S Shorts

Ola, Uber ಆ್ಯಪ್‌ಗಳಲ್ಲೂ BMTC ಬಸ್ ಟ್ರ್ಯಾಕಿಂಗ್, ಮೆಟ್ರೋ ಪ್ರಯಾಣಿಕರಿಗೆ 200 ಮಿನಿ ಎಸಿ ಬಸ್ ಭಾಗ್ಯ!

Ola, Uber ಆ್ಯಪ್‌ಗಳಲ್ಲೂ BMTC ಬಸ್ ಟ್ರ್ಯಾಕಿಂಗ್, ಮೆಟ್ರೋ ಪ್ರಯಾಣಿಕರಿಗೆ 200 ಮಿನಿ ಎಸಿ ಬಸ್ ಭಾಗ್ಯ!
Author: Sagaradventure
Posted By: Sagaradventure
Updated: Sep 10, 2026 | 10:25 AM

ರಾಜಧಾನಿ ಬೆಂಗಳೂರಿನ ಸಾರಿಗೆ ವ್ಯವಸ್ಥೆಯನ್ನು ಮತ್ತಷ್ಟು ಜನಸ್ನೇಹಿಯಾಗಿಸಲು ಸಾರಿಗೆ ಇಲಾಖೆ ಮಹತ್ವದ ಹೆಜ್ಜೆಯಿಟ್ಟಿದೆ. ಇನ್ನು ಮುಂದೆ ಓಲಾ (Ola), ಊಬರ್ (Uber) ಹಾಗೂ ಇತರ ಖಾಸಗಿ ಆ್ಯಪ್ ಆಧಾರಿತ ಟ್ಯಾಕ್ಸಿ ಬಳಸುವ ಪ್ರಯಾಣಿಕರು ‘ನಮ್ಮ ಬಿಎಂಟಿಸಿ ಮೊಬೈಲ್ ಆ್ಯಪ್ 2.0’ ಮೂಲಕ ಬಿಎಂಟಿಸಿ ಬಸ್‌ಗಳ ಲೈವ್ ಟ್ರ್ಯಾಕಿಂಗ್ ಸೌಲಭ್ಯವನ್ನು ಸುಲಭವಾಗಿ ಪಡೆದುಕೊಳ್ಳಬಹುದು ಎಂದು ಸಾರಿಗೆ ಸಚಿವ ಬೈರತಿ ಸುರೇಶ್ ತಿಳಿಸಿದ್ದಾರೆ. 

ಸಾರಿಗೆ ಇಲಾಖೆ, ಕೆಎಸ್‌ಆರ್‌ಟಿಸಿ ಹಾಗೂ ಬಿಎಂಟಿಸಿ ಹಿರಿಯ ಅಧಿಕಾರಿಗಳ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಸಚಿವರು, ಕ್ಯಾಬ್‌ಗಳಿಂದ ಇಳಿಯುವ ಪ್ರಯಾಣಿಕರು ತಮ್ಮ ಮುಂದಿನ ಗಮ್ಯಸ್ಥಾನ ತಲುಪಲು ಲಭ್ಯವಿರುವ ಬಿಎಂಟಿಸಿ ಬಸ್‌ಗಳ ಮಾಹಿತಿಯನ್ನು ತ್ವರಿತವಾಗಿ ಪಡೆಯಲು ಅನುಕೂಲವಾಗುವಂತೆ ಈ ನೂತನ ವ್ಯವಸ್ಥೆ ಜಾರಿಗೊಳಿಸಲು ನಿರ್ದೇಶನ ನೀಡಿದ್ದಾರೆ.

