ಬೆಂಗಳೂರು: ಸಿಲಿಕಾನ್ ಸಿಟಿಯಲ್ಲಿ ಕಸದ ಸಮಸ್ಯೆ ಸ್ಫೋಟಕ ರೂಪ ಪಡೆದಿದೆ. ಕಳೆದ ಎರಡು ದಿನಗಳಿಂದ ಕಸ ಸಂಗ್ರಹ ಸ್ಥಗಿತಗೊಂಡಿದ್ದು, ಸಾರ್ವಜನಿಕರು ನಾರುವ ಸ್ಥಿತಿಯಲ್ಲಿ ಬದುಕುವಂತಾಗಿದೆ. ಬೆಂಗಳೂರು ಘನತ್ಯಾಜ್ಯ ನಿರ್ವಹಣಾ ಸಂಸ್ಥೆ (BSWML) ಅಧಿಕಾರಿಗಳು ಮತ್ತು ಗುತ್ತಿಗೆದಾರರ ನಡುವಿನ ಕಿತ್ತಾಟಕ್ಕೆ ಈಗ ಪೌರಕಾರ್ಮಿಕರು ಬಲಿಯಾಗುತ್ತಿದ್ದಾರೆ.
ಪೌರಕಾರ್ಮಿಕರ ಆಕ್ರೋಶಕ್ಕೆ ಕಾರಣವೇನು?
ಕಸ ವಿಲೇವಾರಿ ಮಾಡುವ ಆಟೋ ಚಾಲಕರು ಮತ್ತು ಸಹಾಯಕರು ಈಗ ಕೆಲಸ ಸ್ಥಗಿತಗೊಳಿಸಿ ಪ್ರತಿಭಟನೆಗೆ ಇಳಿದಿದ್ದಾರೆ. ಹಸಿ ಮತ್ತು ಒಣ ಕಸ ವಿಂಗಡಣೆ ಮಾಡದಿದ್ದರೆ ಕಸದ ಆಟೋ ಚಾಲಕರಿಗೆ ಮಾರ್ಷಲ್‌ಗಳು ₹1,000 ದಂಡ ವಿಧಿಸುತ್ತಿದ್ದಾರೆ. ಜನರು ವಿಂಗಡಿಸದೆ ನೀಡುವ ಕಸಕ್ಕೆ ಕಾರ್ಮಿಕರನ್ನು ಹೊಣೆ ಮಾಡುತ್ತಿರುವುದು ಆಕ್ರೋಶಕ್ಕೆ ಕಾರಣವಾಗಿದೆ.
ಕಳೆದ ಮೂರು ತಿಂಗಳಿನಿಂದ ಕಾರ್ಮಿಕರಿಗೆ ವೇತನ ನೀಡಿಲ್ಲ. ಅತ್ತ ಗುತ್ತಿಗೆದಾರರಿಗೆ ಆರು ತಿಂಗಳಿನಿಂದ ಬಿಲ್ ಪಾವತಿಯಾಗಿಲ್ಲ. ಕಸ ವಿಂಗಡಣೆ ಮಾಡುವಾಗ ಇಂಜೆಕ್ಷನ್ ಸಿರೆಂಜ್‌ಗಳು ಚುಚ್ಚಿ ಗಾಯಗಳಾಗುತ್ತಿವೆ. ಇಂತಹ ಅಪಾಯಕಾರಿ ಕೆಲಸದ ನಡುವೆಯೂ ರಕ್ಷಣೆ ಮತ್ತು ಸರಿಯಾದ ವೇತನ ಸಿಗುತ್ತಿಲ್ಲ ಎಂಬುದು ಕಾರ್ಮಿಕರ ದೂರು.
35 ಗುತ್ತಿಗೆದಾರರ ವಿರುದ್ಧ ‘ಎಸ್ಮಾ’ ಅಡಿ ಕೇಸ್:
ಕಸ ವಿಲೇವಾರಿ ಸ್ಥಗಿತಗೊಳಿಸಿ ಸಾರ್ವಜನಿಕರಿಗೆ ತೊಂದರೆ ನೀಡಿದ ಹಿನ್ನೆಲೆಯಲ್ಲಿ ಬಿಎಸ್‌ಡಬ್ಲ್ಯೂಎಂಎಲ್ ಅಧಿಕಾರಿಗಳು ಕಠಿಣ ಕ್ರಮ ಜರುಗಿಸಿದ್ದಾರೆ. ಅಗತ್ಯ ಸೇವೆಗಳ ನಿರ್ವಹಣಾ ಕಾಯ್ದೆ (ಎಸ್ಮಾ – ESMA) ಅಡಿಯಲ್ಲಿ 35 ಗುತ್ತಿಗೆದಾರರ ವಿರುದ್ಧ ಎಫ್‌ಐಆರ್ ದಾಖಲಿಸಲಾಗಿದೆ. ಕೆಲಸಕ್ಕೆ ಹಾಜರಾಗದಿದ್ದರೆ ಪರವಾನಗಿ ರದ್ದುಪಡಿಸುವ ಎಚ್ಚರಿಕೆ ನೀಡಲಾಗಿದೆ.
ಸಂಕಷ್ಟ ನಿವಾರಣೆಗೆ BSWML ಅಧಿಕಾರಿಗಳು ಮಾರ್ಚ್ 26 ವಿವಿಧ ವಿಧಾನಸಭಾ ಕ್ಷೇತ್ರಗಳ ಗುತ್ತಿಗೆದಾರರೊಂದಿಗೆ ಪ್ರತ್ಯೇಕ ಚರ್ಚೆ. ಮತ್ತು ಮಾರ್ಚ್ 27 ರಂದು ಗುತ್ತಿಗೆದಾರರ ಸಂಘದ ಪದಾಧಿಕಾರಿಗಳೊಂದಿಗೆ ಅಂತಿಮ ಹಂತದ ಸಂಧಾನ ಕುರಿತಂತೆ ಎರಡು ದಿನಗಳ ಕಾಲ ಸರಣಿ ಸಭೆಗಳನ್ನು ಕರೆದಿದ್ದಾರೆ.
ಬೆಂಗಳೂರಿನ 253 ಜಿಬಿಎ ವಾರ್ಡ್‌ಗಳ ಪೈಕಿ 40ಕ್ಕೂ ಹೆಚ್ಚು ವಾರ್ಡ್‌ಗಳಲ್ಲಿ ಕಸ ವಿಲೇವಾರಿ ಸಂಪೂರ್ಣ ಸ್ಥಗಿತಗೊಂಡಿದೆ. ಮಲ್ಲೇಶ್ವರಂ, ಮಹಾಲಕ್ಷ್ಮಿ ಲೇಔಟ್, ರಾಜಾಜಿನಗರ, ಮತ್ತು ವಿಜಯನಗರ ಬಡಾವಣೆಗಳಲ್ಲಿ ಕಸದ ರಾಶಿ ಬಿದ್ದಿದ್ದು, ಸಾರ್ವಜನಿಕರು ರೋಗಭೀತಿಯಲ್ಲಿದ್ದಾರೆ.
