಗಲೇ ನೀಟ್ ಪೇಪರ್ ಲೀಕ್ ಪ್ರಕರಣದಿಂದ ತೀವ್ರ ಮಾನಸಿಕ ಒತ್ತಡದಲ್ಲಿದ್ದ ವಿದ್ಯಾರ್ಥಿಗೆ ಈ ಹಾಲ್ ಟಿಕೆಟ್ ಯಡವಟ್ಟು ಮತ್ತಷ್ಟು ಆತಂಕವನ್ನು ಸೃಷ್ಟಿಸಿದೆ.
ಕಳೆದ ತಿಂಗಳು ನೀಟ್ ಪರೀಕ್ಷೆ ರದ್ದಾದ ನಂತರ ಎನ್‌ಟಿಎ ಪೋಷಕರ ಮೊಬೈಲ್ ಸಂಖ್ಯೆಗೆ ಸಂದೇಶ ಕಳುಹಿಸಿ, ಹಳೆಯ ಕೇಂದ್ರವನ್ನೇ ಉಳಿಸಿಕೊಳ್ಳುತ್ತೀರಾ ಅಥವಾ ಹೊಸ ಕೇಂದ್ರ ಬೇಕೇ ಎಂದು ಕೇಳಿತ್ತು. ಆದರೆ ನಾಗ್ಪುರ ವ್ಯಾಪ್ತಿಯಲ್ಲೇ ಹಳೆಯ ಕೇಂದ್ರವನ್ನು ಆಯ್ಕೆ ಮಾಡಿಕೊಂಡಿದ್ದ ಹಲವು ವಿದ್ಯಾರ್ಥಿಗಳಿಗೆ ಈಗ ಹೊಸ ಹಾಲ್ ಟಿಕೆಟ್‌ನಲ್ಲಿ ದೂರದ ಜಿಲ್ಲೆಗಳ ಮತ್ತು ಗ್ರಾಮಾಂತರ ಪ್ರದೇಶಗಳ ಕೇಂದ್ರಗಳನ್ನು ಹಂಚಿಕೆ ಮಾಡಲಾಗಿದೆ.
ಪೋಷಕರು ಕೇಳದಿದ್ದರೂ ಕೇಂದ್ರಗಳನ್ನು ಬದಲಾಯಿಸಿರುವುದು ಮತ್ತು ಪರೀಕ್ಷಾ ಶುಲ್ಕದ ಮರುಪಾವತಿಗೆ ಬ್ಯಾಂಕ್ ವಿವರಗಳನ್ನು ಪಡೆದು ಗೊಂದಲ ಸೃಷ್ಟಿಸಿರುವುದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ. ಡೇಟಾಬೇಸ್ ಅಪ್ಡೇಟ್ ಮಾಡುವಾಗ ಉಂಟಾಗಿರುವ ತಾಂತ್ರಿಕ ದೋಷವೇ ಅಬ್ದುಲ್ಲಾ ಅವರ ಈ ಪ್ರಕರಣಕ್ಕೆ ಕಾರಣ ಎನ್ನಲಾಗಿದ್ದು, ಸದ್ಯ ಅಧಿಕಾರಿಗಳು ವಿದ್ಯಾರ್ಥಿಗೆ ನಾಗ್ಪುರದಲ್ಲೇ ಹೊಸ ಕೇಂದ್ರದಲ್ಲಿ ಪರೀಕ್ಷೆ ಬರೆಯಲು ಅವಕಾಶ ನೀಡುವುದಾಗಿ ಭರವಸೆ ನೀಡಿದ್ದಾರೆ.
