S Shorts

ಕಾಂಗ್ರೆಸ್‌ನಲ್ಲಿ ನಾಯಕತ್ವ ಬದಲಾವಣೆ ಬೆನ್ನಲ್ಲೇ ದೆಹಲಿಗೆ ಬಿ.ವೈ.ವಿಜಯೇಂದ್ರ ಧಿಡೀರ್ ಭೇಟಿ: ಬಿಜೆಪಿಯಲ್ಲೂ ಶುರುವಾಯ್ತಾ Leadership ಚೇಂಜ್ ಲೆಕ್ಕಾಚಾರ?

ಕಾಂಗ್ರೆಸ್‌ನಲ್ಲಿ ನಾಯಕತ್ವ ಬದಲಾವಣೆ ಬೆನ್ನಲ್ಲೇ ದೆಹಲಿಗೆ ಬಿ.ವೈ.ವಿಜಯೇಂದ್ರ ಧಿಡೀರ್ ಭೇಟಿ: ಬಿಜೆಪಿಯಲ್ಲೂ ಶುರುವಾಯ್ತಾ Leadership ಚೇಂಜ್ ಲೆಕ್ಕಾಚಾರ?
Author: Sagaradventure
Posted By: Sagaradventure
Updated: May 31, 2026 | 12:31 PM

ಬೆಂಗಳೂರು: ರಾಜ್ಯ ಕಾಂಗ್ರೆಸ್‌ನಲ್ಲಿ ನಾಯಕತ್ವ ಬದಲಾವಣೆಯಾಗಿ ಹೊಸ ಮುಖ್ಯಮಂತ್ರಿ ಆಯ್ಕೆಯ ಕಸರತ್ತು ನಡೆಯುತ್ತಿರುವ ಬೆನ್ನಲ್ಲೇ, ಇತ್ತ ಪ್ರತಿಪಕ್ಷ ಬಿಜೆಪಿಯಲ್ಲೂ ಭಾರಿ ರಾಜಕೀಯ ಚಟುವಟಿಕೆಗಳು ಗರಿಗೆದರಿವೆ. ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಅವರು ಶುಕ್ರವಾರ ರಾತ್ರಿಯೇ ಧಿಡೀರ್ ಎಂದು ದೆಹಲಿಗೆ ತೆರಳಿರುವುದು ರಾಜ್ಯ ರಾಜಕಾರಣದಲ್ಲಿ ತೀವ್ರ ಕುತೂಹಲಕ್ಕೆ ಕಾರಣವಾಗಿದೆ. 

ಕಳೆದ 2 ದಿನಗಳಿಂದ ದೇಶದ ರಾಜಧಾನಿಯಲ್ಲೇ ಬೀಡುಬಿಟ್ಟಿರುವ ಅವರು, ವರಿಷ್ಠರ ಭೇಟಿಗೆ ಮುಂದಾಗಿರುವುದು ಹಲವು ಚರ್ಚೆಗಳಿಗೆ ಗ್ರಾಸವಾಗಿದೆ. ಮುಂಬರುವ ರಾಜ್ಯಸಭೆ ಹಾಗೂ ವಿಧಾನಪರಿಷತ್ ಚುನಾವಣೆಗೆ ಅಭ್ಯರ್ಥಿಗಳ ಆಯ್ಕೆ ಸೇರಿದಂತೆ ಪ್ರಮುಖ ವಿಚಾರಗಳ ಬಗ್ಗೆ ಹೈಕಮಾಂಡ್ ನಾಯಕರ ಜೊತೆ ಚರ್ಚೆ ನಡೆಸುವುದಕ್ಕಾಗಿ ವಿಜಯೇಂದ್ರ ದೆಹಲಿಗೆ ತೆರಳಿದ್ದಾರೆ ಎಂದು ಅವರ ಆಪ್ತ ವಲಯ ಸಮರ್ಥಿಸಿಕೊಳ್ಳುತ್ತಿದೆ. ಆದರೆ, ಈ ದಿಢೀರ್ ಭೇಟಿಯ ಹಿಂದೆ ಬೇರೆಯದೇ ಆದ ರಾಜಕೀಯ ಲೆಕ್ಕಾಚಾರಗಳು ಅಡಗಿವೆ ಎಂಬ ಮಾತುಗಳು ದಟ್ಟವಾಗಿ ಕೇಳಿಬರುತ್ತಿವೆ.

