ಬೆಳಗಾವಿ: ಧರ್ಮಸ್ಥಳದ ಧರ್ಮಾಧಿಕಾರಿ ಡಾ. ವೀರೇಂದ್ರ ಹೆಗ್ಗಡೆ (Dr. Veerendra Heggade) ಅವರ ವಿರುದ್ಧ ನಡೆದಿದ್ದ ವಿವಾದಾತ್ಮಕ ಪ್ರಕರಣದ ಕುರಿತು ತನಿಖೆ ಮುಂದುವರಿದಿರುವ ಹಿನ್ನೆಲೆಯಲ್ಲಿ, ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ (D.K. Shivakumar) ಅವರು ಈ ಘಟನೆ ಹಿಂದೆ ನಡೆದದ್ದು ಷಡ್ಯಂತ್ರ ಎಂದು ಅಂದೇ ತಾವು ಧೈರ್ಯದಿಂದ ಹೇಳಿದ್ದರ ಹಿಂದಿನ ಕಾರಣವನ್ನು ಬಹಿರಂಗಪಡಿಸಿದ್ದಾರೆ.
ಬೆಳಗಾವಿಯ ಸರ್ಕಿಟ್ ಹೌಸ್‌ನಲ್ಲಿ ಮಾಧ್ಯಮಗಳಿಗೆ ಬುಧವಾರ ಪ್ರತಿಕ್ರಿಯೆ ನೀಡಿದ ಡಿ.ಕೆ.ಶಿ, ಚಾರ್ಜ್ ಶೀಟ್‌ನಲ್ಲಿ ದೂರುದಾರರೇ ಆರೋಪಿಗಳು (Complainants are Accused) ಎಂಬ ಮಾಹಿತಿ ಕುರಿತು ಕೇಳಿದ ಪ್ರಶ್ನೆಗೆ ಉತ್ತರಿಸಿದರು.
ನನಗೆ ಧರ್ಮಸ್ಥಳದ ಇತಿಹಾಸ (History) ಗೊತ್ತು. ಅಲ್ಲಿ ಯಾರೂ ಸಹ ಈ ರೀತಿ ಮಾಡುವುದಿಲ್ಲ ಎನ್ನುವುದೂ ನನಗೆ ಗೊತ್ತಿತ್ತು. ಅದಕ್ಕಾಗಿಯೇ ನಾನು ಧೈರ್ಯದಿಂದ ಈ ವಿಚಾರವನ್ನು ಹೇಳಿದ್ದೆ. ಅಂತಿಮವಾಗಿ ಸತ್ಯ ಹೊರಗಡೆ ಬಂದಿದೆ. ಬಿಜೆಪಿ (BJP) ಹಾಗೂ ಆರ್‌ಎಸ್‌ಎಸ್ (RSS) ನಡುವಿನ ಆಳವಾದ ಭಿನ್ನಾಭಿಪ್ರಾಯಗಳ (Deep Differences) ಕಾರಣಕ್ಕೆ ಈ ಪಿತೂರಿ ನಡೆದಿದೆ ಎಂದು ಉಲ್ಲೇಖಿಸಿದರು.
ಚಾರ್ಜ್ ಶೀಟ್ ಪ್ರತಿಯಲ್ಲಿ ಏನಿದೆ ಎಂದು ನಾನು ಓದಿಲ್ಲ. ಆದರೆ ಸರ್ಕಾರ ಕಾನೂನಿನ ಅಡಿ ಏನು ಕ್ರಮ ತೆಗೆದುಕೊಳ್ಳಬೇಕು, ಅದು ಮುಂದುವರಿಯುತ್ತದೆ. ವೀರೇಂದ್ರ ಹೆಗ್ಗಡೆ ಅವರ ಕಷ್ಟಕಾಲದಲ್ಲಿ ನಾನು ತೆಗೆದುಕೊಂಡ ಒಂದು ನಿರ್ಧಾರದಿಂದ ಇಡೀ ದೇಶದ ಜೈನ ಸಮುದಾಯದವರು (Jain Community) ನೀವು ಒಳ್ಳೆ ಕೆಲಸ ಮಾಡಿದ್ದೀರಿ ಎಂದು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ ಎಂದರು.
ನಾನು ಯಾವ ಒತ್ತಡಕ್ಕೂ ಮಣಿಯುವುದಿಲ್ಲ, ನನ್ನ ಅನುಭವ ಹಾಗೂ ಏನನ್ನು ತಿಳಿದಿದ್ದೇನೋ ಅದನ್ನು ಹೇಳಿದ್ದೇನೆ ಎಂದು ಹೇಳಿದ್ದೆ. ಜೈನ ಸಮುದಾಯದ ಜೊತೆ ಕಾಂಗ್ರೆಸ್ ಯಾವಾಗಲೂ ಇದೆ. ಶಾಂತಿ, ಸಹನೆ, ಅಹಿಂಸೆ, ತ್ಯಾಗದ ಸಂಕೇತ ಜೈನ ಸಮುದಾಯದವರು. ಧರ್ಮ ಯಾವುದಾದರೂ ತತ್ವವೊಂದೇ ಎಂದು ಡಿ.ಕೆ.ಶಿ ಹೇಳಿದರು.
