ಶಿವಮೊಗ್ಗ: ಇರಾನ್‌ನ ಸರ್ವೋಚ್ಚ ನಾಯಕ ಅಯಾತುಲ್ಲಾ ಅಲಿ ಖಮೇನಿ ಅವರ ಹತ್ಯೆಯನ್ನು ರಾಜ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯ ತೀವ್ರವಾಗಿ ಖಂಡಿಸಿದ್ದಾರೆ. ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ದ್ವಂದ್ವ ನೀತಿಯ ವಿರುದ್ಧ ತೀವ್ರ ವಾಗ್ದಾಳಿ ನಡೆಸಿರುವ ಅವರು, ಒಂದೆಡೆ ಶಾಂತಿಯ ಮಂತ್ರ ಪಠಿಸುತ್ತಾ, ಮತ್ತೊಂದೆಡೆ ಯುದ್ಧಕ್ಕೆ ಪ್ರಚೋದನೆ ನೀಡುತ್ತಿರುವ ಅಮೆರಿಕದ ನಡೆ ಸರಿಯಲ್ಲ ಎಂದು ಕಿಡಿಕಾರಿದ್ದಾರೆ.
ಶಿವಮೊಗ್ಗದ ಊರಗಡೂರಿನಲ್ಲಿ ಇತ್ತೀಚೆಗೆ ಕೊಲೆಯಾದ ಬಾಲಕನ ಕುಟುಂಬಕ್ಕೆ ಭೇಟಿ ನೀಡಿದ ಸಿಎಂ ಸಿದ್ದರಾಮಯ್ಯ, ಮೃತನ ಕುಟುಂಬಕ್ಕೆ ಸಾಂತ್ವನ ಹೇಳಿ 15 ಲಕ್ಷ ರೂ.ಗಳ ಪರಿಹಾರದ ಚೆಕ್ ವಿತರಿಸಿದರು. ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಇರಾನ್ ನಾಯಕ ಖಮೇನಿ ಸಾವಿಗೆ ಸಂತಾಪ ಸೂಚಿಸಿ ಅವರ ಆತ್ಮಕ್ಕೆ ಶಾಂತಿ ಕೋರಿದರು.
ಈ ಸಂದರ್ಭದಲ್ಲಿ ಅಮೆರಿಕದ ನಡೆಯನ್ನು ಕಟುವಾಗಿ ಟೀಕಿಸಿದ ಅವರು, “ಖಮೇನಿ ಅವರ ಹತ್ಯೆ ಖಂಡನೀಯ. ಅಮೆರಿಕ ಅಧ್ಯಕ್ಷ ಟ್ರಂಪ್ ಅವರು ಶಾಂತಿ ಮತ್ತು ಯುದ್ಧ ಎರಡನ್ನೂ ಒಟ್ಟಿಗೆ ಮಾಡುತ್ತಾ ದ್ವಂದ್ವ ನೀತಿ ಅನುಸರಿಸುತ್ತಿದ್ದಾರೆ. ಜಾಗತಿಕ ಮಟ್ಟದಲ್ಲಿ ಈ ಯುದ್ಧದ ಅಗತ್ಯ ಖಂಡಿತವಾಗಿಯೂ ಇರಲಿಲ್ಲ” ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಇದೇ ವೇಳೆ, ಮಧ್ಯಪ್ರಾಚ್ಯದಲ್ಲಿ ಯುದ್ಧದ ಕಾರ್ಮೋಡ ಕವಿದಿರುವ ಹಿನ್ನೆಲೆಯಲ್ಲಿ ಅಲ್ಲಿ ಸಿಲುಕಿರುವ ಕನ್ನಡಿಗರ ಪರಿಸ್ಥಿತಿ ಕುರಿತು ಪ್ರತಿಕ್ರಿಯಿಸಿದ ಮುಖ್ಯಮಂತ್ರಿಗಳು, “ಯುದ್ಧದ ಭೀತಿಯಿಂದ ಸಂಕಷ್ಟಕ್ಕೆ ಸಿಲುಕಿರುವ ನಮ್ಮ ರಾಜ್ಯದ ಜನರ ರಕ್ಷಣೆಗೆ ಸರ್ಕಾರ ಈಗಾಗಲೇ ಎಲ್ಲಾ ಅಗತ್ಯ ಕ್ರಮಗಳನ್ನು ಕೈಗೊಂಡಿದೆ. ಯಾರೂ ಆತಂಕಪಡುವ ಅಗತ್ಯವಿಲ್ಲ” ಎಂದು ಜನತೆಗೆ ಅಭಯ ನೀಡಿದರು.
ಇನ್ನು, ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಸಂಪೂರ್ಣ ಹದಗೆಟ್ಟಿದೆ ಎಂಬ ವಿರೋಧ ಪಕ್ಷಗಳ ಟೀಕೆಗಳಿಗೆ ತಿರುಗೇಟು ನೀಡಿದ ಅವರು, “ಸರ್ಕಾರದ ವಿರುದ್ಧ ಕೇವಲ ಟೀಕೆ ಮಾಡುವುದೇ ವಿಪಕ್ಷಗಳ ಕೆಲಸವಾಗಿದೆ” ಎಂದು ಲೇವಡಿ ಮಾಡಿದರು.
