ಗುರುವಾರ ಸಂಜೆ ಬೆಂಗಳೂರಿನ ನಮ್ಮ ಮೆಟ್ರೋ ‘ಪರ್ಪಲ್ ಲೈನ್’ ಮಾರ್ಗದ ಕಬ್ಬನ್ ಪಾರ್ಕ್ ನಿಲ್ದಾಣದಲ್ಲಿ ರೈಲಿನ ಬಾಗಿಲು ಸಮರ್ಪಕವಾಗಿ ಕಾರ್ಯನಿರ್ವಹಿಸದ ಕಾರಣ ಬರೋಬ್ಬರಿ 17 ನಿಮಿಷಗಳ ಕಾಲ ಮೆಟ್ರೋ ಸಂಚಾರ ವ್ಯತ್ಯಯ ಉಂಟಾಗಿದೆ. ತಾಂತ್ರಿಕ ದೋಷ ಕಾಣಿಸಿಕೊಂಡ ತಕ್ಷಣವೇ ರೈಲಿನಲ್ಲಿದ್ದ ಎಲ್ಲಾ ಪ್ರಯಾಣಿಕರನ್ನು ಕೆಳಗಿಳಿಸಲಾಗಿದ್ದು, ತಾಂತ್ರಿಕ ಸಿಬ್ಬಂದಿ ದೋಷವನ್ನು ಸರಿಪಡಿಸುವವರೆಗೆ ಮುಂದಿನ 5 ರೈಲುಗಳ ಸಂಚಾರದಲ್ಲಿ ಭಾರಿ ವಿಳಂಬವಾಗಿತ್ತು.
ಇದಕ್ಕೂ ಮುನ್ನ ಜೂನ್ 23 ರಂದು ಸಹ ‘ಕರೆಂಟ್ ಕಲೆಕ್ಟರ್ ಡಿವೈಸ್’ ಹಾನಿಗೊಂಡ ಪರಿಣಾಮ ಎಂಜಿ ರಸ್ತೆ ಮತ್ತು ಮಾಗಡಿ ರಸ್ತೆ ನಡುವೆ ಗಂಟೆಗಳ ಕಾಲ ರೈಲು ಸೇವೆ ಸ್ಥಗಿತಗೊಂಡು, ಪೀಕ್ ಅವರ್‌ನಲ್ಲಿ ಸಾವಿರಾರು ಪ್ರಯಾಣಿಕರು ಪರದಾಡುವಂತಾಗಿತ್ತು.
ಜನವರಿ 2024 ರಿಂದೀಚೆಗೆ ನಮ್ಮ ಮೆಟ್ರೋದ ಅತ್ಯಂತ ಹಳೆಯ ಮಾರ್ಗವಾದ ಪರ್ಪಲ್ ಲೈನ್‌ನಲ್ಲಿಯೇ ಒಟ್ಟು 21 ಬಾರಿ ಇಂತಹ ಅಡಚಣೆಗಳು ಸಂಭವಿಸಿವೆ ಎಂದು ತೀವ್ರ ಕಳವಳ ವ್ಯಕ್ತಪಡಿಸಿರುವ ಬೆಂಗಳೂರು ದಕ್ಷಿಣ ಸಂಸದ ತೇಜಸ್ವಿ ಸೂರ್ಯ, ವ್ಯವಸ್ಥೆಯಲ್ಲಿ ಪಾರದರ್ಶಕತೆ ಕಾಯ್ದುಕೊಳ್ಳುವ ನಿಟ್ಟಿನಲ್ಲಿ ಸಮಗ್ರ ಸುರಕ್ಷತಾ ಲೆಕ್ಕಪರಿಶೋಧನೆ (Safety audit), ತಪಾಸಣಾ ವಿವರಗಳು ಮತ್ತು ಸಾರ್ವಜನಿಕ ದಾಖಲೆಗಳನ್ನು ಒದಗಿಸುವಂತೆ ಬಿಎಂಆರ್‌ಸಿಎಲ್ ಅಧಿಕಾರಿಗಳಿಗೆ ಪತ್ರ ಬರೆದು ಆಗ್ರಹಿಸಿದ್ದಾರೆ.
ಮೆಟ್ರೋ ನಿಲ್ದಾಣಗಳಲ್ಲಿ ವಿಪರೀತ ಜನಸಂದಣಿ ಹಾಗೂ ತುರ್ತು ಸಂದರ್ಭಗಳಲ್ಲಿ ಪರ್ಯಾಯ ವ್ಯವಸ್ಥೆಗಳ ಕೊರತೆಯ ಬಗ್ಗೆ ಪ್ರಯಾಣಿಕರಿಂದ ಸತತ ದೂರುಗಳು ಕೇಳಿಬರುತ್ತಿರುವ ಬೆನ್ನಲ್ಲೇ ಸಂಸದ ಪಿ.ಸಿ. ಮೋಹನ್ ಅವರು ಸಹ ಸಮಗ್ರ ತಾಂತ್ರಿಕ ಲೆಕ್ಕಪರಿಶೋಧನೆಗೆ ಒತ್ತಾಯಿಸಿದ್ದಾರೆ. ಸಾರ್ವಜನಿಕರ ಪ್ರಯಾಣದ ಹಿತದೃಷ್ಟಿಯಿಂದ ಮೆಟ್ರೋ ಅಧಿಕಾರಿಗಳು ತಾಂತ್ರಿಕ ದೋಷಗಳನ್ನು ಶೀಘ್ರವಾಗಿ ಬಗೆಹರಿಸುವುದರ ಜೊತೆಗೆ, ಇಂತಹ ಅಡಚಣೆಗಳಾದಾಗ ಪ್ರಯಾಣಿಕರಿಗೆ ನಿಖರವಾದ ಮಾಹಿತಿಯನ್ನು ನೀಡುವ ಮೂಲಕ ಉತ್ತಮ ಸಂವಹನ ವ್ಯವಸ್ಥೆಯನ್ನು ರೂಪಿಸಿಕೊಳ್ಳಬೇಕು ಎಂದು ಅವರು ಆಗ್ರಹಿಸಿದ್ದಾರೆ.
