S Shorts

ಬೆಂಗಳೂರಿನಲ್ಲಿ ಮೇ 1 ರಂದು ಮಾಂಸ ಮಾರಾಟ, ಪ್ರಾಣಿವಧೆ ಸಂಪೂರ್ಣ ನಿಷೇಧ!

ಬೆಂಗಳೂರಿನಲ್ಲಿ ಮೇ 1 ರಂದು ಮಾಂಸ ಮಾರಾಟ, ಪ್ರಾಣಿವಧೆ ಸಂಪೂರ್ಣ ನಿಷೇಧ!
Author: Savina Naik
Posted By: Savina Naik
Updated: Apr 30, 2026 | 1:43 PM

ಬೆಂಗಳೂರು: ಮೇ 1 ರಂದು ‘ಬುದ್ಧ ಪೂರ್ಣಿಮೆ’ ಪ್ರಯುಕ್ತ, ಗ್ರೇಟರ್ ಬೆಂಗಳೂರು ಪ್ರಾಧಿಕಾರವು (GBA) ನಗರದಾದ್ಯಂತ ಪ್ರಾಣಿವಧೆ ಮತ್ತು ಮಾಂಸ ಮಾರಾಟವನ್ನು ಸಂಪೂರ್ಣವಾಗಿ ನಿಷೇಧಿಸಿ ಆದೇಶ ಹೊರಡಿಸಿದೆ.

ಗ್ರೇಟರ್ ಬೆಂಗಳೂರು ಪ್ರಾಧಿಕಾರದ ಪಶುಪಾಲನಾ ವಿಭಾಗದ ಉಪ ನಿರ್ದೇಶಕರು ಈ ಕುರಿತು ಅಧಿಕೃತ ಸುತ್ತೋಲೆ ಹೊರಡಿಸಿದ್ದಾರೆ. ದಿನಾಂಕ 01-05-2026ರ ಶುಕ್ರವಾರದಂದು ಬುದ್ಧ ಪೂರ್ಣಿಮೆಯ ಪವಿತ್ರ ದಿನವಾಗಿದೆ. ಅಹಿಂಸೆಯ ಸಂದೇಶ ಸಾರಿದ ಬುದ್ಧನ ಜನ್ಮದಿನದ ಗೌರವಾರ್ಥವಾಗಿ, ಪ್ರಾಧಿಕಾರದ ವ್ಯಾಪ್ತಿಯಲ್ಲಿರುವ ಎಲ್ಲಾ ಕಸಾಯಿಖಾನೆಗಳಲ್ಲಿ ಪ್ರಾಣಿವಧೆಯನ್ನು ನಿಷೇಧಿಸಲಾಗಿದೆ. ಜೊತೆಗೆ, ಮಳಿಗೆಗಳಲ್ಲಿ ಅಥವಾ ಯಾವುದೇ ಅಂಗಡಿಗಳಲ್ಲಿ ಮಾಂಸ ಮಾರಾಟ ಮಾಡುವುದನ್ನು ಸಂಪೂರ್ಣವಾಗಿ ನಿರ್ಬಂಧಿಸಲಾಗಿದೆ.

ಈ ಆದೇಶವು ಗ್ರೇಟರ್ ಬೆಂಗಳೂರು ಪ್ರಾಧಿಕಾರದ (GBA) ವ್ಯಾಪ್ತಿಗೆ ಬರುವ ಎಲ್ಲಾ ವಲಯಗಳಿಗೂ ಅನ್ವಯಿಸುತ್ತದೆ. ಬೆಂಗಳೂರು ನಗರದ ಪ್ರಮುಖ ಮಾರುಕಟ್ಟೆಗಳು, ಮಾಂಸದ ಅಂಗಡಿಗಳು ಮತ್ತು ಚಿಲ್ಲರೆ ಮಾರಾಟ ಮಳಿಗೆಗಳು ಅಂದು ವ್ಯಾಪಾರ ಮಾಡುವಂತಿಲ್ಲ. ಸರ್ಕಾರದ ನಿಯಮದಂತೆ ಬುದ್ಧ ಪೂರ್ಣಿಮೆಯ ದಿನದಂದು ಮಾಂಸ ಮಾರಾಟದ ಮೇಲೆ ಈ ಹಿಂದಿನಿಂದಲೂ ನಿಷೇಧ ಹೇರಲಾಗುತ್ತಿದ್ದು, ಈ ವರ್ಷವೂ ಅದನ್ನು ಮುಂದುವರಿಸಲಾಗಿದೆ.

ಗೌತಮ ಬುದ್ಧನು ಅಹಿಂಸೆ ಮತ್ತು ಶಾಂತಿಯ ಹರಿಕಾರ. ಅವರ ಜನ್ಮದಿನ, ಜ್ಞಾನೋದಯ ಮತ್ತು ಮಹಾಪರಿನಿರ್ವಾಣ ಹೊಂದಿದ ದಿನವನ್ನೇ ‘ಬುದ್ಧ ಪೂರ್ಣಿಮೆ’ ಎಂದು ಆಚರಿಸಲಾಗುತ್ತದೆ.