S Shorts

ಧರ್ಮಸ್ಥಳದಲ್ಲಿ ಶಾಸಕರ ಆಣೆ-ಪ್ರಮಾಣದಿಂದ ಹಿಂದೆ ಸರಿದ ಬಿಜಿಪಿ ನಾಯಕರು!

ಧರ್ಮಸ್ಥಳದಲ್ಲಿ ಶಾಸಕರ ಆಣೆ-ಪ್ರಮಾಣದಿಂದ ಹಿಂದೆ ಸರಿದ ಬಿಜಿಪಿ ನಾಯಕರು!
Author: Meghana Gowda
Posted By: Meghana Gowda
Updated: Jun 23, 2026 | 1:17 PM

ನವದೆಹಲಿ/ಬೆಂಗಳೂರು: ಎಂಎಲ್‌ಸಿ ಚುನಾವಣೆಯಲ್ಲಿ ನಡೆದ ಆಘಾತಕಾರಿ ಅಡ್ಡಮತದಾನದ (Cross-voting) ಬೆನ್ನಲ್ಲೇ ತೀವ್ರ ಆಕ್ರೋಶಗೊಂಡಿರುವ ಬಿಜೆಪಿ ಹೈಕಮಾಂಡ್ ಸೂಚನೆಗೆ ಮಣಿದಿರುವ ರಾಜ್ಯ ನಾಯಕರು, ಧರ್ಮಸ್ಥಳದಲ್ಲಿ ನಡೆಸಲುದ್ದೇಶಿಸಿದ್ದ ಆಣೆ-ಪ್ರಮಾಣದ ರಾಜಕೀಯ ಮತ್ತು ಶಾಸಕಾಂಗ ಪಕ್ಷದ ಸಭೆಯಿಂದ ಅಧಿಕೃತವಾಗಿ ಹಿಂದೆ ಸರಿದಿದ್ದಾರೆ. ಧರ್ಮಸ್ಥಳದಲ್ಲಿ ಬಿಜೆಪಿ ಶಾಸಕಾಂಗ ಸಭೆ ನಡೆಸುವುದಿಲ್ಲ ಎಂದು ವಿಧಾನಸಭೆ ವಿರೋಧ ಪಕ್ಷದ ನಾಯಕ ಆರ್. ಅಶೋಕ್ ಸ್ಪಷ್ಟಪಡಿಸಿದ್ದಾರೆ.

ಪವಿತ್ರ ಕ್ಷೇತ್ರ ಧರ್ಮಸ್ಥಳವನ್ನು ರಾಜಕೀಯ ಆಖಾಡವನ್ನಾಗಿ ಪರಿವರ್ತಿಸುವುದು ಬೇಡ ಎಂಬ ಕಾರಣಕ್ಕೆ ಈ ನಿರ್ಧಾರ ಕೈಗೊಳ್ಳಲಾಗಿದೆ ಎಂದು ತಿಳಿಸಿದ ಆರ್. ಅಶೋಕ್, “ಪಕ್ಷದ ಆಂತರಿಕ ವಿಚಾರಗಳನ್ನು ಬಹಿರಂಗವಾಗಿ ಚರ್ಚಿಸದೆ, ಪಕ್ಷದ ಸೂಕ್ತ ವೇದಿಕೆಯಲ್ಲಿಯೇ ಚರ್ಚಿಸಿ ಬಗೆಹರಿಸಿಕೊಳ್ಳಲಾಗುವುದು” ಎಂದಿದ್ದಾರೆ. ವರಿಷ್ಠರ ತೀವ್ರ ಆಕ್ರೋಶ ಹಾಗೂ ಖಡಕ್ ಸೂಚನೆಯ ಬೆನ್ನಲ್ಲೇ ಎಚ್ಚೆತ್ತುಕೊಂಡಿರುವ ರಾಜ್ಯ ಬಿಜೆಪಿ ನಾಯಕರು ಸಭೆಯನ್ನು ರದ್ದುಗೊಳಿಸುವ ತೀರ್ಮಾನಕ್ಕೆ ಬಂದಿದ್ದಾರೆ.

ಇದೇ ವೇಳೆ ಅಡ್ಡಮತದಾನದ ಮೂಲಕ ಪಕ್ಷದ ಅಭ್ಯರ್ಥಿ ವಿರುದ್ಧ ಕೆಲಸ ಮಾಡಿ ದ್ರೋಹ ಬಗೆದವರ ವಿರುದ್ಧ ಆರ್. ಅಶೋಕ್ ತೀವ್ರ ವಾಗ್ದಾಳಿ ನಡೆಸಿದ್ದಾರೆ. “ಎಂಎಲ್‌ಸಿ ಚುನಾವಣೆಯಲ್ಲಿ ಪಕ್ಷಕ್ಕೆ ಮೋಸ ಮಾಡಿದವರ ವಿರುದ್ಧ ಕಠಿಣ ಶಿಸ್ತುಕ್ರಮ ತೆಗೆದುಕೊಳ್ಳಲಾಗುವುದು. ಯಾರು ಪಕ್ಷದ ಶಿಸ್ತು ಉಲ್ಲಂಘಿಸಿ ದ್ರೋಹ ಬಗೆದಿದ್ದಾರೋ ಅವರಿಗೆ ತಕ್ಕ ಬುದ್ಧಿ ಕಲಿಸುತ್ತೇವೆ. ಇಂತಹ ದುಷ್ಕೃತ್ಯವನ್ನು ಭವಿಷ್ಯದಲ್ಲಿ ಯಾರೂ ಮತ್ತೆ ಮಾಡಲು ಧೈರ್ಯ ಮಾಡಬಾರದು, ಆ ರೀತಿಯ ಕಠಿಣ ಪಾಠ ಕಲಿಸಲಾಗುವುದು” ಎಂದು ಅವರು ಖಡಕ್ ಎಚ್ಚರಿಕೆ ನೀಡಿದ್ದಾರೆ.