ಬೆಂಗಳೂರು: ಸಿಲಿಕಾನ್ ಸಿಟಿಯ ಮಾಂಸಾಹಾರಿ ಪ್ರಿಯರಿಗೆ ಈಗ ಬೆಲೆ ಏರಿಕೆಯ ಬಿಸಿ ತಟ್ಟಿದ್ದು, ನಗರದಲ್ಲಿ ಕೋಳಿ ಮಾಂಸದ ದರ ಗಗನಕ್ಕೇರಿದೆ. ಕಳೆದ ಡಿಸೆಂಬರ್ ತಿಂಗಳಲ್ಲಿ ಕೆಜಿಗೆ ಸುಮಾರು 260 ರಿಂದ 280 ರೂಪಾಯಿ ಆಸುಪಾಸಿನಲ್ಲಿದ್ದ ಚಿಕನ್ ಬೆಲೆ, ಈಗ ದಿಢೀರನೆ ಏರಿಕೆಯಾಗಿ 340 ರಿಂದ 350 ರೂಪಾಯಿಗಳ ಗಡಿಯನ್ನು ದಾಟಿದೆ.
ಪ್ರಮುಖವಾಗಿ ‘ವಿತೌಟ್ ಸ್ಕಿನ್’ ( Without Skin )ಚಿಕನ್ ಸೇವಿಸುವವರಿಗೆ ಇದು ಶಾಕಿಂಗ್ ಸುದ್ದಿಯಾಗಿದ್ದು, ಪೂರೈಕೆಯಲ್ಲಿ ಇದೇ ರೀತಿಯ ವ್ಯತ್ಯಯ ಮುಂದುವರಿದರೆ ಮುಂದಿನ ದಿನಗಳಲ್ಲಿ ಬೆಲೆ 380 ರೂಪಾಯಿಗಳವರೆಗೂ ಏರಿಕೆಯಾಗುವ ಸಾಧ್ಯತೆಯಿದೆ ಎಂದು ಮಾರುಕಟ್ಟೆ ಮೂಲಗಳು ಅಂದಾಜಿಸಿವೆ.
ಈ ಬೆಲೆ ಏರಿಕೆಗೆ ( Price Hike) ಮುಖ್ಯವಾಗಿ ನೆರೆರಾಜ್ಯಗಳಾದ ತಮಿಳುನಾಡು ಮತ್ತು ಆಂಧ್ರಪ್ರದೇಶಗಳಲ್ಲಿನ ಕೋಳಿ ಸಾಕಾಣಿಕೆದಾರರ ಪ್ರತಿಭಟನೆಯೇ ಕಾರಣವಾಗಿದೆ. ಕೋಳಿ ಸಾಕಾಣಿಕೆಯ ನಿರ್ವಹಣಾ ವೆಚ್ಚ ಹೆಚ್ಚಾಗುತ್ತಿರುವುದರಿಂದ, ಸಂಬಂಧಪಟ್ಟ ಕಂಪನಿಗಳು ತಮಗೆ ಹೆಚ್ಚಿನ ಹಣ ನೀಡಬೇಕೆಂದು ಅಲ್ಲಿನ ರೈತರು ಪಟ್ಟು ಹಿಡಿದಿದ್ದಾರೆ. ಇದರಿಂದಾಗಿ ಉತ್ಪಾದನೆಯಲ್ಲಿ ಗಣನೀಯ ಕುಸಿತ ಕಂಡುಬಂದಿದ್ದು, ಬೆಂಗಳೂರಿನ ಮಾರುಕಟ್ಟೆಗೆ ಅಗತ್ಯವಿರುವ ಬೇಡಿಕೆಗೆ ತಕ್ಕಂತೆ ಚಿಕನ್ ಪೂರೈಕೆಯಾಗುತ್ತಿಲ್ಲ. ಕರ್ನಾಟಕದಾದ್ಯಂತ ತಮಿಳುನಾಡಿನಿಂದಲೇ ಅತಿ ಹೆಚ್ಚು ಕೋಳಿ ಪೂರೈಕೆಯಾಗುವುದರಿಂದ ಈ ಬಿಕ್ಕಟ್ಟು ಮತ್ತಷ್ಟು ತೀವ್ರಗೊಂಡಿದೆ.
ಈ ದರ ಏರಿಕೆಯ ನೇರ ಪರಿಣಾಮ ನಗರದ ನಾನ್-ವೆಜ್ ರೆಸ್ಟೋರೆಂಟ್‌ಗಳ (Non-Veg Restaurants)ಮೇಲೂ ಬೀರುವ ಆತಂಕ ಎದುರಾಗಿದೆ. ಚಿಕನ್ ಬೆಲೆ ಹೆಚ್ಚಾಗಿರುವುದರಿಂದ ಹೊಟೇಲ್ ಮಾಲೀಕರು ಅನಿವಾರ್ಯವಾಗಿ ಬಿರಿಯಾನಿ ಸೇರಿದಂತೆ ವಿವಿಧ ಚಿಕನ್ ಖಾದ್ಯಗಳ ಬೆಲೆಯನ್ನು ಹೆಚ್ಚಿಸಲು ನಿರ್ಧರಿಸಿದ್ದಾರೆ. ಇದರಿಂದ ಗ್ರಾಹಕರ ಜೇಬಿಗೆ ಕತ್ತರಿ ಬೀಳುತ್ತಿದ್ದು, ಭಾನುವಾರದ ಬಿರಿಯಾನಿ ಊಟ ಇನ್ಮುಂದೆ ಮತ್ತಷ್ಟು ದುಬಾರಿಯಾಗಲಿದೆ.