ದೆಹಲಿಯಲ್ಲಿ ವಿಜಯೇಂದ್ರ ಅವರು ಯಾರನ್ನು ಭೇಟಿಯಾಗಿದ್ದಾರೆ ಎಂಬ ನಿಖರ ಮಾಹಿತಿ ಇನ್ನೂ ಅಧಿಕೃತವಾಗಿ ಲಭ್ಯವಾಗಿಲ್ಲವಾದರೂ, ಅವರು ರಾಜ್ಯ ಬಿಜೆಪಿ ಉಸ್ತುವಾರಿ ರಾಧಾಮೋಹನ್‌ ದಾಸ್ ಅಗರ್ವಾಲ್ ಸೇರಿದಂತೆ ಪ್ರಮುಖ ರಾಷ್ಟ್ರೀಯ ನಾಯಕರನ್ನು ಸಂಪರ್ಕಿಸಿದ್ದಾರೆ ಎಂದು ಹೇಳಲಾಗುತ್ತಿದೆ. ತೀವ್ರ ರಾಜಕೀಯ ಮಹತ್ವ ಪಡೆದುಕೊಂಡಿರುವ ಈ ಭೇಟಿಯ ಬಳಿಕ, ಅವರು ಇಂದು(ಭಾನುವಾರ) ಬೆಂಗಳೂರಿಗೆ ವಾಪಸ್ ಆಗುವ ನಿರೀಕ್ಷೆ ಇದೆ. 

ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಕೈಗೊಂಡಿರುವ ನಾಯಕತ್ವ ಬದಲಾವಣೆ ಹಾಗೂ ಮುಂಬರುವ ದಿನಗಳಲ್ಲಿ ಎದುರಾಗಲಿರುವ ಜಾತಿ ಸಮೀಕರಣಗಳ ಲೆಕ್ಕಾಚಾರಗಳು ಈಗ ಬಿಜೆಪಿಯ ಮೇಲೂ ಪ್ರಭಾವ ಬೀರಿವೆ. ಹೀಗಾಗಿಯೇ ವಿಜಯೇಂದ್ರ ಅವರ ಈ ದೆಹಲಿ ಪ್ರವಾಸವು ರಾಜಕೀಯ ವಲಯದಲ್ಲಿ ತೀವ್ರ ಚರ್ಚೆಗೆ ದಾರಿ ಮಾಡಿಕೊಟ್ಟಿದೆ.

ಕಾಂಗ್ರೆಸ್‌ನಲ್ಲಿ ಕುರ್ಚಿ ಬದಲಾವಣೆಯ ಬೆನ್ನಲ್ಲೇ, ಬಿಜೆಪಿಯಲ್ಲೂ ಕೂಡ ಜಾತಿ ಸಮೀಕರಣಗಳು ಬದಲಾಗಬೇಕು ಮತ್ತು ಮುಂಬರುವ ಚುನಾವಣಾ ದೃಷ್ಟಿಯಿಂದ ಹೊಸ ಕಾರ್ಯತಂತ್ರ ರೂಪಿಸಬೇಕು ಎಂಬ ಚರ್ಚೆ ಪಕ್ಷದ ಆಂತರಿಕ ವಲಯದಲ್ಲಿ ಪ್ರಾರಂಭವಾಗಿದೆ. ಈ ಹಿನ್ನೆಲೆಯಲ್ಲಿ ಹಾಲಿ ಅಧ್ಯಕ್ಷರು ಹಾಗೂ ವಿಧಾನಸಭೆಯ ವಿರೋಧ ಪಕ್ಷದ ನಾಯಕರ ಮುಂದುವರಿಕೆಯ ಸುತ್ತ ಒಂದಿಷ್ಟು ರಾಜಕೀಯ ವ್ಯಾಖ್ಯಾನಗಳು ನಡೆಯುತ್ತಿವೆ. ಇದೆಲ್ಲದರ ಮಧ್ಯೆ, ಬಿಜೆಪಿಯೊಳಗಿನ ಒಂದು ಬಣವು ವಿಜಯೇಂದ್ರ ಅವರ ಬದಲಾವಣೆಗೂ ಹೈಕಮಾಂಡ್ ಮಟ್ಟದಲ್ಲಿ ಆಗ್ರಹಿಸುತ್ತಿದೆ ಎಂಬ ಮಾತುಗಳು ಕೇಳಿಬರುತ್ತಿವೆ. 

ಈ ಎಲ್ಲಾ ಆಂತರಿಕ ಭಿನ್ನಮತ ಹಾಗೂ ಜಾತಿ ರಾಜಕಾರಣದ ಸವಾಲುಗಳ ಮಧ್ಯೆ ವಿಜಯೇಂದ್ರ ಅವರ ದೆಹಲಿ ಭೇಟಿ ಮುಂಬರುವ ದಿನಗಳಲ್ಲಿ ರಾಜ್ಯ ಬಿಜೆಪಿಯಲ್ಲಿ ಯಾವ ರೀತಿಯ ತಿರುವು ಪಡೆದುಕೊಳ್ಳಲಿದೆ ಎಂಬುದನ್ನು ಕಾದುನೋಡಬೇಕಿದೆ.