S Shorts

Horrible Incident | ತುಂಗಭದ್ರಾ ನದಿಗೆ ಈಜಲು ಹೋದ ಒಂದೇ ಕುಟುಂಬದ ಐವರು ನೀರುಪಾಲು!

Horrible Incident | ತುಂಗಭದ್ರಾ ನದಿಗೆ ಈಜಲು ಹೋದ ಒಂದೇ ಕುಟುಂಬದ ಐವರು ನೀರುಪಾಲು!
Author: Sagaradventure
Posted By: Sagaradventure
Updated: May 31, 2026 | 9:46 AM

ರಾಯಚೂರು: ರಾಜ್ಯದಲ್ಲಿ ಸಾಲು ಸಾಲು ಜಲ ದುರಂತಗಳು ಮುಂದುವರಿದಿದ್ದು, ಇತಿಹಾಸ ಪ್ರಸಿದ್ಧ ಮಂತ್ರಾಲಯದ ಶ್ರೀ ರಾಘವೇಂದ್ರ ಸ್ವಾಮಿ ಮಠದ ಸಮೀಪದ ತುಂಗಭದ್ರಾ ನದಿಯಲ್ಲಿ ಈಜಲು ತೆರಳಿದ್ದ ಐವರು ನೀರಿನಲ್ಲಿ ಮುಳುಗಿ ಜಲಸಮಾಧಿಯಾಗಿರುವ ದಾರುಣ ಘಟನೆ ಸಂಭವಿಸಿದೆ.

​ಮೃತರನ್ನು ಹೈದರಾಬಾದ್ ಮೂಲದ ಯುವನ್ ಚಂದ್ರ (5), ಸತೀಶ್ (35), ಮಂತ್ರಾಲಯ ಗ್ರಾಮದ ರಾಘವೇಂದ್ರ (25), ಧನುಷ್ (23) ಮತ್ತು ಉರವಕೊಂಡ ಮೂಲದ ಸಂಧ್ಯಾ (22) ಎಂದು ಗುರುತಿಸಲಾಗಿದೆ. ಅದೃಷ್ಟವಶಾತ್ ಅಪರ್ಣಾ ಎಂಬ ಯುವತಿ ಪ್ರಾಣಾಪಾಯದಿಂದ ಪಾರಾಗಿದ್ದಾರೆ.

ಪೂಜೆಗೆಂದು ಬಂದು ಜಲಸಮಾಧಿಯಾದರು!

​ಮಂತ್ರಾಲಯದಲ್ಲಿದ್ದ ಸಂಬಂಧಿಕರ ಮನೆಯಲ್ಲಿ ಆಯೋಜಿಸಲಾಗಿದ್ದ ಶ್ರೀ ಸತ್ಯನಾರಾಯಣ ಸ್ವಾಮಿ ಪೂಜಾ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ಇವರೆಲ್ಲರೂ ಆಗಮಿಸಿದ್ದರು. ಪೂಜೆ ಮುಗಿದ ಬಳಿಕ ತುಂಗಭದ್ರಾ ನದಿಗೆ ಈಜಲೆಂದು ತೆರಳಿದ್ದಾರೆ. ಆದರೆ, ನದಿಯ ಆಳ ಹಾಗೂ ನೀರಿನ ಹರಿವಿನ ರಭಸದ ಅರಿವಿಲ್ಲದೆ ನದಿಗೆ ಇಳಿದಾಗ ಈ ದುರಂತ ಸಂಭವಿಸಿದೆ.

​ಸದ್ಯ ಮೃತರ ಪೈಕಿ ರಾಘವೇಂದ್ರ ಹಾಗೂ ಸಂಧ್ಯಾ ಅವರ ಶವಗಳು ಪತ್ತೆಯಾಗಿದ್ದು, ಉಳಿದ ಮೂವರ ಮೃತದೇಹಗಳಿಗಾಗಿ ಸ್ಥಳೀಯ ಮೀನುಗಾರರು ಮತ್ತು ಈಜುಗಾರರ ನೆರವಿನೊಂದಿಗೆ ನದಿಯಲ್ಲಿ ತೀವ್ರ ಶೋಧ ಕಾರ್ಯ ಮುಂದುವರಿದಿದೆ. ಘಟನಾ ಸ್ಥಳಕ್ಕೆ ಎಮ್ಮಿಗನೂರು ಡಿವೈಎಸ್‌ಪಿ ಭಾರ್ಗವಿ ಅವರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಮಂತ್ರಾಲಯ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.

ರಾಜ್ಯದಲ್ಲಿ ಮಾಸದ ಜಲ ದುರಂತಗಳ ಸರಣಿ!

​ಕಳೆದ ಕೆಲವು ದಿನಗಳಿಂದ ರಾಜ್ಯದ ಬೇರೆ ಬೇರೆ ಭಾಗಗಳಲ್ಲಿ ಸರಣಿ ಜಲ ದುರಂತಗಳು ಸಂಭವಿಸುತ್ತಿರುವುದು ಸಾರ್ವಜನಿಕರಲ್ಲಿ ಆತಂಕ ಮೂಡಿಸಿದೆ.

ಭಟ್ಕಳ ದುರಂತ (11 ಸಾವು): ಉತ್ತರ ಕನ್ನಡ ಜಿಲ್ಲೆಯ ಭಟ್ಕಳದ ಸಮೀಪ ಕಪ್ಪೆಚಿಪ್ಪು ಹೆಕ್ಕಲು ನದಿಗೆ ಇಳಿದಿದ್ದಾಗ ಏಕಾಏಕಿ ನೀರಿನ ಮಟ್ಟ ಹೆಚ್ಚಾಗಿ ಮಹಿಳೆಯರು ಸೇರಿದಂತೆ ಬರೋಬ್ಬರಿ 11 ಮಂದಿ ನೀರಿನ ರಭಸಕ್ಕೆ ಕೊಚ್ಚಿಹೋಗಿ ಮೃತಪಟ್ಟಿದ್ದರು.

ಧಾರವಾಡ ದುರಂತ (3 ಸಾವು): ನಿನ್ನೆಯಷ್ಟೇ (ಮೇ 30) ಧಾರವಾಡ ತಾಲೂಕಿನ ಸಿಂಗನಹಳ್ಳಿ ಗ್ರಾಮದ ಕೆರೆಯಲ್ಲಿ ಈಜಲು ಹೋದ ಮೂವರು ಶಾಲಾ ಬಾಲಕರು ನೀರುಪಾಲಾಗಿದ್ದರು.

​ಈ ಘಟನೆಗಳ ಬೆನ್ನಲ್ಲೇ ಮಂತ್ರಾಲಯದಲ್ಲಿ ಇಂದು ನಡೆದಿರುವ ಭೀಕರ ದುರಂತವು ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟುವಂತೆ ಮಾಡಿದೆ. ನದಿ ಹಾಗೂ ಕೆರೆಗಳ ಆಳ ತಿಳಿಯದೇ ಸಾರ್ವಜನಿಕರು ನೀರಿಗೆ ಇಳಿಯಬಾರದು ಎಂದು ಪೊಲೀಸ್ ಇಲಾಖೆ ಮತ್ತೊಮ್ಮೆ ಕಟ್ಟುನಿಟ್ಟಿನ ಮನವಿ ಮಾಡಿದೆ.