ಬೆಂಗಳೂರು: ಸಿಲಿಕಾನ್ ಸಿಟಿಯ ದಕ್ಷಿಣ ಮತ್ತು ಕೇಂದ್ರ ಭಾಗದ ನಿವಾಸಿಗಳಿಗೆ ಬೆಂಗಳೂರು ಜಲಮಂಡಳಿ (BWSSB) ಮಹತ್ವದ ಮಾಹಿತಿಯೊಂದನ್ನು ನೀಡಿದೆ. ತುರ್ತು ನಿರ್ವಹಣಾ ಕಾಮಗಾರಿಯ ಹಿನ್ನೆಲೆಯಲ್ಲಿ ಫೆಬ್ರವರಿ 5 ರಂದು ನಗರದ ಪ್ರಮುಖ ಬಡಾವಣೆಗಳಲ್ಲಿ ಬರೋಬ್ಬರಿ 24 ಗಂಟೆಗಳ ಕಾಲ ಕಾವೇರಿ ನೀರು ಪೂರೈಕೆಯಲ್ಲಿ ವ್ಯತ್ಯಯವಾಗಲಿದೆ (Water Cut).
ಕಾವೇರಿ ನೀರು ಸರಬರಾಜು ಯೋಜನೆ ಹಂತ-1 ಮತ್ತು ಹಂತ-2ರ ಅಡಿಯಲ್ಲಿ ಬೃಹತ್ ಪೈಪ್‌ಲೈನ್ ಜೋಡಣೆ ಕಾಮಗಾರಿ ನಡೆಯುತ್ತಿರುವುದರಿಂದ, ಪಂಪಿಂಗ್ ಸ್ಟೇಷನ್‌ಗಳನ್ನು ಸ್ಥಗಿತಗೊಳಿಸಲಾಗುತ್ತಿದೆ. ಹೀಗಾಗಿ, ಗುರುವಾರ (ಫೆ. 5) ಬೆಳಿಗ್ಗೆ 6 ಗಂಟೆಯಿಂದ ಶುಕ್ರವಾರ (ಫೆ. 6) ಬೆಳಿಗ್ಗೆ 6 ಗಂಟೆಯವರೆಗೆ ನೀರು ಸರಬರಾಜು ಇರುವುದಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಯಾವೆಲ್ಲಾ ಪ್ರದೇಶಗಳಲ್ಲಿ ನೀರು ಇರುವುದಿಲ್ಲ?
ಈ 24 ಗಂಟೆಗಳ ಬಂದ್‌ನಿಂದಾಗಿ ದಕ್ಷಿಣ ಮತ್ತು ಕೇಂದ್ರ ಬೆಂಗಳೂರಿನ ಬಹುತೇಕ ಬಡಾವಣೆಗಳಿಗೆ ಬಿಸಿ ಮುಟ್ಟಲಿದೆ. ಪ್ರಮುಖವಾಗಿ ಈ ಕೆಳಗಿನ ಪ್ರದೇಶಗಳಲ್ಲಿ ನೀರಿನ ಅಭಾವ ಉಂಟಾಗಲಿದೆ:
ದಕ್ಷಿಣ ಬೆಂಗಳೂರು: ಬನಶಂಕರಿ (ಎಲ್ಲಾ ಹಂತಗಳು), ಜಯನಗರ (4ನೇ ಬ್ಲಾಕ್, ಟಿ ಬ್ಲಾಕ್, 5 ರಿಂದ 9ನೇ ಬ್ಲಾಕ್), ಜೆ.ಪಿ. ನಗರ (1, 2, 3ನೇ ಹಂತ), ಕುಮಾರಸ್ವಾಮಿ ಲೇಔಟ್, ಪದ್ಮನಾಭನಗರ, ಉತ್ತರಹಳ್ಳಿ, ಇಸ್ರೋ ಲೇಔಟ್, ಹೊಸಕೆರೆಹಳ್ಳಿ, ಹನುಮಗಿರಿ ನಗರ, ಚಿಕ್ಕಲ್ಲಸಂದ್ರ.
ಕೇಂದ್ರ ಬೆಂಗಳೂರು & ಇತರೆ: ಕೋರಮಂಗಲ (2 ರಿಂದ 8ನೇ ಬ್ಲಾಕ್), ಮಡಿವಾಲ, ಶಾಂತಿನಗರ, ವಿಲ್ಸನ್ ಗಾರ್ಡನ್, ಚಾಮರಾಜಪೇಟೆ, ಶ್ರೀನಗರ, ಬಸವನಗುಡಿ (ಶಂಕರಪುರ, ಕೆಂಪೇಗೌಡನಗರ), ಡಮ್ಲೂರು, ವಿವೇಕ್ ನಗರ, ರಿಚ್ಮಂಡ್ ಟೌನ್, ಆಸ್ಟಿನ್ ಟೌನ್, ಎಜಿಪುರ.
ಇತರೆ: ಮಾಗಡಿ ರಸ್ತೆ, ಸುಧಾಮನಗರ, ನಿಮ್ಹಾನ್ಸ್ ಆಸ್ಪತ್ರೆ ಸುತ್ತಮುತ್ತ, ಲಾಲ್ ಬಾಗ್ ರಸ್ತೆ, ಕನಕಪುರ ರಸ್ತೆ ವ್ಯಾಪ್ತಿ.
ಸಾರ್ವಜನಿಕರಿಗೆ ಮನವಿ:
ಕಾಮಗಾರಿ ಮುಗಿದ ನಂತರ ನೀರು ಸರಬರಾಜು ಪುನರಾರಂಭವಾಗಲಿದ್ದು, ಹಂತ ಹಂತವಾಗಿ ನೀರಿನ ಒತ್ತಡ (Pressure) ಸಹಜ ಸ್ಥಿತಿಗೆ ಮರಳಲಿದೆ. ಹೀಗಾಗಿ ಸಾರ್ವಜನಿಕರು ಇಂದೇ ಅಗತ್ಯವಿರುವಷ್ಟು ನೀರನ್ನು ಸಂಗ್ರಹಿಸಿಟ್ಟುಕೊಳ್ಳುವಂತೆ ಮತ್ತು ಲಭ್ಯವಿರುವ ನೀರನ್ನು ಮಿತವಾಗಿ ಬಳಸುವಂತೆ ಜಲಮಂಡಳಿ ಅಧ್ಯಕ್ಷ ರಾಮ್ ಪ್ರಸಾತ್ ಮನೋಹರ್ ಮನವಿ ಮಾಡಿದ್ದಾರೆ.
