S Shorts

ಕೇಂದ್ರದಿಂದ ರಾಜ್ಯದ ತೋತಾಪುರಿ ಮಾವು ಬೆಳೆಗಾರರಿಗೆ ಭರ್ಜರಿ ಸಿಹಿಸುದ್ದಿ: ಪ್ರತಿ ಕ್ವಿಂಟಾಲ್‌ಗೆ 1,750 ರೂ. ಸಹಾಯಧನ ಘೋಷಣೆ!

ಕೇಂದ್ರದಿಂದ ರಾಜ್ಯದ ತೋತಾಪುರಿ ಮಾವು ಬೆಳೆಗಾರರಿಗೆ ಭರ್ಜರಿ ಸಿಹಿಸುದ್ದಿ: ಪ್ರತಿ ಕ್ವಿಂಟಾಲ್‌ಗೆ 1,750 ರೂ. ಸಹಾಯಧನ ಘೋಷಣೆ!
Author: Sagaradventure
Posted By: Sagaradventure
Updated: Jun 25, 2026 | 3:02 PM

ಹವಾಮಾನ ವೈಪರೀತ್ಯ ಹಾಗೂ ಮಾರುಕಟ್ಟೆಯಲ್ಲಿ ದಿಢೀರ್ ಬೆಲೆ ಕುಸಿತದಿಂದ ಕಂಗಾಲಾಗಿದ್ದ ರಾಜ್ಯದ ತೋತಾಪುರಿ ಮಾವು ಬೆಳೆಗಾರರಿಗೆ ಕೇಂದ್ರ ಸರ್ಕಾರ ಭರ್ಜರಿ ಸಿಹಿಸುದ್ದಿ ನೀಡಿದೆ. ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಅವರ ವಿಶೇಷ ಮನವಿಗೆ ಸ್ಪಂದಿಸಿರುವ ಕೇಂದ್ರ ಕೃಷಿ ಸಚಿವಾಲಯವು, ರೈತರ ನೆರವಿಗೆ ಧಾವಿಸಿದ್ದು ಪ್ರತಿ ಕ್ವಿಂಟಾಲ್ ತೋತಾಪುರಿ ಮಾವಿಗೆ 1,750 ರೂಪಾಯಿ ಸಹಾಯಧನವನ್ನು ಘೋಷಣೆ ಮಾಡುವ ಮೂಲಕ ಅನ್ನದಾತರ ಮೊಗದಲ್ಲಿ ಮಂದಹಾಸ ಮೂಡಿಸಿದೆ.

ಈ ಕುರಿತು ತಮ್ಮ ಅಧಿಕೃತ ಸಾಮಾಜಿಕ ಜಾಲತಾಣದಲ್ಲಿ ಮಾಹಿತಿ ಹಂಚಿಕೊಂಡಿರುವ ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ, ಮಾವು ಬೆಳೆಗಾರರು ಎದುರಿಸುತ್ತಿರುವ ಆರ್ಥಿಕ ಸಂಕಷ್ಟವನ್ನು ಬಗೆಹರಿಸಲು ಬೆಲೆ ಕೊರತೆ ಪಾವತಿ ಯೋಜನೆಯ (PDPS) ಅಡಿಯಲ್ಲಿ ಬೆಂಬಲ ನೀಡುವಂತೆ ಕೇಂದ್ರ ಕೃಷಿ ಸಚಿವ ಶಿವರಾಜ್ ಸಿಂಗ್ ಚೌಹಾಣ್ ಅವರಿಗೆ ಪತ್ರ ಬರೆದು ಮನವಿ ಮಾಡಿದ್ದಾಗಿ ತಿಳಿಸಿದ್ದಾರೆ. ಈ ಮನವಿಗೆ ತಕ್ಷಣವೇ ಸಕಾರಾತ್ಮಕವಾಗಿ ಸ್ಪಂದಿಸಿರುವ ಕೃಷಿ ಸಚಿವರು, ಮಾರುಕಟ್ಟೆ ಹಸ್ತಕ್ಷೇಪ ಯೋಜನೆಯ (MIS) ಅಡಿಯಲ್ಲಿ ಬರೋಬ್ಬರಿ 1,30,000 ಮೆಟ್ರಿಕ್ ಟನ್ ತೋತಾಪುರಿ ಮಾವಿಗೆ ರೈತರಿಗೆ ನೇರವಾಗಿ ಸಹಾಯಧನ ನೀಡಲು ಅಧಿಕೃತ ಅನುಮೋದನೆ ನೀಡಿದ್ದಾರೆ.

ರಾಜ್ಯದ ಸಾವಿರಾರು ರೈತ ಕುಟುಂಬಗಳ ಆರ್ಥಿಕ ಸ್ಥಿರತೆಯನ್ನು ಕಾಪಾಡುವ ದೃಷ್ಟಿಯಿಂದ ತೆಗೆದುಕೊಂಡಿರುವ ಈ ಮಹತ್ವದ ನಿರ್ಧಾರಕ್ಕಾಗಿ ಪ್ರಧಾನಿ ನರೇಂದ್ರ ಮೋದಿ ಹಾಗೂ ಕೃಷಿ ಸಚಿವ ಶಿವರಾಜ್ ಸಿಂಗ್ ಚೌಹಾಣ್ ಅವರಿಗೆ ಪ್ರಲ್ಹಾದ್ ಜೋಶಿ ಅವರು ಕರ್ನಾಟಕದ ಸಮಸ್ತ ರೈತರ ಪರವಾಗಿ ಹೃತ್ಪೂರ್ವಕ ಧನ್ಯವಾದಗಳನ್ನು ಅರ್ಪಿಸಿದ್ದಾರೆ. ಕೇಂದ್ರ ಸರ್ಕಾರದ ಈ ಸಕಾಲಿಕ ಆರ್ಥಿಕ ನೆರವು ಸಂಕಷ್ಟದಲ್ಲಿರುವ ಮಾವು ಬೆಳೆಗಾರರ ಆತ್ಮವಿಶ್ವಾಸವನ್ನು ಹೆಚ್ಚಿಸಲಿದ್ದು, ಮಾರುಕಟ್ಟೆಯಲ್ಲಿನ ಬೆಲೆ ಕುಸಿತದ ನಷ್ಟವನ್ನು ಭರಿಸಲು ದೊಡ್ಡ ಮಟ್ಟದಲ್ಲಿ ಸಹಕಾರಿಯಾಗಲಿದೆ.