S Shorts

Delhi Horror | ಪೊಲೀಸರ ಸೋಗಿನಲ್ಲಿ ಬಂದು ಅಪ್ರಾಪ್ತೆಯ ಮೇಲೆ 3 ಕಾಮುಕರಿಂದ ಸಾಮೂಹಿಕ ಅತ್ಯಾ*ಚಾರ!

Delhi Horror | ಪೊಲೀಸರ ಸೋಗಿನಲ್ಲಿ ಬಂದು ಅಪ್ರಾಪ್ತೆಯ ಮೇಲೆ 3 ಕಾಮುಕರಿಂದ ಸಾಮೂಹಿಕ ಅತ್ಯಾ*ಚಾರ!
Author: Sagaradventure
Posted By: Sagaradventure
Updated: Sep 22, 2026 | 10:45 AM

ರಾಷ್ಟ್ರರಾಜಧಾನಿ ನವದೆಹಲಿಯಲ್ಲಿ ಮತ್ತೊಂದು ಭೀಕರ ಅತ್ಯಾ*ಚಾರ ಪ್ರಕರಣ ವರದಿಯಾಗಿದ್ದು, ಕಲ್ಕಾಜಿ ಪ್ರದೇಶದ ಆಸ್ತಾ ಕುಂಜ್ ಪಾರ್ಕ್‌ನಲ್ಲಿ ಪೊಲೀಸರ ಸೋಗಿನಲ್ಲಿ ಬಂದ 3 ಮಂದಿ ದುಷ್ಕರ್ಮಿಗಳು 17 ವರ್ಷದ ಅಪ್ರಾ*ಪ್ತೆಯ ಮೇಲೆ ಸಾಮೂಹಿಕ ಅತ್ಯಾ*ಚಾರ ಎಸಗಿದ್ದಾರೆ. 

ಸೋಮವಾರ ಸಂಜೆ 7 ಗಂಟೆ ಸುಮಾರಿಗೆ ಸಂತ್ರಸ್ತೆಯು ತನ್ನ 17 ವರ್ಷದ ಸ್ನೇಹಿತನೊಂದಿಗೆ ಪ್ರಾರ್ಥನೆ ಸಲ್ಲಿಸಲು ಕಲ್ಕಾಜಿ ಮಂದಿರಕ್ಕೆ ತೆರಳಿದ್ದಳು. ದೇವರ ದರ್ಶನದ ಬಳಿಕ, ಸಂಜೆ 7:30 ರ ಸುಮಾರಿಗೆ ಇಬ್ಬರೂ ಕಲ್ಕಾಜಿ ಮತ್ತು ಇಸ್ಕಾನ್ ದೇವಾಲಯಗಳ ಸಮೀಪವಿರುವ ಆಸ್ತಾ ಕುಂಜ್ ಪಾರ್ಕ್‌ನಲ್ಲಿ ಕುಳಿತುಕೊಳ್ಳಲು ಹೋಗಿದ್ದರು. ಈ ವೇಳೆ ಅಲ್ಲಿಗೆ ಬಂದ 25 ರಿಂದ 30 ವರ್ಷ ವಯಸ್ಸಿನ 3 ಮಂದಿ ಅಪರಿಚಿತ ಯುವಕರು, ತಾವು ಪೊಲೀಸರು ಎಂದು ಹೇಳಿಕೊಂಡು ಈ ಹದಿಹರೆಯದ ಜೋಡಿಯನ್ನು ಬೆದರಿಸಲು ಆರಂಭಿಸಿದ್ದಾರೆ. ಅವರಲ್ಲೊಬ್ಬ ಯುವಕನನ್ನು ಬಲವಂತವಾಗಿ ಹಿಡಿದುಕೊಂಡರೆ, ಉಳಿದವರು ಅಪ್ರಾಪ್ತ ಬಾಲಕಿಯ ಮೇಲೆ ಉದ್ಯಾನವನದೊಳಗೆ ಲೈಂ*ಗಿಕ ದೌರ್ಜನ್ಯ ಎಸಗಿದ್ದಾರೆ. ಕೃತ್ಯದ ಬಳಿಕ ಇಬ್ಬರನ್ನೂ ಬಂಧಿಸುವ ಬೆದರಿಕೆ ಹಾಕಿ ದುಷ್ಕರ್ಮಿಗಳು ಅಲ್ಲಿಂದ ಪರಾರಿಯಾಗಿದ್ದಾರೆ.

ಘಟನೆ ಕುರಿತು ರಾತ್ರಿ 8:45 ರ ಸುಮಾರಿಗೆ ಪಿಸಿಆರ್ (PCR) ಕರೆ ಸ್ವೀಕರಿಸಿದ ಕೂಡಲೇ ದೆಹಲಿ ಪೊಲೀಸ್ ತಂಡವು ಸ್ಥಳಕ್ಕೆ ಧಾವಿಸಿದೆ. ಸಂತ್ರಸ್ತ ಬಾಲಕಿಯನ್ನು ರಕ್ಷಿಸಿ ತಕ್ಷಣವೇ ವೈದ್ಯಕೀಯ ಪರೀಕ್ಷೆಗೆ ಒಳಪಡಿಸಲಾಗಿದೆ. ಅಪ್ರಾಪ್ತೆಯ ಹೇಳಿಕೆಯನ್ನು ದಾಖಲಿಸಿಕೊಂಡಿರುವ ಪೊಲೀಸರು, ಆರೋಪಿಗಳ ವಿರುದ್ಧ ಲೈಂ*ಗಿಕ ಅಪರಾಧಗಳಿಂದ ಮಕ್ಕಳ ರಕ್ಷಣಾ ಕಾಯ್ದೆ (POCSO) ಮತ್ತು ಭಾರತೀಯ ನ್ಯಾಯ ಸಂಹಿತೆ (BNS) ಅಡಿಯಲ್ಲಿ ಕಠಿಣ ಪ್ರಕರಣ ದಾಖಲಿಸಿಕೊಂಡಿದ್ದಾರೆ. 

ಮಂಗಳವಾರ ಬೆಳಿಗ್ಗೆ ಕಾರ್ಯಾಚರಣೆ ನಡೆಸಿದ ಪೊಲೀಸರು ಓರ್ವ ಆರೋಪಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ತಲೆಮರೆಸಿಕೊಂಡಿರುವ ಉಳಿದ ಇಬ್ಬರು ಆರೋಪಿಗಳನ್ನು ಪತ್ತೆಹಚ್ಚಲು ವಿಶೇಷ ತಂಡಗಳನ್ನು ನಿಯೋಜಿಸಲಾಗಿದೆ. ಪರಾರಿಯಾಗಿರುವ ಆರೋಪಿಗಳನ್ನು ಗುರುತಿಸಲು ಆ ಪ್ರದೇಶದ ಸಿಸಿಟಿವಿ ದೃಶ್ಯಾವಳಿಗಳನ್ನು ತೀವ್ರವಾಗಿ ಪರಿಶೀಲಿಸಲಾಗುತ್ತಿದೆ ಹಾಗೂ ಘಟನೆಯ ಸಮಯದಲ್ಲಿ ಉದ್ಯಾನವನದಲ್ಲಿ ಅಥವಾ ಸುತ್ತಮುತ್ತಲಿನಲ್ಲಿದ್ದ ಜನರಿಂದ ಮಾಹಿತಿಯನ್ನು ಕಲೆಹಾಕಲಾಗುತ್ತಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ.