S Shorts

Tech ಸಿಟಿಯಲ್ಲಿ ‘Smart’ ಆಗಿಲ್ವಾ ಟ್ರಾಫಿಕ್ ಪೊಲೀಸ್?: ಕ್ಯಾಮೆರಾ ದಂಡ ಇಳಿಕೆ, ರಸ್ತೆಯಲ್ಲಿ ನಿಂತು ಹಾಕುವ ಕೇಸ್ ಡಬಲ್!

Tech ಸಿಟಿಯಲ್ಲಿ ‘Smart’ ಆಗಿಲ್ವಾ ಟ್ರಾಫಿಕ್ ಪೊಲೀಸ್?: ಕ್ಯಾಮೆರಾ ದಂಡ ಇಳಿಕೆ, ರಸ್ತೆಯಲ್ಲಿ ನಿಂತು ಹಾಕುವ ಕೇಸ್ ಡಬಲ್!
Author: Sagaradventure
Posted By: Sagaradventure
Updated: Feb 15, 2026 | 12:52 PM

ಬೆಂಗಳೂರು: ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಸಂಚಾರ ನಿಯಮ ಉಲ್ಲಂಘನೆ ಪತ್ತೆಹಚ್ಚಲು ಹೈಟೆಕ್ ತಂತ್ರಜ್ಞಾನ ಮತ್ತು ಎಐ (AI) ಕ್ಯಾಮೆರಾಗಳ ಮೊರೆ ಹೋಗಿದ್ದೇವೆ ಎಂದು ಸಂಚಾರ ಪೊಲೀಸರು (BTP) ಹೇಳಿಕೊಳ್ಳುತ್ತಿದ್ದರೂ, ವಾಸ್ತವದ ಅಂಕಿಅಂಶಗಳು ಬೇರೆಯದ್ದೇ ಕಥೆಯನ್ನು ಹೇಳುತ್ತಿವೆ. ತಂತ್ರಜ್ಞಾನ ಆಧಾರಿತ ಪ್ರಕರಣಗಳ ಸಂಖ್ಯೆ ಇಳಿಮುಖವಾಗಿದ್ದರೆ, ರಸ್ತೆಯಲ್ಲಿ ಪೊಲೀಸರೇ ಖುದ್ದು ವಾಹನ ತಡೆದು ಹಾಕುವ ದಂಡದ (Contact cases) ಪ್ರಮಾಣ 2025ರಲ್ಲಿ ದ್ವಿಗುಣಗೊಂಡಿದೆ.

2024ರಲ್ಲಿ ಪೊಲೀಸರು ಖುದ್ದು ತಪಾಸಣೆ ನಡೆಸಿ ದಾಖಲಿಸಿದ ಪ್ರಕರಣಗಳ ಸಂಖ್ಯೆ 4.81 ಲಕ್ಷದಷ್ಟಿತ್ತು. ಆದರೆ, 2025ರ ವೇಳೆಗೆ ಈ ಸಂಖ್ಯೆ ಬರೋಬ್ಬರಿ 8.49 ಲಕ್ಷಕ್ಕೆ ಏರಿಕೆಯಾಗಿದೆ. 2023ರಲ್ಲಿ ಒಟ್ಟು ಪ್ರಕರಣಗಳಲ್ಲಿ ಕೇವಲ ಶೇ. 2.7 ರಷ್ಟಿದ್ದ ಮ್ಯಾನುಯಲ್ ಪ್ರಕರಣಗಳು, 2025ರ ವೇಳೆಗೆ ಶೇ. 12.14ಕ್ಕೆ ಏರಿಕೆಯಾಗಿರುವುದು ಪೊಲೀಸರು ಮತ್ತೆ ಹಳೆಯ ಪದ್ಧತಿಗೆ ಮರಳುತ್ತಿದ್ದಾರೆಯೇ ಎಂಬ ಅನುಮಾನ ಹುಟ್ಟುಹಾಕಿದೆ.

ಮಂಜಾಯಿತೇ ಕ್ಯಾಮೆರಾ ಕಣ್ಣು? 

ಒಂದೆಡೆ ಪೊಲೀಸರು ರಸ್ತೆಯಲ್ಲಿ ನಿಂತು ದಂಡ ವಿಧಿಸುವುದು ಹೆಚ್ಚಾಗಿದ್ದರೆ, ಇನ್ನೊಂದೆಡೆ ಹೈಟೆಕ್ ಕ್ಯಾಮೆರಾಗಳ ಮೂಲಕ ದಾಖಲಾಗುವ ಪ್ರಕರಣಗಳ ಸಂಖ್ಯೆ ಭಾರೀ ಇಳಿಕೆ ಕಂಡಿದೆ. 2023ರಲ್ಲಿ ಕ್ಯಾಮೆರಾಗಳ ಮೂಲಕ 87.47 ಲಕ್ಷ ಕೇಸ್ ದಾಖಲಾಗಿದ್ದರೆ, 2024ರಲ್ಲಿ ಅದು 78.07 ಲಕ್ಷಕ್ಕೆ ಮತ್ತು 2025ರಲ್ಲಿ 61.38 ಲಕ್ಷಕ್ಕೆ ಕುಸಿದಿದೆ.

