ಬಿಹಾರದ ಜಮುಯಿ ಜಿಲ್ಲೆಯಲ್ಲಿ ಕೋಚಿಂಗ್ ತರಗತಿಯಿಂದ ಮರಳುತ್ತಿದ್ದ ಅಪ್ರಾಪ್ತ ವಿದ್ಯಾರ್ಥಿನಿಯ ಮೇಲೆ ನಡೆದ ಲೈಂಗಿಕ ದೌರ್ಜನ್ಯ ಹಾಗೂ ಹಲ್ಲೆ ಪ್ರಕರಣದ ಪ್ರಮುಖ ಆರೋಪಿಯು ಪೊಲೀಸರೊಂದಿಗಿನ ಎನ್‌ಕೌಂಟರ್‌ನಲ್ಲಿ ಗಾಯಗೊಂಡಿದ್ದಾನೆ. ಆರೋಪಿಯನ್ನು ಸೆರೆಹಿಡಿಯಲು ತೆರಳಿದ್ದ ವೇಳೆ ನಡೆದ ಪೊಲೀಸ್ ಕಾರ್ಯಾಚರಣೆಯಲ್ಲಿ ಆತನ ಕಾಲಿಗೆ ಗುಂಡೇಟು ಬಿದ್ದಿದೆ ಎಂದು ವರದಿಯಾಗಿದೆ. ಗಾಯಗೊಂಡಿರುವ ಆರೋಪಿಯನ್ನು ವಶಕ್ಕೆ ಪಡೆದು ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಈ ಎನ್‌ಕೌಂಟರ್ ಕುರಿತು ಪೊಲೀಸ್ ಇಲಾಖೆಯಿಂದ ಅಧಿಕೃತ ಹೇಳಿಕೆ ಇನ್ನಷ್ಟೇ ಹೊರಬೀಳಬೇಕಿದೆ.
ಸೆಪ್ಟೆಂಬರ್ 19 ರ ಶನಿವಾರ ಸಂಜೆ ಸುಮಾರು 6 ರಿಂದ 7 ಗಂಟೆಯ ಅವಧಿಯಲ್ಲಿ ಹದಿಹರೆಯದ ಬಾಲಕ ಮತ್ತು ಬಾಲಕಿ ಕೋಚಿಂಗ್ ತರಗತಿ ಮುಗಿಸಿ ಮನೆಗೆ ವಾಪಸಾಗುತ್ತಿದ್ದಾಗ ಈ ಆಘಾತಕಾರಿ ಘಟನೆ ನಡೆದಿತ್ತು. ದಾರಿಯಲ್ಲಿ ಯುವಕರ ಗುಂಪೊಂದು ಇವರನ್ನು ಅಡ್ಡಗಟ್ಟಿ ಸುತ್ತುವರಿದು, ಅಸಭ್ಯವಾಗಿ ಪ್ರಶ್ನಿಸುತ್ತಾ ಹಲ್ಲೆ ನಡೆಸಿತ್ತು. ಅಷ್ಟೇ ಅಲ್ಲದೆ, ಅಪ್ರಾಪ್ತ ಬಾಲಕಿಯ ಮೇಲೆ ಲೈಂಗಿಕ ದೌರ್ಜನ್ಯ ಎಸಗಿ ನಂತರ ಅಲ್ಲಿಂದ ಕಳುಹಿಸಲಾಗಿತ್ತು.
ದುಷ್ಕರ್ಮಿಗಳ ಈ ಅಮಾನವೀಯ ಕೃತ್ಯದ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಅದರಲ್ಲಿ ಹದಿಹರೆಯದ ಜೋಡಿ ದುಷ್ಕರ್ಮಿಗಳ ಮುಂದೆ ಕಣ್ಣೀರಿಡುತ್ತಾ ಕೈಮುಗಿದು ಬೇಡಿಕೊಳ್ಳುತ್ತಿದ್ದರೂ ಕಾಮುಕರು ಬಾಲಕಿಯನ್ನು ಅಸಭ್ಯವಾಗಿ ಮುಟ್ಟಿ, ಆಕೆಯನ್ನು ಎತ್ತಿಕೊಂಡು ಓಡಿಹೋಗಲು ಯತ್ನಿಸಿರುವ ದೃಶ್ಯಗಳು ಸೆರೆಯಾಗಿದ್ದವು.
ಈ ಅಮಾನವೀಯ ಘಟನೆಯ ವಿಡಿಯೋ ವ್ಯಾಪಕ ಆಕ್ರೋಶಕ್ಕೆ ಕಾರಣವಾದ ಬೆನ್ನಲ್ಲೇ ಜಮುಯಿ ಪೊಲೀಸ್ ವರಿಷ್ಠಾಧಿಕಾರಿ (ಎಸ್ಪಿ) ವಿಶ್ವಜೀತ್ ದಯಾಳ್ ಅವರು ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ ಆರೋಪಿಗಳ ಬಂಧನಕ್ಕೆ ವಿಶೇಷ ತಂಡಗಳನ್ನು ರಚಿಸಿದ್ದರು. ತಲೆಮರೆಸಿಕೊಂಡಿದ್ದ ದುಷ್ಕರ್ಮಿಗಳ ಬೆನ್ನುಬಿದ್ದ ಪೊಲೀಸರು ಕಾರ್ಯಾಚರಣೆ ನಡೆಸುತ್ತಿದ್ದ ವೇಳೆ ಎನ್‌ಕೌಂಟರ್ ನಡೆದಿದ್ದು, ಮುಖ್ಯ ಆರೋಪಿಯ ಕಾಲಿಗೆ ಗುಂಡು ಹಾರಿಸಿ ಆತನನ್ನು ಬಂಧಿಸಲಾಗಿದೆ. ಈ ಗಂಭೀರ ಕೃತ್ಯದಲ್ಲಿ ಭಾಗಿಯಾಗಿರುವ ಉಳಿದ ಆರೋಪಿಗಳ ಪತ್ತೆಗಾಗಿ ಪೊಲೀಸರು ತೀವ್ರ ಶೋಧ ಕಾರ್ಯಾಚರಣೆ ಮುಂದುವರಿಸಿದ್ದಾರೆ.
