S Shorts

‘Traffic’ ನರಕಕ್ಕೆ ಮುಕ್ತಿ ಹಾಡಲು ‘Blueprint’ ರೆಡಿ; 500 IT ಕಂಪನಿಗಳಿಗೆ ಪೊಲೀಸ್ ಬುಲಾವ್!

‘Traffic’ ನರಕಕ್ಕೆ ಮುಕ್ತಿ ಹಾಡಲು ‘Blueprint’ ರೆಡಿ; 500 IT ಕಂಪನಿಗಳಿಗೆ ಪೊಲೀಸ್ ಬುಲಾವ್!
Author: Sagaradventure
Posted By: Sagaradventure
Updated: Jan 24, 2026 | 7:37 AM

ಬೆಂಗಳೂರು: ಜಾಗತಿಕ ಮಟ್ಟದಲ್ಲಿ ‘ಸಿಲಿಕಾನ್ ಸಿಟಿ’ ಎಂದು ಖ್ಯಾತಿ ಪಡೆದಿರುವ ಬೆಂಗಳೂರು, ಇತ್ತೀಚಿನ ದಿನಗಳಲ್ಲಿ ‘ಟ್ರಾಫಿಕ್ ಸಿಟಿ’ ಎಂತಲೂ ಕುಖ್ಯಾತಿಗಳಿಸಿದೆ. ಅದರಲ್ಲೂ ವಿಶೇಷವಾಗಿ ಐಟಿ ಉದ್ಯೋಗಿಗಳೇ ಹೆಚ್ಚಾಗಿ ಸಂಚರಿಸುವ ಮಾರ್ಗಗಳಲ್ಲಿನ ಸಂಚಾರ ದಟ್ಟಣೆ ವಾಹನ ಸವಾರರ ಪಾಲಿಗೆ ನಿತ್ಯ ನರಕಸದೃಶವಾಗಿದೆ.

ಇದೀಗ ಈ ಟ್ರಾಫಿಕ್ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಲು ಬೆಂಗಳೂರು ಸಂಚಾರ ಪೊಲೀಸರು ಮಾಸ್ಟರ್ ಪ್ಲಾನ್ ಒಂದನ್ನು ರೂಪಿಸುತ್ತಿದ್ದು, ಬರೋಬ್ಬರಿ 500ಕ್ಕೂ ಅಧಿಕ ಐಟಿ-ಬಿಟಿ ಕಂಪನಿಗಳ ಸಭೆ ಕರೆದಿದ್ದಾರೆ.

17 ಕಿ.ಮೀ ವ್ಯಾಪ್ತಿಯಲ್ಲಿ 2.5 ಲಕ್ಷ ವಾಹನ!

ನಗರದ ಪ್ರಮುಖ ಐಟಿ ಹಬ್ ಆಗಿರುವ ಹೊರವರ್ತುಲ ರಸ್ತೆಯ (ORR) ಕೆ.ಆರ್. ಪುರಂನಿಂದ ಇಬ್ಬಲೂರು ವರೆಗಿನ ರಸ್ತೆ ಅತ್ಯಂತ ದಟ್ಟಣೆಯ ಪ್ರದೇಶವಾಗಿದೆ. ಪೊಲೀಸ್ ಇಲಾಖೆಯ ಅಂಕಿಅಂಶಗಳ ಪ್ರಕಾರ, ಕೇವಲ 17 ಕಿಲೋಮೀಟರ್ ಇರುವ ಈ ವ್ಯಾಪ್ತಿಯಲ್ಲಿ ಪ್ರತಿನಿತ್ಯ ಸುಮಾರು 2.5 ಲಕ್ಷ ವಾಹನಗಳು ಓಡಾಡುತ್ತವೆ. ಇಷ್ಟೊಂದು ಬೃಹತ್ ಪ್ರಮಾಣದ ವಾಹನಗಳು ಏಕಕಾಲದಲ್ಲಿ ರಸ್ತೆಗಿಳಿಯುವುದೇ ಟ್ರಾಫಿಕ್ ಜಾಮ್‌ಗೆ ಪ್ರಮುಖ ಕಾರಣವಾಗಿದೆ.

ಸಾರ್ವಜನಿಕ ಸಾರಿಗೆಗೆ ಒತ್ತು

ಈ ದಟ್ಟಣೆಯನ್ನು ನಿಯಂತ್ರಿಸಲು ಪೊಲೀಸರು ಈಗಾಗಲೇ ‘ಬ್ಲೂಪ್ರಿಂಟ್’ ಸಿದ್ಧಪಡಿಸಿಕೊಂಡಿದ್ದಾರೆ. ಮುಂದಿನ ವಾರ ಐಟಿ ಕಂಪನಿಗಳ ಮುಖ್ಯಸ್ಥರೊಂದಿಗೆ ನಡೆಯಲಿರುವ ಮಹತ್ವದ ಸಭೆಯಲ್ಲಿ, ಖಾಸಗಿ ವಾಹನಗಳ ಬಳಕೆಯನ್ನು ಕಡಿಮೆ ಮಾಡುವಂತೆ ಮನವಿ ಮಾಡುವ ಸಾಧ್ಯತೆಯಿದೆ. ನೌಕರರು ಸ್ವಂತ ವಾಹನಗಳ ಬದಲು ‘ಪಬ್ಲಿಕ್ ಟ್ರಾನ್ಸ್‌ಪೋರ್ಟ್’ (ಬಿಎಂಟಿಸಿ ಬಸ್ ಅಥವಾ ಮೆಟ್ರೋ) ಬಳಸಲು ಉತ್ತೇಜಿಸುವಂತೆ ಅಥವಾ ಕಾರ್ ಪೂಲಿಂಗ್ ವ್ಯವಸ್ಥೆ ಅಳವಡಿಸಿಕೊಳ್ಳುವಂತೆ ಕಂಪನಿಗಳಿಗೆ ಸೂಚನೆ ನೀಡುವ ಸಂಭವವಿದೆ. ಈ ಸಭೆಯಲ್ಲಿ ತೆಗೆದುಕೊಳ್ಳುವ ತೀರ್ಮಾನಗಳ ಮೇಲೆ ಮುಂದಿನ ಟ್ರಾಫಿಕ್ ಸುಧಾರಣಾ ಕ್ರಮಗಳು ನಿರ್ಧಾರವಾಗಲಿವೆ.