S Shorts

CM ಕುರ್ಚಿಗಾಗಿ ‘ಕೈ’ ಪಾಳಯದಲ್ಲಿ ಜಟಾಪಟಿ: ಏಳೆಂಟು ಮಂದಿ ಕ್ಯೂನಲ್ಲಿದ್ದಾರೆ ಎಂದ ವಿಜಯೇಂದ್ರ!

CM ಕುರ್ಚಿಗಾಗಿ ‘ಕೈ’ ಪಾಳಯದಲ್ಲಿ ಜಟಾಪಟಿ: ಏಳೆಂಟು ಮಂದಿ ಕ್ಯೂನಲ್ಲಿದ್ದಾರೆ ಎಂದ ವಿಜಯೇಂದ್ರ!
Author: Sagaradventure
Posted By: Sagaradventure
Updated: Dec 1, 2025 | 9:38 AM

ಶಿರಸಿ: ರಾಜ್ಯದಲ್ಲಿ ಆಡಳಿತಾರೂಢ ಕಾಂಗ್ರೆಸ್ ಸರ್ಕಾರದಲ್ಲಿ ಮುಖ್ಯಮಂತ್ರಿ ಕುರ್ಚಿಗಾಗಿ ತೀವ್ರ ಪೈಪೋಟಿ ನಡೆಯುತ್ತಿದೆ. ಕೇವಲ ಸಚಿವರಲ್ಲ, ಹಿರಿಯ ಶಾಸಕರು ಕೂಡ ಸಿಎಂ ಆಗುವ ಕನಸು ಕಾಣುತ್ತಿದ್ದು, ಬರೋಬ್ಬರಿ ಏಳೆಂಟು ಮಂದಿ ಆಕಾಂಕ್ಷಿಗಳು ಸರದಿಯಲ್ಲಿದ್ದಾರೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಗಂಭೀರ ಆರೋಪ ಮಾಡಿದ್ದಾರೆ.

​ಸೋಮವಾರ ಶಿರಸಿಯಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ರಾಜ್ಯ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು.

“ಆಡಳಿತ ಪಕ್ಷದಲ್ಲಿನ ಈ ಆಂತರಿಕ ಕಚ್ಚಾಟದಿಂದಾಗಿ ರಾಜ್ಯದ ಆಡಳಿತ ಯಂತ್ರ ಸಂಪೂರ್ಣವಾಗಿ ಕುಸಿದಿದೆ. ಮಂತ್ರಿಗಳು ಮತ್ತು ಶಾಸಕರು ಹೇಗಾದರೂ ಮಾಡಿ ಮುಖ್ಯಮಂತ್ರಿ ಆಗಬೇಕೆಂಬ ಒಂದೇ ಗುರಿಯೊಂದಿಗೆ ಪೈಪೋಟಿಗೆ ಇಳಿದಿದ್ದಾರೆ ಹೊರತು, ಜನರ ಸಮಸ್ಯೆಗಳ ಬಗ್ಗೆ ಗಮನ ಹರಿಸುತ್ತಿಲ್ಲ” ಎಂದು ಟೀಕಿಸಿದರು.

“ಪ್ರತಿಪಕ್ಷವಾಗಿ ನಾವು ಉತ್ತರ ಕರ್ನಾಟಕದ ಜ್ವಲಂತ ಸಮಸ್ಯೆಗಳು ಮತ್ತು ರೈತರ ಸಂಕಷ್ಟಗಳ ಬಗ್ಗೆ ಧ್ವನಿ ಎತ್ತಲಿದ್ದೇವೆ. ರಾಜ್ಯ ಸರ್ಕಾರ ಕೇಂದ್ರದ ಯೋಜನೆಗಳನ್ನು ಸಮರ್ಪಕವಾಗಿ ಅನುಷ್ಠಾನಗೊಳಿಸುತ್ತಿಲ್ಲ. ಪ್ರೋಗ್ರೆಸ್ ರಿಪೋರ್ಟ್ ನೀಡದೆ, ಕೇಂದ್ರದಿಂದ ಅನುದಾನ ಬರುತ್ತಿಲ್ಲ ಎಂದು ಸುಳ್ಳು ಹೇಳುವ ಮೂಲಕ ದೊಡ್ಡ ಷಡ್ಯಂತ್ರ ಮತ್ತು ಕುತಂತ್ರ ನಡೆಸುತ್ತಿದೆ. ಈ ಎಲ್ಲ ವಿಷಯಗಳ ಬಗ್ಗೆ ಅಧಿವೇಶನದಲ್ಲಿ ಚರ್ಚಿಸುತ್ತೇವೆ” ಎಂದು ವಿಜಯೇಂದ್ರ ಎಚ್ಚರಿಸಿದರು.

ಇದೇ ವೇಳೆ, ಸ್ವಪಕ್ಷದ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಅವರು ಪ್ರತ್ಯೇಕ ಸಭೆಗಳನ್ನು ನಡೆಸುತ್ತಿರುವ ಬಗ್ಗೆ ಪ್ರತಿಕ್ರಿಯಿಸಿದ ವಿಜಯೇಂದ್ರ, “ಅವರಿಗೆ ಸಂಪೂರ್ಣ ಸ್ವಾತಂತ್ರ್ಯವಿದೆ. ಅವರು ಸಭೆ ಮಾಡುವ ಬಗ್ಗೆ ನಾನು ಚರ್ಚೆ ಮಾಡುವ ಅವಶ್ಯಕತೆ ಇಲ್ಲ. ಈ ಬಗ್ಗೆ ಏನು ತೀರ್ಮಾನ ಮಾಡಬೇಕೋ ಅದನ್ನ ನಮ್ಮ ರಾಷ್ಟ್ರೀಯ ನಾಯಕರು ನಿರ್ಧರಿಸುತ್ತಾರೆ. ಯತ್ನಾಳ್ ಅವರು ಪಕ್ಷಕ್ಕೆ ವಾಪಸ್ ಬರುವ ಬಗ್ಗೆ ನನಗೆ ಯಾವುದೇ ಮಾಹಿತಿ ಇಲ್ಲ ಮತ್ತು ರಾಜ್ಯಮಟ್ಟದಲ್ಲಿ ನನ್ನ ಜೊತೆ ಆ ಕುರಿತು ಯಾವುದೇ ಚರ್ಚೆಗಳು ನಡೆದಿಲ್ಲ” ಎಂದು ಸ್ಪಷ್ಟಪಡಿಸಿದರು.