S Shorts

ಕಸ ಸುರಿದ ಬ್ಲಿಂಕ್ ಇಟ್ ಸಂಸ್ಥೆಗೆ 80,000 ರೂ. ದಂಡ!

ಕಸ ಸುರಿದ ಬ್ಲಿಂಕ್ ಇಟ್ ಸಂಸ್ಥೆಗೆ 80,000 ರೂ. ದಂಡ!
Author: Savina Naik
Posted By: Savina Naik
Updated: Apr 16, 2026 | 4:57 PM

ಬೆಂಗಳೂರು: ಸಾರ್ವಜನಿಕ ಸ್ಥಳದಲ್ಲಿ ಅಕ್ರಮವಾಗಿ ಕಸ ಸುರಿದಿದ್ದಕ್ಕಾಗಿ ಬೆಂಗಳೂರಿನಲ್ಲಿ  ಖಾಸಗಿ ಡೆಲಿವರಿ ಸಂಸ್ಥೆ ಬ್ಲಿಂಕ್ ಇಟ್‌ಗೆ ನಗರ ಪಾಲಿಕೆ 80,000 ರೂ. ದಂಡ ವಿಧಿಸಿದೆ.

ಬೆಂಗಳೂರು ಉತ್ತರ ನಗರ ಪಾಲಿಕೆಯ ವ್ಯಾಪ್ತಿಯ ಬ್ಯಾಟರಾಯನಪುರ ವಿಭಾಗದ ವಾರ್ಡ್ ಸಂಖ್ಯೆ 9ರಲ್ಲಿ ಈ ಘಟನೆ ನಡೆದಿದೆ. ರಸ್ತೆಯಲ್ಲಿ ಕಳೆದ ಕೆಲವು ದಿನಗಳಿಂದ ಅಕ್ರಮವಾಗಿ ತ್ಯಾಜ್ಯವನ್ನು ಸುರಿಯಲಾಗುತ್ತಿದೆ ಎಂಬ ದೂರುಗಳು ಕೇಳಿಬಂದಿದ್ದವು.

ಬ್ಯಾಟರಾಯನಪುರ ವಿಭಾಗದ ಸಹಾಯಕ ಪ್ರಧಾನ ವ್ಯವಸ್ಥಾಪಕರಾದ (AGM) ತೀರ್ಥಪ್ರಸಾದ್ ಮತ್ತು ಕಿರಿಯ ಆರೋಗ್ಯ ಪರಿವೀಕ್ಷಕರಾದ (JHI) ಕವಿತಾ ಅವರು ಜಂಟಿ ಕಾರ್ಯಾಚರಣೆ ನಡೆಸಿದರು.

ಈ ಹಿನ್ನೆಲೆಯಲ್ಲಿ ನಗರ ಪಾಲಿಕೆಯ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದಾಗ, ಖಾಸಗಿ ಸಂಸ್ಥೆಯಾದ ಬ್ಲಿಂಕ್ ಇಟ್ (Blinkit) ತನ್ನ ತ್ಯಾಜ್ಯವನ್ನು ಸಾರ್ವಜನಿಕ ರಸ್ತೆಯಲ್ಲಿ ಅಕ್ರಮವಾಗಿ ವಿಲೇವಾರಿ ಮಾಡಿರುವುದು ಸಾಬೀತಾಗಿದೆ.

ನಿಯಮಗಳನ್ನು ಗಾಳಿಗೆ ತೂರಿ ಸಾರ್ವಜನಿಕ ಆರೋಗ್ಯಕ್ಕೆ ಹಾನಿ ಉಂಟುಮಾಡಿದ್ದಕ್ಕಾಗಿ ಸಂಸ್ಥೆಗೆ ಸ್ಥಳದಲ್ಲೇ 80,000 ರೂಪಾಯಿಗಳ ಭಾರಿ ದಂಡದ ನೋಟಿಸ್ ನೀಡಿದ್ದಾರೆ.

ಬೆಂಗಳೂರನ್ನು ‘ಕಸ ಮುಕ್ತ’ ನಗರವನ್ನಾಗಿ ಮಾಡುವ ನಿಟ್ಟಿನಲ್ಲಿ ಪಾಲಿಕೆಯ ಈ ಕ್ರಮಕ್ಕೆ ಸಾರ್ವಜನಿಕ ವಲಯದಲ್ಲಿ ಮೆಚ್ಚುಗೆ ವ್ಯಕ್ತವಾಗಿದೆ.