ಬೆಂಗಳೂರು: ಸ್ಯಾಂಡಲ್ವುಡ್ನ ಜನಪ್ರಿಯ ನಟ ಚಿಕ್ಕಣ್ಣ ಮುಖ್ಯ ಭೂಮಿಕೆಯಲ್ಲಿ ನಟಿಸಿರುವ ಬಹುನಿರೀಕ್ಷಿತ ‘ಲಕ್ಷ್ಮಿಪುತ್ರ’ ಚಿತ್ರದ “ಐ ಲವ್ ಯೂ ಪರಿಮಳ” ಎಂಬ ಲಿರಿಕಲ್ ವಿಡಿಯೋ ಹಾಡು ಅಧಿಕೃತವಾಗಿ ಬಿಡುಗಡೆಯಾಗಿದೆ.
ಪ್ರೇಕ್ಷಕರನ್ನು ಸೆಳೆಯುವ ಕ್ಯಾಚಿ ಟ್ಯೂನ್ ಹಾಗೂ ಆಕರ್ಷಕ ಸಾಹಿತ್ಯದಿಂದ ಕೂಡಿರುವ ಈ ಹಾಡಿಗೆ ಖ್ಯಾತ ಗಾಯಕ ನವೀನ್ ಸಜ್ಜು ಧ್ವನಿಯಾಗಿದ್ದು, ಅರ್ಜುನ್ ಜನ್ಯ ಸಂಗೀತ ಸಂಯೋಜನೆ ಮಾಡಿದ್ದಾರೆ. ಭರಪೂರ ಮನರಂಜನೆ ಹೊತ್ತು ತರುತ್ತಿರುವ ಈ ಸಿನಿಮಾ ಇದೇ ನವೆಂಬರ್ 27ರಂದು ರಾಜ್ಯಾದ್ಯಂತ ಚಿತ್ರಮಂದಿರಗಳಲ್ಲಿ ಅದ್ದೂರಿಯಾಗಿ ಬಿಡುಗಡೆಯಾಗಲಿದೆ.
ಖ್ಯಾತ ನಿರ್ದೇಶಕ ಎ.ಪಿ. ಅರ್ಜುನ್ ಅವರ ‘ಎಪಿ ಅರ್ಜುನ್ ಫಿಲ್ಮ್ಸ್’ ಬ್ಯಾನರ್ನಡಿಯಲ್ಲಿ ಅನ್ನಪೂರ್ಣ ಎ.ಪಿ. ಅರ್ಜುನ್ ಈ ಚಿತ್ರವನ್ನು ನಿರ್ಮಿಸಿದ್ದು, ರವಿಕಿರಣ್ ಎಂ. ಗೌಡ ಸಹ ನಿರ್ಮಾಪಕರಾಗಿ ಸಾಥ್ ನೀಡಿದ್ದಾರೆ. ಚಿತ್ರಕ್ಕೆ ವಿಜಯ್ ಎಸ್. ಸ್ವಾಮಿ ಆ್ಯಕ್ಷನ್ ಕಟ್ ಹೇಳಿದ್ದು, ನಿರ್ದೇಶಕರ ಜೊತೆಗೂಡಿ ಸ್ವತಃ ಎ.ಪಿ. ಅರ್ಜುನ್ ಅವರೇ ಕಥೆ, ಚಿತ್ರಕಥೆ ಮತ್ತು ಸಾಹಿತ್ಯ ರಚಿಸಿದ್ದಾರೆ. ಅಲ್ಲದೆ ಪ್ರಶಾಂತ್ ರಾಜಪ್ಪ ಹಾಗೂ ವಿಜಯ್ ಈಶ್ವರ್ ಅವರೊಂದಿಗೆ ಸೇರಿ ಸಂಭಾಷಣೆ ಗೀಚುವ ಜವಾಬ್ದಾರಿಯನ್ನೂ ಹೊತ್ತುಕೊಂಡಿದ್ದಾರೆ.
ಚಿತ್ರದಲ್ಲಿ ಚಿಕ್ಕಣ್ಣ ಹಾಗೂ ವಂದಿತಾ ಗೌಡ ಜೋಡಿಯಾಗಿ ಕಾಣಿಸಿಕೊಂಡಿದ್ದು, ಹಿರಿಯ ನಟಿ ತಾರಾ ಅನುರಾಧ, ಹಾಸ್ಯ ನಟರಾದ ಕುರಿ ಪ್ರತಾಪ್, ಧರ್ಮಣ್ಣ ಕಡೂರು, ಮಿತ್ರ ಹಾಗೂ ಮನು ಮುಂತಾದ ಪ್ರತಿಭಾವಂತ ಕಲಾವಿದರ ದೊಡ್ಡ ತಾರಾಗಣವೇ ಇದೆ. ಗಿರೀಶ್ ಆರ್. ಗೌಡ ಅವರ ಛಾಯಾಗ್ರಹಣ, ದೀಪು ಎಸ್. ಕುಮಾರ್ ಅವರ ಸಂಕಲನ, ಭೂಷಣ್ ಅವರ ನೃತ್ಯ ನಿರ್ದೇಶನ ಹಾಗೂ ಮಾಸ್ ಮಾದ ಅವರ ಸಾಹಸ ನಿರ್ದೇಶನ ಈ ಚಿತ್ರಕ್ಕಿದೆ.