ಮೆಟ್ರೋ ಪ್ರಯಾಣಿಕರಿಗೆ ‘ಲಾಸ್ಟ್ ಮೈಲ್ ಕನೆಕ್ಟಿವಿಟಿ’ (ಕೊನೆಯ ಹಂತದ ಸಂಪರ್ಕ) ಕಲ್ಪಿಸುವ ನಿಟ್ಟಿನಲ್ಲಿ ಎಲ್ಲಾ ಮೆಟ್ರೋ ನಿಲ್ದಾಣಗಳಿಗೆ ಒಟ್ಟು 200 ಮಿನಿ ಹವಾನಿಯಂತ್ರಿತ (AC) ಎಲೆಕ್ಟ್ರಿಕ್ ಬಸ್‌ಗಳನ್ನು ನಿಯೋಜಿಸುವಂತೆ ಸಚಿವರು ಬಿಎಂಟಿಸಿ ಅಧಿಕಾರಿಗಳಿಗೆ ಸೂಚಿಸಿದ್ದಾರೆ. 

ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆಯಡಿ ಬಿಎಂಟಿಸಿ ಖರೀದಿಸುತ್ತಿರುವ ಒಟ್ಟು 4,500 ಎಲೆಕ್ಟ್ರಿಕ್ ಬಸ್‌ಗಳ ಪೈಕಿ ಈ 200 ಮಿನಿ ಎಸಿ ಬಸ್‌ಗಳು ಸೇರಿವೆ. ಈ ಮಿನಿ ಬಸ್‌ಗಳು ಮೆಟ್ರೋ ನಿಲ್ದಾಣಗಳ ಸುತ್ತಮುತ್ತಲಿನ 5 ಕಿ.ಮೀ ವ್ಯಾಪ್ತಿಯಲ್ಲಿರುವ ಪ್ರಮುಖ ವಸತಿ ಬಡಾವಣೆಗಳು ಹಾಗೂ ವಾಣಿಜ್ಯ ಪ್ರದೇಶಗಳಿಗೆ ಸುಗಮ ಸಂಪರ್ಕ ಕಲ್ಪಿಸಲಿವೆ. ಇದರಿಂದ ಮೆಟ್ರೋ ಇಳಿದು ಮನೆ ತಲುಪಲು ಪರದಾಡುತ್ತಿದ್ದ ಸಾವಿರಾರು ಪ್ರಯಾಣಿಕರಿಗೆ ಹೆಚ್ಚಿನ ಅನುಕೂಲವಾಗಲಿದೆ.

ಇದೇ ವೇಳೆ, ಬೆಂಗಳೂರಿನ ಐಟಿ-ಬಿಟಿ ಕಂಪನಿಗಳ ಉದ್ಯೋಗಿಗಳ ಅನುಕೂಲಕ್ಕಾಗಿ ಬಿಎಂಟಿಸಿಯಿಂದ ಹೆಚ್ಚಿನ ಸಂಖ್ಯೆಯಲ್ಲಿ ಹವಾನಿಯಂತ್ರಿತ (ಎಸಿ) ಬಸ್‌ಗಳನ್ನು ಒದಗಿಸಲು ನಿರ್ಧರಿಸಲಾಗಿದೆ. ಸಿಲಿಕಾನ್ ಸಿಟಿಯ ಟ್ರಾಫಿಕ್ ದಟ್ಟಣೆ ಕಡಿಮೆ ಮಾಡುವ ಉದ್ದೇಶದಿಂದ ಐಟಿ ಉದ್ಯೋಗಿಗಳನ್ನು ಸಾರ್ವಜನಿಕ ಸಾರಿಗೆಯತ್ತ ಸೆಳೆಯಲು ಈ ಕ್ರಮ ಕೈಗೊಳ್ಳಲಾಗುತ್ತಿದ್ದು, ಈ ಕುರಿತು ಸಂಬಂಧಪಟ್ಟ ಕಂಪನಿಗಳ ಆಡಳಿತ ಮಂಡಳಿಗಳೊಂದಿಗೆ ತಕ್ಷಣವೇ ಮಾತುಕತೆ ನಡೆಸಿ ಅಗತ್ಯ ಸೇವೆ ಒದಗಿಸುವಂತೆ ಅಧಿಕಾರಿಗಳಿಗೆ ಸಚಿವರು ಸ್ಪಷ್ಟ ಸೂಚನೆ ನೀಡಿದ್ದಾರೆ.