ಈ ಬಗ್ಗೆ ಪ್ರತಿಕ್ರಿಯಿಸಿರುವ ಸಂಚಾರ ವಿಭಾಗದ ಜಂಟಿ ಆಯುಕ್ತ ಕಾರ್ತಿಕ್ ರೆಡ್ಡಿ, “ಸ್ವಯಂಚಾಲಿತ ಕ್ಯಾಮೆರಾಗಳಲ್ಲಿ ಕೆಲವೊಮ್ಮೆ ತಾಂತ್ರಿಕ ದೋಷಗಳಿಂದ ತಪ್ಪು ವಾಹನಗಳಿಗೆ ದಂಡ ಬೀಳುವ ಸಾಧ್ಯತೆ ಇರುತ್ತದೆ. ಹೀಗಾಗಿ ನಾವು ಈಗ ಪ್ರತಿಯೊಂದು ಆಟೋಮ್ಯಾಟಿಕ್ ಕೇಸ್ ಅನ್ನು ಮ್ಯಾನುಯಲ್ ಆಗಿ ಪರಿಶೀಲನೆ (Validate) ನಡೆಸುತ್ತಿದ್ದೇವೆ. ಈ ಪ್ರಕ್ರಿಯೆಯಲ್ಲಿ ತಪ್ಪು ಕೇಸ್‌ಗಳನ್ನು ತೆಗೆದುಹಾಕುತ್ತಿರುವುದರಿಂದ ಸಂಖ್ಯೆಯಲ್ಲಿ ಇಳಿಕೆ ಕಂಡಿರಬಹುದು,” ಎಂದು ಸಮರ್ಥಿಸಿಕೊಂಡಿದ್ದಾರೆ. ಆದರೆ, ಮೂಲಗಳ ಪ್ರಕಾರ ನಗರದ ಹಲವು ಕಡೆಗಳಲ್ಲಿ ಕ್ಯಾಮೆರಾಗಳು ಕೆಟ್ಟುಹೋಗಿರುವುದು ಮತ್ತು ಕೆಲವು ಭಾಗಗಳಲ್ಲಿ ಇನ್ನೂ ಕ್ಯಾಮೆರಾ ಅಳವಡಿಸದಿರುವುದು ಕೂಡ ಈ ಇಳಿಕೆಗೆ ಕಾರಣ ಎನ್ನಲಾಗಿದೆ.

ಸವಾರರ ಪರದಾಟ ಮತ್ತು ಲಂಚದ ಆರೋಪ 

ನಗರದ ಪ್ರಮುಖ ರಸ್ತೆಗಳಲ್ಲಿ ಪ್ರತಿ 2-3 ಕಿಲೋಮೀಟರ್‌ಗೊಮ್ಮೆ ಟ್ರಾಫಿಕ್ ಪೊಲೀಸರು ಗುಂಪು ಗುಂಪಾಗಿ ನಿಂತು ವಾಹನಗಳನ್ನು ತಡೆಯುತ್ತಿರುವುದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ. “ಟೆಕ್ನಾಲಜಿ ಇದ್ದರೂ ಪೊಲೀಸರು ರಸ್ತೆಯಲ್ಲಿ ನಿಂತು ಸವಾರರಿಗೆ ಕಿರುಕುಳ ನೀಡುತ್ತಿದ್ದಾರೆ. ಅನೇಕರು ದಂಡದ ರಸೀದಿ ಪಡೆಯುವ ಬದಲು ಲಂಚ ಕೊಟ್ಟು ಹೋಗುತ್ತಿದ್ದಾರೆ” ಎಂದು ಟೆಕ್ಕಿ ಅಭಯ್ ಕೆ. ದೂರಿದ್ದಾರೆ.

ಆದರೆ ಈ ಆರೋಪವನ್ನು ತಳ್ಳಿಹಾಕಿರುವ ಪೊಲೀಸರು, ಮದ್ಯಪಾನ ಮಾಡಿ ವಾಹನ ಚಾಲನೆ, ಫುಟ್‌ಪಾತ್ ರೈಡಿಂಗ್ ಮತ್ತು ನೋ ಪಾರ್ಕಿಂಗ್‌ನಂತಹ ಉಲ್ಲಂಘನೆಗಳನ್ನು ಕ್ಯಾಮೆರಾಗಳ ಮೂಲಕ ಪತ್ತೆಹಚ್ಚಲು ಸಾಧ್ಯವಿಲ್ಲ. ಇವಕ್ಕೆ ವಿಶೇಷ ಕಾರ್ಯಾಚರಣೆ ಅನಿವಾರ್ಯ. ಅಲ್ಲದೆ, ಪೀಕ್ ಅವರ್ ಹೊರತುಪಡಿಸಿ ಉಳಿದ ಸಮಯದಲ್ಲಿ ಮಾತ್ರ ನಮ್ಮ ಸಿಬ್ಬಂದಿ ತಪಾಸಣೆ ನಡೆಸುತ್ತಾರೆ. ಬಾಡಿ ವೋರ್ನ್ (Body-worn) ಕ್ಯಾಮೆರಾಗಳನ್ನು ಧರಿಸುವುದರಿಂದ ಅನಗತ್ಯವಾಗಿ ಯಾರನ್ನೂ ತಡೆಯುವುದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.